ಬೆಳಗಾವಿ.
ಮಹಾನಗರ ಪಾಲಿಕೆಯ ಕೋಟಿ ರೂ ತೆರಿಗೆ ವಂಚನೆ ಪ್ರಕರಣ ಈಗ ಲೋಕಾಯುಕ್ತ ಕಚೇರಿ ಮೆಟ್ಟಿಲು ಹತ್ತಿದೆ. ಬೆಳಗಾವಿ ಹೊರವಲಯದಲ್ಲಿರುವ ವೆಗಾ ಕಂಪನಿಯಿಂದ ತೆರಿಗೆ ವಸೂಲಾತಿಯಲ್ಲಿ ಗೋಲ್ ಮಾಲ್ ಆಗಿದೆ ಎನ್ನುವ ಸುದ್ದಿ ಹಬ್ಬಿತ್ತು.

ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯ ಪರಿಷತ್ ಸಭೆಯಲ್ಲಿ ಕಾವೇರಿದ ಚರ್ಚೆ ನಡೆದಿತ್ತು. ಕೊನೆಗೆ ಈ ಪ್ರಕರಣವನ್ನ ಲೋಕಾಯುಕ್ತರಿಗೆ ಕೊಡುವ ರೂಲಿಂಗ್ ನೀಡಲಾಗಿತ್ತು. ಆರಂಭದಲ್ಲಿ ಮಾಧ್ಯಮಗಳ ಮೂಲಕ ಪ್ರಕರಣ ಹೊರಬಿದ್ದಾಗ ಪ್ರಾಥಮಿಕ ವಿಚಾರಣೆ ನಡೆಸಿದ್ದ ಆಯುಕ್ತರು ನಾಲ್ವರಿಗೆ ಕಾರಣ ಕೇಳಿ ನೋಟೀಸ್ ನೀಡಿದ್ದರು. ಅಷ್ಟೇ ಅಲ್ಲ ಅಂತರಿಕ ವಿಚಾರಣೆ ನಡೆಸಿದ ಸಂದರ್ಭದಲ್ಲಿ ತೆರಿಗೆ ವಂಚನೆ ನಡೆದಿದ್ದು ಬೆಳಕಿಗೆ ಬಂದಿತ್ತು. ಅಚ್ಚರಿಯ ಸಂಗತಿ ಎಂದರೆ, ಈ ಪ್ರಕರಣದಲ್ಲಿ ತೆರಿಗೆ ವಸೂಲಾತಿಗೆ ಕಠಿಣ ಕ್ರಮಕ್ಕೆ ಶಿಫಾರಸ್ಸು ಮಾಡಬೇಕಾದ ಸಂಬಂಧಿಸಿದ ಸ್ಥಾಯಿ ಸಮಿತಿ ಕುರಿತು ಲೋಕಾ ವಿಚಾರಣೆ ನಡೆಸುವ ಸಾಧ್ಯತೆಗಳಿವೆ ಎನ್ನುವ ಮಾತಿದೆ.

ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಶಾಸಕ ಅಭಯ ಪಾಟೀಲ, ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ ಮುಂತಾದವರು ಈ ತೆರಿಗೆ ವಂಚನೆ ಬಗ್ಗೆ ಪ್ರಸ್ತಾಪ ಮಾಡಿದ್ದರು.