
ಬೆಳಗಾವಿ: “ಕಾಂಗ್ರೆಸ್ ಸರ್ಕಾರ ಎಷ್ಟೇ ಮಹತ್ವದ ಕೆಲಸ ಮಾಡಿದರೂ, ಬಿಜೆಪಿಯವರು ವಿರೋಧಿಸುವುದೇ ಅವರ ಸ್ವಭಾವ. ಇನ್ನೂ ಎರಡೂ ವರ್ಷಗಳ ಕಾಲ ಆರೋಪ ಮಾಡುವುದು, ವಿರೋಧಿಸುವುದನ್ನು ಬಿಟ್ಟರೆ ಅವರಿಗೆ ಬೇರೆ ಯಾವುದೇ ಕೆಲಸವಿಲ್ಲ” ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಟೀಕಿಸಿದರು.
ಮಂಗಳವಾರ ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಹಿರಿಯ ಸಾಹಿತಿ ಬಾನು ಮುಷ್ತಾಕ್ ಅವರಿಂದ ನಾಡಹಬ್ಬ ದಸರಾ ಉದ್ಘಾಟನೆ ನಡೆಯುತ್ತಿರುವುದು ರಾಜ್ಯಕ್ಕೆ ಹೆಮ್ಮೆ ವಿಚಾರ ಎಂದು ಹೇಳಿದರು. “ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಸರ್ಕಾರ ಆಹ್ವಾನ ನೀಡಿದೆ. ಇದರಲ್ಲಿ ರಾಜಕಾರಣ ಅಥವಾ ಧರ್ಮವನ್ನು ಬೆರೆಸುವುದು ಸರಿಯಲ್ಲ” ಎಂದು ಅವರು ಬಿಜೆಪಿ ನಾಯಕರಿಗೆ ಟಾಂಗ್ ನೀಡಿದರು.

ಗಣೇಶೋತ್ಸವ – ಯಾವುದೇ ಅಡಚಣೆ ಇಲ್ಲ
ಜಾರಕಿಹೊಳಿ ಅವರು ಗಣೇಶೋತ್ಸವ ಸಿದ್ಧತೆ ಕುರಿತು ಸ್ಪಷ್ಟನೆ ನೀಡಿ, “ಪಾಲಿಕೆಯಿಂದ ತಯಾರಿಗಳು ನಡೆಯುತ್ತಿವೆ. ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಆಯುಕ್ತರು ಸಹಕರಿಸುತ್ತಾರೆ. ನಿಯಮಾನುಸಾರ ಬೆಳಗಾವಿಯಲ್ಲಿ ಪ್ರತಿವರ್ಷದಂತೆ ಅಚ್ಚುಕಟ್ಟಾಗಿ ಉತ್ಸವ ನಡೆಯಲಿದೆ. ಎಂದರು.
ಅಭಿವೃದ್ಧಿ ಕಾರ್ಯಗಳ ಪಟ್ಟಿ
ಕೋಟ್ಯಾಂತರ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣವಾದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಶೀಘ್ರ ಉದ್ಘಾಟನೆ.
ವೈದ್ಯರ ನೇಮಕಾತಿ ಹಂತ ಹಂತವಾಗಿ ಪೂರ್ಣಗೊಳ್ಳಲಿದೆ.
ಹೈಕೋರ್ಟ್ ಆದೇಶದಂತೆ ಧರ್ಮಸ್ಥಳ ಪ್ರಕರಣಕ್ಕೆ ಎಸ್‌ಐಟಿ ರಚನೆ, ತನಿಖೆ ಪ್ರಗತಿಯಲ್ಲಿದೆ.
ಬಿಡಿಸಿಸಿ ಬ್ಯಾಂಕ್ ಹಾಗೂ ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಚುನಾವಣೆ: “ಇದು ರೈತರ ಹಿತಕ್ಕಾಗಿ, ರಾಜಕೀಯ ಉದ್ದೇಶವಿಲ್ಲ.”
ಗೋಕಾಕ ಇಂಜಿನಿಯರಿಂಗ್ ಕಾಲೇಜು ಆರಂಭ: ವಿದ್ಯಾರ್ಥಿಗಳಿಗೆ ಆರೈಳು ತಾಲೂಕು ಮಟ್ಟದಲ್ಲಿ ಅನುಕೂಲ.
ಸರ್ಕಾರದಿಂದ ಸೈಬರ್ ಸೆಕ್ಯುರಿಟಿ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಹಾಗೂ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಮೂರು ವಿಭಾಗಗಳ ಅನುಮತಿ.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುನೀಲ್ ಹಣಮನ್ನವರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ, ಮುಖಂಡರು ಬಸವರಾಜ ಸಿಗ್ಗಾಂವಿ, ಸಿದ್ದಿಕಿ ಅಂಕಲಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.