ವಿದ್ಯೆಯ ಬಲಿ ಚರಂಡಿಯಲ್ಲಿ!
ಬೆಳಗಾವಿ ಪಾಲಿಕೆಯಲ್ಲಿ ಪೌರ ಕಾರ್ಮಿಕ ಹುದ್ದೆಗೆ ಬಿಕಾಂ, ಡಿಪ್ಲೋಮಾ, ಡಿಗ್ರಿ ಹೊಂದಿದ ಅರ್ಹರು ಅರ್ಜಿ ನೀಡಿದ ಕಹಿ ಚಿತ್ರಣ
“ವಿದ್ಯೆ ಹೊಂದಿದ ಕೈಗಳು ಇಂದು ಕಸದ ಮೌಲ್ಯಕ್ಕಿಂತ ಕಡಿಮೆ!”
ಬೆಳಗಾವಿ:
“ನಿರುದ್ಯೋಗ” ಎನ್ನುವ ಪದವು ಇಂದಿನ ಪ್ರಪಂಚದಲ್ಲಿ ಕೇವಲ ಆರ್ಥಿಕ ಸ್ಥಿತಿಯ ಸೂಚಕವಲ್ಲ – ಅದು ಈಗ ಒಂದು ಮೌನ ಮಾನವೀಯ ದುರಂತವಾಗಿದೆ.
ಇದರ ಜೀವಂತ ಸಾಕ್ಷಿಯಾಗಿ, ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಇತ್ತೀಚೆಗೆ ನಡೆದ ಪೌರ ಕಾರ್ಮಿಕ ಹುದ್ದೆಗಳ ನೇಮಕಾತಿಗೆ ಡಿಗ್ರಿ, ಡಿಪ್ಲೋಮಾ, ಬಿಕಾಂ, ಬಿಎಡ್, ಕಂಪ್ಯೂಟರ್ ಸೈನ್ಸ್ ಡಿಪ್ಲೋಮಾ ಪಡೆದ ಯುವಕರು ಸಹ ಅರ್ಜಿ ಸಲ್ಲಿಸಿರುವುದು ಶಾಕ್ ನೀಡುವ ಸಂಗತಿ.

ಇದು ನಂಬಲಾಗದ ನಿಜ: ವಿದ್ಯೆ ಪಡೆದ ಕೈಗಳು ಚರಂಡಿ ತೊಳೆಯುವ ಮಟ್ಟಕ್ಕೆ ಇಳಿದು ಬರುವಂತಾಗಿದೆ!
ಚರಂಡಿ ಕ್ಲೀನ್ ಮಾಡಲು ಡಿಗ್ರಿ ಬೇಕೆ?
ರಸ್ತೆ ಶುದ್ಧತೆ, ಮಲಿನತೆ ವಿಲೇವಾರಿ, ಚರಂಡಿ ನಿರ್ವಹಣೆ – ಶಾರೀರಿಕ ಪರಿಶ್ರಮದ ಈ ಹುದ್ದೆಗಳಿಗೆ ಅರ್ಜಿ ಹಾಕಿರುವ ಯುವಕರು ಕೆಲವರು ಎಂಟು ವರ್ಷಗಳ ವಿದ್ಯಾಭ್ಯಾಸ ಮಾಡಿ ಬಿಕಾಂ ಮುಗಿಸಿರುವವರಾಗಿರುತ್ತಾರೆ. ಕೆಲವರು ಇಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್‌ನಲ್ಲಿ ಡಿಪ್ಲೋಮಾ ಪಡೆದವರೂ ಆಗಿದ್ದಾರೆ.

ಸರ್ಕಾರಿ ಉದ್ಯೋಗ ಸಿಗೋಲ್ಲ, ಖಾಸಗಿ ಕಂಪನಿಗಳಲ್ಲಿ ವೇತನ ಸಮರ್ಪಕವಿಲ್ಲ… ಬಚ್ಚಲೂ ಇಲ್ಲ. ಈ ಹುದ್ದೆಯನ್ನಾದರೂ ಹಿಡಿದು ಬದುಕನ್ನು ನಡೆಸಬೇಕಾದ ಪರಿಸ್ಥಿತಿ ಬಂದಿದೆ!”
ಇದು ಅವರ ವೈಫಲ್ಯವಲ್ಲ – ಇಡೀ ವ್ಯವಸ್ಥೆಯ ವೈಫಲ್ಯ!
ಅನುಭವಗಳಿಂದ ಪಾಠ ಕಲಿತ ಪಾಲಿಕೆ
ಯಾವುದೇ ರಾಜಕೀಯ ಒತ್ತಡವಿಲ್ಲದೆ, ಆರೋಪವಿಲ್ಲದೆ, ನೈಜತೆ ಮತ್ತು ಪಾರದರ್ಶಕತೆಗೆ ಪ್ರಾಮುಖ್ಯತೆ ನೀಡುತ್ತಾ ಈ ಬಾರಿ ನಡೆದ ನೇಮಕಾತಿ ಪ್ರಕ್ರಿಯೆ ಒಂದಿಷ್ಟು ವಿಶ್ವಾಸ ಹುಟ್ಟಿಸಿದೆ.
ಹಿಂದೆ 138 ಪೌರ ಕಾರ್ಮಿಕ ಹುದ್ದೆಗಳ ನೇಮಕಾತಿ ವೇಳೆ ಚಿಂತೆ ಹುಟ್ಟುವಷ್ಟು ಗಂಭೀರ ಆರೋಪಗಳು ಕೇಳಿಬಂದಿದ್ದವು. ಆದರೆ ಈ ಬಾರಿ ಪಾಲಿಕೆ ಆಯುಕ್ತೆ ಶುಭಾ ಬಿ, ಮತ್ತು ಇತರ ಅಧಿಕಾರಿಗಳು ನೇರವಾಗಿ ತಪಾಸಣಾ ಪ್ರಕ್ರಿಯೆ ನಡೆಸಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಸಿದರು. .
ಅಭ್ಯರ್ಥಿಗಳಿಗೆ ನೇರವಾಗಿ ವಿಡಿಯೋ ಪ್ರಜಕ್ಷನ್ ಮೂಲಕ ಕಾರ್ಯಕ್ಷೇತ್ರದ ದೃಶ್ಯ ತೋರಿಸಿ, “ಈ ಕೆಲಸ ನಿಮಗೆ ತಕ್ಕದಾದ್ದೇ?” ಎಂಬ ಆಧಾರದ ಮೇಲೆ ಸಂದರ್ಶನ ನಡೆಸಲಾಗಿದೆ.
ಸಮಾಜದ ಅಸಮತೋಲನದ ಭೀಕರ ಚಿತ್ರಣ
ವಿದ್ಯೆಯು ಬದುಕು ಕಟ್ಟಲು, ಸಮಾಜ ಉದ್ದಾರ ಮಾಡಲು ಬೇಕಾದ ಉಪಕರಣವೆಂಬ ನಂಬಿಕೆ, ಇಂಥ ಘಟನೆಗಳಲ್ಲಿ ಕುಸಿಯುತ್ತದೆ.
ಅಕ್ಷರದ ಬೆಳಕು ಪಡೆದು ಇಳಿದು ಬಂದ ಯುವಕ–ಯುವತಿಯರು, ಬೆವರಿನ ದುಡಿಮೆಗೆ ಸಿದ್ದರಾಗಬೇಕಾದರೆ, ಆ ಸಮಾಜ ಅರ್ಥಾತ್ಮಕವಾಗಿತ್ತೆಂದು ಪ್ರಶ್ನಿಸಬೇಕಾಗಿದೆ.
ಇದು ಎಚ್ಚರಿಕೆಯ ಗಂಟೆ..!
ಹೀಗೊಂದು ವಾಸ್ತವಿಕೆ ನಮ್ಮ ಮುಂದಿದೆ:
ವಿದ್ಯೆ ಇರುವವರೇ ನಿರುದ್ಯೋಗಿಗಳಾದಾಗ, ಶಿಕ್ಷಣ ವ್ಯವಸ್ಥೆ ಮತ್ತು ಉದ್ಯೋಗ ನೀತಿ ಪುನರ್ ವಿಮರ್ಶೆಗೆ ಒಳಪಟ್ಟೇಬೇಕಾದ ಅವಶ್ಯಕತೆ ಇದೆ.