`ಬೆಳಗಾವಿ ಪಾಲಿಕೆಯ 3 ಮಾಜಿ ಆಯುಕ್ತ ವಿರುದ್ಧ ತನಿಖಾ ವರದಿ ಕ್ರಮಕ್ಕೆ ಶಿಫಾರಸು‘
ಬೆಳಗಾವಿ.
ರಾಜ್ಯದ ಮಹಾನಗರ ಪಾಲಿಕೆಗಳಲ್ಲಿ ಪೌರ ಕಾರ್ಮಿಕರಿಗಾಗಿ ರೂಪಿಸಲಾಗಿದ್ದ ಬೆಳಗಿನ ಉಪಹಾರ ಯೋಜನೆಯ ಜಾರಿಗೆ ಭಾರಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ.
ನಗರಾಭಿವೃದ್ಧಿ ಇಲಾಖೆಯ ಸ್ಪಷ್ಟ ಆದೇಶವಿದ್ದರೂ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಹಿಂದಿನ ಮೂವರು ,ಆಯುಕ್ತರ ಅವಧಿಯಲ್ಲಿ ಸುಮಾರು 1318 ಪೌರ ಕಾರ್ಮಿಕರು ಎರಡು ವರ್ಷಕ್ಕೂ ಹೆಚ್ಚು ಕಾಲ ಬೆಳಗಿನ ಉಪಹಾರದಿಂದ ವಂಚಿತರಾಗಿದ್ದಾರೆ ಎನ್ನುವ ದೂರಿದೆ.

ಇದನ್ನು ಗಂಭೀರ ಪ್ರಕರಣವಾಗಿ ಪರಿಗಣಿಸಿರುವ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯವು ವಿಚಾರಣೆ ನಡೆಸಿ ಈ ಪ್ರಕರಣದಲ್ಲಿ ಮೂವರು ಮಾಜಿ ಆಯುಕ್ತರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿದೆ.
ಇದರಲ್ಲಿ ಪಾಲಿಕೆಯ ಹಾಲಿ ಆಯುಕ್ತರ ಹೆಸರಿದೆ. ಆದರೆ ಅವರು ಅಧಿಕಾರವಹಿಸಿಕೊಂಡ ನಂತರ ಪೌರ ಕಾರ್ಮಿಕರಿಗೆ ಬೆಳಗಿನ ಉಪಹಾರವನ್ನು ಜಾರಿಗೆ ತಂದಿದ್ದರು. ಈ ಕಾರ್ಯಕ್ರಮ ವನ್ನು ಶಾಸಕರೇ ಚಾಲನೆ ನೀಡಿದ್ದರು.
ಉಲ್ಲಂಘನೆಯು ಹೇಗೆ ಬೆಳಕಿಗೆ ಬಂತು?
ರಾಯಬಾಗ ಮೂಲದ ನ್ಯಾಯವಾದಿ ಸುರೇಂದ್ರ ಉಗಾರೆ ಸಲ್ಲಿಸಿದ ಅರ್ಜಿಯ ಹಿನ್ನೆಲೆಯಲ್ಲಿ ವಿಷಯದ ತನಿಖೆ ನಡೆಸಿದ ಬೆಳಗಾವಿ ಉತ್ತರ ವಲಯದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪಿಎಸ್ಐ ಎಸ್.ಎಲ್. ದೇಶನೂರ ಅವರು ಸಿದ್ಧಪಡಿಸಿದ ವರದಿ ಈ ಹಿಂದಿನ ಆಯುಕ್ತರನ್ನು ಜವಾಬ್ದಾರರನ್ನಾಗಿ ಮಾಡಲಾಗಿದೆ.
ರುದ್ರೇಶ ಘಾಳಿ, ಹಳೆ ಆಯುಕ್ತರು, (ಈಗ ಹುಬ್ಬಳ್ಳಿ-ಧಾರವಾಡಪಾಲಿಕೆ ಆಯುಕ್ತರು)
ಅಶೋಕ ದುಡಗುಂಟಿ (ಈಗ ಯಲ್ಲಮ್ಮದೇವಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿ).
ಪಿ.ಎನ್. ಲೋಕೇಶ್. (ಈಗ ದಾವಣಗೆರೆ ಅಪರ್ ಜಿಲ್ಲಾಧಿಕಾರಿ) ಇವರ ಮೇಲೆ ಆರೋಪ ಹೊರೆಸಿ ಕ್ರಮಕ್ಕೆ ಶಿಫಾರಸ್ಸು ಮಾಡಲಾಗಿದೆ.

ಇವರು ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ಪೌರಕಾರ್ಮಿಕರಿಗೆ ಉಪಹಾರ ಒದಗಿಸಲಾಗಿಲ್ಲವೆಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಇದರಿಂದಾಗಿ ಸರಕಾರದ ಆದೇಶ ಉಲ್ಲಂಘನೆಯಷ್ಟೇ ಅಲ್ಲ, ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾರ್ಮಿಕರ ಹಕ್ಕುಗಳನ್ನೂ ಕಸಿದುಕೊಳ್ಳಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ
ಆಯುಕ್ತರ ಸ್ಪಷ್ಟನೆ..!
ಈಗ ಬೆಳಗಾವಿ ಪಾಲಿಕೆ ಆಯುಕ್ತೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶುಭ ಬಿ ಅವರು ಸಿಅರ್ ಇ ಸೆಲ್ ನೋಟಿಸ್ಗೆ ದಾಖಲೆ ಸಮೇತ ಸ್ಪಷ್ಟನೆ ನೀಡಿದ್ದಾರೆ.

ಅಧಿಕಾರ ವಹಿಸಿಕೊಂಡ ನಂತರ 2025 ಜನವರಿಯಿಂದ ಉಪಹಾರ ಯೋಜನೆಗೆ ಚಾಲನೆ ನೀಡಿರುವ ಬಗ್ಗೆ, ಮತ್ತು 2022ರಿಂದ ಬಾಕಿ ಉಳಿದ ಉಪಹಾರ ಭತ್ಯೆಯನ್ನು ನಗದು ರೂಪದಲ್ಲಿ ಪಾವತಿಸಲು ಸರ್ಕಾರದ ಅನುಮೋದನೆ ಕೋರಿರುವ ಬಗ್ಗೆ ಉತ್ತರದಲ್ಲಿ ಸ್ಪಷ್ಟಪಡಿಸಿದ್ದಾರೆ. ಈಗಿರುವ ಅನುದಾನದಲ್ಲಿ ಈ ಭತ್ಯೆ ಪೂರೈಸಲು ಮುಂದಾಗಿರುವ ಮಾಹಿತಿ ಅವರ ಪತ್ರದಲ್ಲಿ ಉಲ್ಲೇಖವಾಗಿದೆ.
ಯೋಜನೆಯ ಹಿನ್ನೆಲೆ..
2000 ರಲ್ಲಿ ಪ್ರತಿದಿನ ರೂ 20 ಉಪಹಾರ ಭತ್ಯೆ ನೀಡುವ ಸರ್ಕಾರ ಆದೇಶ ಮಾಡಿತ್ತು.
2022ರಲ್ಲಿ 30 ರೂ ಗೆ ಹೆಚ್ಚಿಸಿ ಮೊಟ್ಟೆ ಸೇರಿಸಿ ಪೌಷ್ಟಿಕ ಉಪಹಾರ ನೀಡುವ ಸೂಚನೆ. ಆದರೆ ನಗದು ರೂಪದ ಪಾವತಿಗೆ ನಿಷೇಧ ಮಾಡಲಾಗಿತ್ತು.
ಈ ಪ್ರಕರಣದಲ್ಲಿ ಶೇಕಡಾ 82 ಪೌರ ಕಾರ್ಮಿಕರು ಪರಿಶಿಷ್ಟ ಜಾತಿ ಹಾಗೂ ಪಂಗಡದವರಾಗಿದ್ದು, ಅವರಿಗೆ ಸಿಗಬೇಕಾದ ಹಕ್ಕನ್ನು ನಿರಾಕರಿಸುವುದು ಸಾಂವಿಧಾನಿಕ ಮೌಲ್ಯಗಳ ವಿರುದ್ಧದ ಬೆಳವಣಿಗೆಯಾಗಿದೆ.
ಶಿಫಾರಸುಗಳು:
ಈ ಕುರಿತಂತೆ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರಗಶಿಗೆ ಪ್ರತ್ಯೇಕ ವರದಿ ಸಲ್ಲಿಸಿ, ಮೂವರು ಮಾಜಿ ಆಯುಕ್ತರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಶಿಫಾರಸು ಮಾಡಿದೆ