Headlines

ಡಿಸಿ ಹೇಳಿಕೆ- ಧರ್ಮ ಸೂಕ್ಷ್ಮತೆ ಎಚ್ಚರಿಸಿದ ಸಭಾನಾಯಕ

ಬೆಳಗಾವಿ, ಆ. 25 (ಸಂಯುಕ್ತ ಕರ್ನಾಟಕ)
ಗಣೇಶೋತ್ಸವ ಸಿದ್ಧತೆಗಳ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ನೀಡಿದ “ಲಕ್ಷ ಜನರಿಗೆ ಪಾಲಿಕೆಯಿಂದ ಮಹಾಪ್ರಸಾದ” ಎಂಬ ಹೇಳಿಕೆ ಬೆಳಗಾವಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಭಾರೀ ಗದ್ದಲ ಎಬ್ಬಿಸಿತು. ಪಕ್ಷ ಬೇಧ ಮರೆತ ನಗರಸೇವಕರು ಜಿಲ್ಲಾಡಳಿತದ ವಿರುದ್ಧ ಗರಂ ಆಗಿ “ಶಿಷ್ಟಾಚಾರ ಉಲ್ಲಂಘನೆ – ಪಾಲಿಕೆಗೆ ಅವಮಾನ” ಎಂದು ನೇರ ವಾಗ್ದಾಳಿ ನಡೆಸಿದರು.

*ಮೊಟ್ಟ ಮೊದಲ ಬಾರಿಗೆ ಡಿಸಿಯೇ ಚರ್ಚೆಯ ಗುರಿ!*

ಗಡಿನಾಡ ಬೆಳಗಾವಿಯ ಮಹಾನಗರ ಪಾಲಿಕೆ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಜಿಲ್ಲಾಧಿಕಾರಿಯ ವಿರುದ್ಧ ಬಹಿರಂಗ ಚರ್ಚೆ ನಡೆಯಿತು.
ಸಭೆಯಲ್ಲಿ ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ, ಹಿರಿಯ ಸದಸ್ಯ ರವಿ ಧೋತ್ರೆ, ನಾಮನಿರ್ದೇಶಿತ ಸದಸ್ಯ ರಮೇಶ ಸೊಂಟಕ್ಕಿ ಮುಂತಾದವರು “ಮೇಯರ್, ಉಪಮೇಯರ್ ಹಾಗೂ ಸದಸ್ಯರನ್ನು ಬದಿಗಿಟ್ಟು ಡಿಸಿ ತಾನೇ ನಿರ್ಧಾರ ಕೈಗೊಳ್ಳುವುದು ಪ್ರಜಾಪ್ರಭುತ್ವಕ್ಕೆ ಧಕ್ಕೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ *ಡಿಸಿಯವರು ಕ್ಷಮೆ ಕೇಳಲಿ” – ಕೊಂಗಾಲಿ ಗರಂ*

“ಬೆಳಗಾವಿಯ ಲಕ್ಷಾಂತರ ಜನರಿಗೆ ಪಾಲಿಕೆಯೇ ಮಹಾಪ್ರಸಾದ ನೀಡುತ್ತದೆ ಎಂದು ಯಾರ ಅನುಮತಿಯಿಂದ ಡಿಸಿ ಹೇಳಿದ್ದಾರೆ? ಚುನಾವಣೆಯ ಮೂಲಕ ಬಂದ ಪ್ರತಿನಿಧಿಗಳನ್ನು ಪಕ್ಕಕ್ಕಿಟ್ಟು ಟ್ವಿಟ್ಟರ್ ಮೂಲಕ ಸ್ಪಷ್ಟನೆ ಕೊಡುವುದು ಶಿಷ್ಟಾಚಾರ ಉಲ್ಲಂಘನೆ. ಇದು ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಿದೆ. ಡಿಸಿಯವರು ಸಾರ್ವಜನಿಕರ ಎದುರಿಗೇ ಕ್ಷಮೆ ಕೇಳಬೇಕು” ಎಂದು ಹನುಮಂತ ಕೊಂಗಾಲಿ ಕಿಡಿಕಾರಿದರು.

“ಧರ್ಮ ಸೂಕ್ಷ್ಮತೆ   ಎಂದು ಎಚ್ಚರಿಸಿದ ಕೊಂಗಾಲಿ, “ಅಧಿಕಾರಿಗಳು ಸರ್ಕಾರದ ಕೈಗೊಂಬೆಯಂತೆ ನಡೆಯಲು ಪ್ರಾರಂಭಿಸಿದರೆ, ಕಾನೂನು ಬಾಗಿಲು ತಟ್ಟಲೇ ಬೇಕು” ಎಂದು ಖಡಕ್ ಎಚ್ಚರಿಸಿದರು.

“ *ಸ್ವಾಯತ್ತತೆಗೆ ಧಕ್ಕೆ” – ಸದಸ್ಯರ ವಾದ*

ವಿಧಾನ ಪರಿಷತ್ ಸದಸ್ಯ ಸಾಬಣ್ಣ ತಳವಾರ ಮಾತನಾಡಿ, “ಬೆಳಗಾವಿ ಸಾರ್ವಜನಿಕ ಗಣೇಶೋತ್ಸವ ನೋಡಲು ಲಕ್ಷಾಂತರ ಜನ ಬರುತ್ತಾರೆ. ಅವರಿಗೆಲ್ಲಾ ಮಹಾಪ್ರಸಾದ ನೀಡುವುದು ಹೇಗೆ ಸಾಧ್ಯ? ಪಾಲಿಕೆಯ ಒಂದು ರೂ. ತೆರಿಗೆ ಹಣವನ್ನು ಖರ್ಚು ಮಾಡಿದರೂ ಆಡಿಟ್ ತಡೆದು ನಿಲ್ಲಿಸುತ್ತದೆ. ಪಾಲಿಕೆ ಸ್ವಾಯತ್ತ ಸಂಸ್ಥೆ – ಇದರ ಮೇಲೆ ಡಿಸಿ ಹಿಡಿತ ಸಾಧಿಸಲು ಸಾಧ್ಯವಿಲ್ಲ” ಎಂದು ಹೇಳಿದರು.

ರಮೇಶ ಸೊಂಟಕ್ಕಿ ತೀವ್ರ ಅಸಮಾಧಾನ ವ್ಯಕ್ತಪಡಿಸಿ, “ಹಬ್ಬ-ಹರಿದಿನಗಳ ಹೊಣೆ ಪಾಲಿಕೆಯದ್ದು, ಆದರೆ ಕ್ರೆಡಿಟ್ ಜಿಲ್ಲಾಡಳಿತ ಪಡೆದುಕೊಳ್ಳುತ್ತಿದೆ. ಈ ಹಿಂದೆ ಸಭೆಗಳು ಮೇಯರ್ ಅಧ್ಯಕ್ಷತೆಯಲ್ಲಿ ನಡೆಯುತ್ತಿತ್ತು, ಈಗ ಪಾಲಿಕೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ” ಎಂದರು.

*ಮೆರವಣಿಗೆ ಮಾರ್ಗ ಪರಿಶೀಲನೆ ಯಾಕಿಲ್ಲ?”*

ಹಿರಿಯ ಸದಸ್ಯ ರವಿ ಧೋತ್ರೆ   “ಪ್ರತೀ ವರ್ಷ ಗಣೇಶೋತ್ಸವದ ಮೊದಲು ಮೇಯರ್, ಉಪಮೇಯರ್ ಜೊತೆ ಅಧಿಕಾರಿಗಳು ಮಾರ್ಗ ಪರಿಶೀಲನೆ ನಡೆಸುತ್ತಿದ್ದರು. ಈ ಬಾರಿ ಅದನ್ನೂ ಮಾಡಿಲ್ಲ. ಬದಲಿಗೆ ಯಾರನ್ನೋ ಎಸ್ಕಾರ್ಟ್‌ನಲ್ಲಿ ಕರೆದುಕೊಂಡು ಹೋಗಿರುವಂತೆ ಪೊಲೀಸರು‌ ಮಾಡಿದ್ದಾರೆ . ಇದರ ಉದ್ದೇಶವೇನು?” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೇಯರ್ ವ್ಯಂಗ್ಯ*

ಸದಸ್ಯರು “ನಿಮ್ಮನ್ನು ಸಭೆಗೆ ಯಾಕೆ ಕರೆಯಲಿಲ್ಲ?” ಎಂದು ಪ್ರಶ್ನಿಸಿದಾಗ ಮೇಯರ್ ಮಂಗೇಶ ಪವಾರ್ ವ್ಯಂಗ್ಯವಾಗಿ ಉತ್ತರಿಸಿದರು –
“ನನ್ನ ಹೆಸರು ಈಗಾಗಲೇ ಮಾಧ್ಯಮಗಳಲ್ಲಿ ತುಂಬಾ ಮಿಂಚಿದೆ. ರಾಷ್ಟ್ರ ಮಟ್ಟದಲ್ಲಿಯೂ ಹೆಸರು ಕೇಳಿಬಂದಿದೆ. ಇನ್ನೂ ಹೆಸರು ಹೆಚ್ಚು ಬಾರದಂತೆ ಅಧಿಕಾರಿಗಳು ಕರೆದಿರಲಿಕ್ಕಿಲ್ಲ!” ಎಂದು ತಿರುಗೇಟು ನೀಡಿದರು.

*ಆಯುಕ್ತರ ಸ್ಪಷ್ಟನೆ*

ಪಾಲಿಕೆ ಆಯುಕ್ತೆ ಶುಭಾ ಬಿ. ಅವರು‌ ಗೊಂದಲ ನಿವಾರಣೆ ಮಾಡಲು ಪ್ರಯತ್ನಿಸಿದರು. “ಗಣೇಶೋತ್ಸವ ಮಂಡಳಿಗಳ ಸಭೆ ಜಿಲ್ಲಾಧಿಕಾರಿಯ ಅಧ್ಯಕ್ಷತೆಯಲ್ಲಿ ನಿಗದಿಯಾಗಿತ್ತು. . ಹಿಂದಿನ ಸಂಪ್ರದಾಯ ನನಗೆ ಗೊತ್ತಿರಲಿಲ್ಲ. ಮುಂದಿನ ಸಭೆಗಳು ಮೇಯರ್ ಅಧ್ಯಕ್ಷತೆಯಲ್ಲೇ ನಡೆಯುವಂತೆ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಭರವಸೆ ನೀಡಿದರು.

*ಅನುದಾನ ಹಂಚಿಕೆ – ಜಟಾಪಟಿ*
ಸಭೆಯಲ್ಲಿ ಪಾಲಿಕೆಯ ಅನುದಾನ ಹಂಚಿಕೆ ವಿಷಯವೂ ಕಾವೇರಿತು. ಆಡಳಿತ ಪಕ್ಷ 60:40 ಅನುಪಾತದ ಬೇಡಿಕೆ ಇಟ್ಟರೆ, ವಿರೋಧ ಪಕ್ಷ ಸಮಾನ ಹಂಚಿಕೆ ಒತ್ತಾಯಿಸಿತು. “ಇದು ಪಾಲಿಕೆಯ ಅನುದಾನ, ಸರ್ಕಾರದ್ದಲ್ಲ. ಎಲ್ಲಾ ವಾರ್ಡ್‌ಗಳಿಗೆ ಸಮಾನ ಹಂಚಿಕೆ ಆಗಬೇಕು” ಎಂದು ರಮೇಶ ಸೊಂಟಕ್ಕಿ ಪಟ್ಟು ಹಿಡಿದರು.

*ಕಂದಾಯ ಶಾಖೆಯ ವಿರುದ್ಧ ಆಕ್ರೋಶ*

ವಿರೋಧ ಪಕ್ಷದ ಶಾಹೀದ್ ಪಠಾಣ್ “ಕಂದಾಯ ಶಾಖೆಯಿಂದ ಸಾರ್ವಜನಿಕರಿಗೆ ಅನ್ಯಾಯವಾಗುತ್ತಿದೆ” ಎಂದು ಆರೋಪಿಸಿದರು. ಇದಕ್ಕೆ ಆಡಳಿತ ಪಕ್ಷದ ರವಿ ಧೋತ್ರೆ ಪ್ರತಿಕ್ರಿಯಿಸಿ, “ಅನ್ಯಾಯವಾದರೆ ಯಾವ ರೀತಿಯಲ್ಲಿ ಆಗುತ್ತಿದೆ ಎಂಬುದನ್ನು ಸ್ಪಷ್ಟಪಡಿಸಬೇಕು” ಎಂದು ಸವಾಲು ಹಾಕಿದರು.

Leave a Reply

Your email address will not be published. Required fields are marked *

error: Content is protected !!