ಅಡವಿ ಸಿದ್ದೇಶ್ವರ ಮಠದ ವಿವಾದ ಸುಖಾಂತ್ಯ’ ಗೋಕಾಕ: ಮೂಡಲಗಿ ತಾಲೂಕಿನ ಶಿವಾಪೂರ (ಹ) ಗ್ರಾಮದ ಪ್ರಸಿದ್ಧ ಅಡವಿ ಸಿದ್ದೇಶ್ವರ ಮಠದ ಶ್ರೀ ಅಡವಿ ಸಿದ್ದರಾಮ ಸ್ವಾಮೀಜಿಯವರ ಕುರಿತಂತೆ ಭಕ್ತರಲ್ಲಿ ಉಂಟಾದ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಗೋಕಾಕ ನಗರದ ಶೂನ್ಯ ಸಂಪಾದನ ಮಠದಲ್ಲಿ ಗುರುವಾರ ಸಂಜೆ ನಡೆದ ಮಹತ್ವದ ಸಭೆಯಲ್ಲಿ ಅರಭಾವಿ ಶಾಸಕ ಹಾಗೂ ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನೇತೃತ್ವ ವಹಿಸಿದ್ದರು. ಈ ಸಭೆಯಲ್ಲಿ ವಿವಿಧ ಮಠಗಳ ಶ್ರೀಗಳು ಹಾಗೂ ಗ್ರಾಮ ಮುಖಂಡರು ಭಾಗವಹಿಸಿದ್ದರು.
ಆಂತರಿಕ ತನಿಖಾ ವರದಿ ಹಾಗೂ ಪೊಲೀಸ್ ಗುಪ್ತಚರ ಇಲಾಖೆ ವರದಿ ಆಧಾರದಲ್ಲಿ ಅಡವಿ ಸಿದ್ದರಾಮ ಸ್ವಾಮೀಜಿಯವರ ವಿರುದ್ಧ ಬಂದಿದ್ದ ಎಲ್ಲಾ ಆಪಾದನೆಗಳು ಸುಳ್ಳು ಎಂದು ಸ್ಪಷ್ಟವಾಗಿದೆ. ಈ ಮೂಲಕ ಶ್ರೀಗಳಿಗೆ ಮಠದಲ್ಲೇ ಸೇವಾ ಕಾರ್ಯ ಮುಂದುವರಿಸಲು ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ.
ಆರೋಪ ಸುಳ್ಳು..! ಸಭೆಯ ಬಳಿಕ ಶಾಸಕ ಬಾಲಚಂದ್ರ ಜಾರಕಿಹೊಳಿ ಸುದ್ದಿಗಾರರೊಂದಿಗೆ ಮಾತನಾಡಿ, ಶ್ರೀಗಳ ವಿರುದ್ಧ ಬಂದಿದ್ದ ಆಪಾದನೆಗಳನ್ನು ಗಂಭೀರವಾಗಿ ಪರಿಗಣಿಸಿ, ಪೊಲೀಸ್ ತನಿಖೆ ನಡೆಯಲು ಒತ್ತಾಯಿಸಿದ್ದೆವು.
ವರದಿಯು ಶ್ರೀಗಳ ವಿರೋಧಿ ಆರೋಪಗಳು ಸುಳ್ಳು ಎಂದು ದೃಢಪಡಿಸಿದೆ. ಹೀಗಾಗಿ ಇದೀಗ ಭಕ್ತರಲ್ಲಿ ಮೂಡಿದ್ದ ಗೊಂದಲಕ್ಕೆ ತೆರೆ ಬಿದ್ದಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇವೆ ಎಂದರು.
ಶ್ರೀಗಳು ಮಾತನಾಡಿ, ನನ್ನ ಮೇಲೆ ಬಂದಿದ್ದ ಕಳಂಕವನ್ನು ತೊಳೆದು ಹಾಕಲು ಸಹಕರಿಸಿದ ಎಲ್ಲ ಶ್ರೀಗಳಿಗೆ, ಶಾಸಕರಿಗೆ ಮತ್ತು ಭಕ್ತರಿಗೆ ನಾನು ಅನಂತ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಭಾವವೊಲಿಸಿರುವ ಕೃತಜ್ಞತೆ ವ್ಯಕ್ತಪಡಿಸಿದರು.
ಹಂದಿಗುಂದದ ಶಿವಾನಂದ ಮಹಾಸ್ವಾಮಿಗಳು ಮಾತನಾಡಿ. ಇಂಥ ದುರ್ಘಟನೆಗಳು ಮರುಕಳಿಸಬಾರದು. ತಪ್ಪು ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅವಕಾಶ ಇದೆ. ಎಲ್ಲರೂ ಶಾಂತಿ ಮತ್ತು ಸೌಹಾರ್ದತೆ ಕಾಪಾಡಬೇಕು ಎಂದರು. ಈ ಮಹತ್ವದ ಸಭೆಗೆ ಶೂನ್ಯ ಸಂಪಾದನ ಮಠದ ಮುರಾಘರಾಜೇಂದ್ರ ಮಹಾಸ್ವಾಮಿಗಳು, ಅಂಕಲಗಿ ಅಮರೇಶ್ವರ ಮಹಾಸ್ವಾಮಿಗಳು, ಹುಣಶ್ಯಾಳ ಪಿಜಿ ಸಿದ್ಧಲಿಂಗ ಮಹಾಸ್ವಾಮಿಗಳು, ಹಂದಿಗುಂದದ ಶಿವಾನಂದ ಮಹಾಸ್ವಾಮಿಗಳು, ರಂಗಾಪೂರದ ಮುರುಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಮತ್ತಿತರ ಶ್ರೀಗಳು ಹಾಗೂ ಭಕ್ತರು ಉಪಸ್ಥಿತರಿದ್ದರು.