Headlines

ಎಜೆಂಟರ ದಂಧೆಗೆ ಬ್ರೇಕ್: ‘ಇ-ಖಾತೆ’ಗೆ ಸಿಂಗಲ್ ವಿಂಡೋ ವ್ಯವಸ್ಥೆ


ಎಜೆಂಟರ ದಂಧೆಗೆ ಬ್ರೇಕ್:

ಬೆಳಗಾವಿ ಪಾಲಿಕೆಯಲ್ಲಿ ‘ಇ-ಖಾತೆ’ಗೆ ಸಿಂಗಲ್ ವಿಂಡೋ ವ್ಯವಸ್ಥೆ
ಆಯುಕ್ತೆ ಶುಭ ಬಿ ಅವರ ಧಿಟ್ಟಿನ ನಿರ್ಧಾರದಿಂದ ಸಾರ್ವಜನಿಕ ಸೇವೆಗೆ ಪಾರದರ್ಶಕತೆ, ಜನವಿಶ್ವಾಸಕ್ಕೆ ಬಲ

ಬೆಳಗಾವಿ

ವರ್ಷಗಳ ಕಾಲ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬೆಳೆದಿದ್ದ ‘ಇ-ಖಾತೆ’ ಏಜೆಂಟರ ದಂಧೆಗೆ ಕೊನೆಗೊಳ್ಳುವ ಸಾಧ್ಯತೆ ಮೂಡಿಸಿದೆ.

ಪಾಲಿಕೆ ಆಯುಕ್ತೆ ಶುಭ ಬಿ ಅವರು ಈ ಬಗ್ಗೆ ಕೈಗೊಂಡ ಹೊಸ ಕ್ರಮದಿಂದಾಗಿ, ಇ-ಖಾತೆ ಸೇವೆಗೆ ಪಾರದರ್ಶಕತೆ ಮತ್ತು ವೇಗ ತರುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಇಡಲಾಗಿದೆ.

ಇತ್ತೀಚೆಗೆ ಇ-ಖಾತೆ ದಾಖಲೆಗಳ ಪ್ರಕ್ರಿಯೆಯಲ್ಲಿ ಏಜೆಂಟರ ಅವ್ಯಾಹತ ಹಸ್ತಕ್ಷೇಪ, ಸಾರ್ವಜನಿಕರಿಂದ ಹಣ ಪಡೆಯುವ ದಂಧೆ, ಹಾಗೂ ದಾಖಲೆಗಳಲ್ಲಿ ಅಸಾಧ್ಯ ಗೊಂದಲಗಳು ಜನರ ಅಸಹನೆಗೆ ಕಾರಣವಾಗಿದ್ದವು. ಈ ಸಮಸ್ಯೆಯು ಶಾಸಕ ಅಭಯ ಪಾಟೀಲ ಅವರ ತನಕ ತಲುಪಿದ್ದು, ಅವರು ಕಳೆದ ಸಾಮಾನ್ಯ ಸಭೆಯಲ್ಲಿ ಈ ಕುರಿತಂತೆ ಗಂಭೀರವಾಗಿ ವಿಷಯ ಪ್ರಸ್ತಾಪಿಸಿದ್ದರು.


ಆಯುಕ್ತೆಯ ಹಠಾತ್ ಭೇಟಿ —

ಆಯುಕ್ತೆ ಶುಭ ಬಿ ಅವರು ಯಾವುದೇ ಮುನ್ಸೂಚನೆಯಿಲ್ಲದೆ ವಿವಿಧ ವಲಯ ಕಚೇರಿಗಳಿಗೆ ಭೇಟಿ ನೀಡಿದರು. ಪರಿಶೀಲನೆ ವೇಳೆ ಹಲವಾರು ಸಂಗತಿಗಳು ಗಮನಕ್ಕೆ ಬಂದವು. ಕೆಲ ಏಜೆಂಟರು ತಮ್ಮದಲ್ಲದ ಆಸ್ತಿಗಳ 20ಕ್ಕೂ ಹೆಚ್ಚು ದಾಖಲೆಗಳನ್ನು ಒಟ್ಟುಗೂಡಿಸಿ ಪ್ರಕ್ರಿಯೆ ನಡೆಸುತ್ತಿರುವುದು ಕಂಡು ಬಂದಿತ್ತು.

ಈ ಸಂದರ್ಭದಲ್ಲಿ ಆಯುಕ್ತರು ತಕ್ಷಣ ಕ್ರಮ ಕೈಗೊಂಡು, ಎಲ್ಲ ವಲಯ ಕಚೇರಿಗಳ ಇ-ಖಾತೆ ಸೇವೆ ಸ್ಥಗಿತಗೊಳಿಸಿ, ಪಾಲಿಕೆ ಕೇಂದ್ರ ಕಚೇರಿಯಲ್ಲಿ ‘ಸಿಂಗಲ್ ವಿಂಡೋ’ ವ್ಯವಸ್ಥೆ ಜಾರಿಗೆ ತರುತ್ತಿರುವ ಮಹತ್ವದ ನಿರ್ಧಾರ ಪ್ರಕಟಿಸಿದರು.


ಹೊಸ ವ್ಯವಸ್ಥೆಯ ಲಕ್ಷಣಗಳು

ಹೊಸ ವ್ಯವಸ್ಥೆಯಲ್ಲಿ, ಇ-ಖಾತೆ ಸಂಬಂಧಿತ ಎಲ್ಲಾ ದಾಖಲೆಗಳ ಸ್ವೀಕೃತಿಯು ಈಗ ಸಿಂಗಲ್ ವಿಂಡೋ ಮೂಲಕ ನಡೆಯಲಿದೆ. ಇಲ್ಲಿ ವಲಯ ಮಟ್ಟದಲ್ಲಿ ಪರಿಣಿತರಾಗಿದ್ದ ಸಿಬ್ಬಂದಿಯನ್ನೇ ನಿಯೋಜಿಸಿ, ಸರಿಯಾದ ದಾಖಲೆಗಳಿಗೆ ತ್ವರಿತ ಅನುಮೋದನೆ ದೊರಕುವಂತೆ ವ್ಯವಸ್ಥೆ ಮಾಡಲಾಗಿದೆ.

ಒಂದು ವೇಳೆ ದಾಖಲೆ ಸರಿಯಾಗಿದ್ದರೆ, ಎರಡು ದಿನಗಳೊಳಗಾಗಿ ಇ-ಖಾತೆ ದಾಖಲಾತಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಇದರಿಂದ ಸಾರ್ವಜನಿಕರು ಇನ್ನು ಮುಂದೆ ಏಜೆಂಟರ ಹಿಂದೆ ಓಡಾಡಬೇಕಾಗಿರುವುದಿಲ್ಲ ಎಂಬುದು ಆಯುಕ್ತರ ಆಶಯ.


ತೆರಿಗೆ ವಸೂಲಿಗೂ ಹೊಸ ಶಕ್ತಿಯುತ ತಂತ್ರ

ಪಾಲಿಕೆಯಲ್ಲಿ ಭದ್ರತೆ, ಶಿಸ್ತು ಹಾಗೂ ಆದಾಯ ವೃದ್ಧಿಗೆ ಸಹಾಯಕವಾಗುವಂತೆ, ಆಯುಕ್ತರು ಬಿಲ್ ಕಲೆಕ್ಟರ್‌ಗಳನ್ನು ಮನೆ ಮನೆಗೆ ತೆರಳಿ ಬಾಕಿ ತೆರಿಗೆ ವಸೂಲಿಗೆ ನಿಯೋಜಿಸಿದ್ದಾರೆ. ಕಂದಾಯ ನಿರೀಕ್ಷಕರನ್ನು ಕಟ್ಟಡಗಳ ಮೌಲ್ಯಮಾಪನ ಹಾಗೂ ಆಸ್ತಿ ತೆರಿಗೆ ಪುನರ್ ಪರಿಶೀಲನೆಗೆ ಬಳಸಲಾಗುತ್ತಿದೆ. ಇದರಿಂದ ಪಾಲಿಕೆಯ ಆದಾಯದಲ್ಲಿ ಗಣನೀಯ ವೃದ್ಧಿ ನಿರೀಕ್ಷಿಸಲಾಗಿದೆ.


ಜನಸೇವೆಯಲ್ಲಿ ಭ್ರಷ್ಟಾಚಾರದ ಎಡೆಗೆ ಗಟ್ಟಿ ದಿಟ್ಟ ನಿರ್ಧಾರದಿಂದ ಮೂಡಬಹುದಾದ ಶುದ್ಧಚಿಕಿತ್ಸೆಯ ನಿದರ್ಶನವೇ ಬೆಳಗಾವಿ ಪಾಲಿಕೆ ಅನುಸರಿಸುತ್ತಿರುವ ಹೊಸ ದಿಕ್ಕು. ಇಂತಹ ಕ್ರಮಗಳು ಉಳಿದ ನಗರ ಪಾಲಿಕೆಗಳಿಗೆ ಮಾದರಿಯಾದರೆ ಆಶ್ಚರ್ಯವಿಲ್ಲ. ಆಯುಕ್ತೆ ಶುಭ ಬಿ ಅವರ ಕಾರ್ಯಕ್ಕೆ ಸಮರ್ಥನೆ ದೊರೆಯುವಲ್ಲಿ ಸಾರ್ವಜನಿಕರ ಸಹಕಾರವೂ ನಿರ್ಣಾಯಕವಾಗಿದೆ.


Leave a Reply

Your email address will not be published. Required fields are marked *

error: Content is protected !!