ಅಧ್ಯಕ್ಷೆ–ಉಪಾಧ್ಯಕ್ಷರು ಸೇರಿ 28 ಮಂದಿ ವಜಾ, ಆರು ವರ್ಷಗಳ ಅನರ್ಹತೆ
ಆಸ್ತಿ ವರ್ಗಾವಣೆ ಲೋಪ. ಶಿಂಧಿಕುರಬೇಟ ಪಂಚಾಯತ ಸದಸ್ಯರಿಗೆ ಕಠಿಣ ಶಿಕ್ಷೆ
ಬೆಳಗಾವಿ, ಆ.28 –
ಗೋಕಾಕ ತಾಲ್ಲೂಕಿನ ಶಿಂಧಿಕುರಬೇಟ ಗ್ರಾಮ ಪಂಚಾಯಿತಿಯಲ್ಲಿ ನಡೆದ ನಿಯಮಬಾಹಿರ ಆಸ್ತಿ ವರ್ಗಾವಣೆ ಪ್ರಕರಣಕ್ಕೆ ಸರ್ಕಾರ ದೊಡ್ಡ ಬಿಸಿ ಮುಟ್ಟಿಸಿದೆ
. ಅಧ್ಯಕ್ಷೆ–ಉಪಾಧ್ಯಕ್ಷರೊಂದಿಗೆ 26 ಮಂದಿ ಸದಸ್ಯರು ಸೇರಿ ಒಟ್ಟು 28 ಜನರನ್ನೇ ಅಧಿಕಾರದಿಂದ ಕೆಳಗಿಳಿಸಿ, ಆರು ವರ್ಷಗಳ ಕಾಲ ಚುನಾವಣೆಗೆ ನಿಲ್ಲದಂತೆ ಅನರ್ಹಗೊಳಿಸಲಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ಸಹಿ ಹೊಂದಿದ ಆದೇಶದ ಮೂಲಕ ಈ ತೀರ್ಮಾನ ಹೊರಬಿದ್ದಿದೆ.

ಪ್ರಕರಣದ ಹಿನ್ನೆಲೆ
2022ರ ಫೆಬ್ರವರಿ 25 ಹಾಗೂ ಮಾರ್ಚ್ 25ರಂದು ನಡೆದ ಸಾಮಾನ್ಯ ಸಭೆಗಳಲ್ಲಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಸಹಭಾಗಿತ್ವದಲ್ಲೇ ಗ್ರಾಮ ಆಸ್ತಿ ದಾಖಲೆ ಪರಿಶೀಲನೆ ಮಾಡದೇ ಅಂಗೀಕರಿಸಿದ ತಪ್ಪು ಕ್ರಮ ನಡೆದಿದೆ.
ಇದರಿಂದ ಶಾಂತಾ ನಾಗಪ್ಪ ಪೋತದಾರ ಅವರ ಹೆಸರಿನ ಆಸ್ತಿಯನ್ನು ನಿಯಮಬಾಹಿರವಾಗಿ ರಾಮಚಂದ್ರ ದಾನಪ್ಪ ಪೋತದಾರ ಅವರಿಗೆ ವರ್ಗಾಯಿಸಲಾಗಿದೆ. ವಿಚಾರಣೆ ಬಳಿಕ ಈ ಆರೋಪ ದೃಢಪಟ್ಟಿದೆ.
ಕ್ರಮಕ್ಕೆ ಒಳಗಾದವರು ಯಾರು?
ಅಧ್ಯಕ್ಷೆ ರೆಣುಕಾ ಈರಪ್ಪಾ ಪಾಟೀಲ, ಉಪಾಧ್ಯಕ್ಷ ಭೀಮಪ್ಪಾ ಯಲ್ಲಪ್ಪಾ ಬರನಾಳಿ ಅಧಿಕಾರ ಕಳೆದುಕೊಂಡಿದ್ದಾರೆ. ಇವರ ಜೊತೆ –
ಫಕೀರಪ್ಪಾ ಭೋವಿ, ಗಜಾನನ ಪಾಟೀಲ, ಶಾಂತವ್ವ ಕೌಜಲಗಿ, ಮಾರುತಿ ಜಾಧವ, ಅಮೃತ ಕಾಳ್ಯಾಗೋಳ, ರುಕ್ಸಾರ ಜಮಾದಾರ, ರೂಪಾ ಕಂಬಾರ, ಶಾಂತಮ್ಮ ಭೋವಿ, ಸುರೇಖಾ ಪತ್ತಾರ, ಇಬ್ರಾಹಿಮ ಮುಲ್ಲಾ, ಚಾಂದಬಿ ಸೌದಾಗರ, ರಾಮಪ್ಪ ಬೆಳಗಲಿ, ಶಮಶಾದ ಸೌದಾಗರ, ಮಂಜುಳಾ ಕರೋಶಿ, ಮಂಜುನಾಥ ಗುಡಕ್ಷೇತ್ರ, ರಾಮಕೃಷ್ಣ ಗಾಡಿವಡ್ಡರ, ಸುಮಿತ್ರಾ ಮಾಯ, ಪಾರ್ವತಿ ಜೊತೆನ್ನವರ, ಅಡಿವೆಪ್ಪಾ ಬೆಕ್ಕಿನ್ನವರ, ಸಿದ್ದಪ್ಪ ಕಟ್ಟಿಕಾರ, ಬಸಲಿಂಗಪ್ಪ ಭಜಂತ್ರಿ, ಲಕ್ಷ್ಮೀಬಾಯಿ ಸೂರ್ಯವಂಶ, ನಿಸ್ಸಾರಹ್ಮದ ಜಕಾತಿ, ಅಶೋಕ ಮೇತ್ರಿ, ಸುರೇಖಾ ಗಾಡಿವಡ್ಡರ ಹಾಗೂ ಶ್ರೀಕಾಂತ ಕಾಳ್ಯಾಗೋಳ – ಇವರನ್ನೂ ಸದಸ್ಯ ಸ್ಥಾನದಿಂದಲೇ ವಜಾಗೊಳಿಸಲಾಗಿದೆ.
ಕಾನೂನುಬದ್ಧ ಆಧಾರ
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಕಲಂ 48(4) ಮತ್ತು 48(5) ಅಡಿಯಲ್ಲಿ ಅಧ್ಯಕ್ಷೆ–ಉಪಾಧ್ಯಕ್ಷರ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಕಲಂ 43(ಎ)(2) ಅಡಿಯಲ್ಲಿ ಎಲ್ಲಾ 28 ಮಂದಿಗೂ ಆರು ವರ್ಷಗಳ ಚುನಾವಣಾ ಅನರ್ಹತೆ ವಿಧಿಸಲಾಗಿದೆ.
ಮುಂದೇನು?
ಈ ನಿರ್ಧಾರದಿಂದ ಶಿಂಧಿಕುರಬೇಟ ಗ್ರಾಮ ಪಂಚಾಯಿತಿ ಸಂಪೂರ್ಣ ಕಾರ್ಯನಿರ್ವಹಣೆಯಲ್ಲೇ ಶೂನ್ಯ ಸ್ಥಿತಿಗೆ ತಲುಪಿದ್ದು, ಮುಂದಿನ ದಿನಗಳಲ್ಲಿ ಪಂಚಾಯಿತಿ ಆಡಳಿತ ಹೇಗೆ ರೂಪುಗೊಳ್ಳಲಿದೆ ಎಂಬುದರ ಮೇಲೆ ಕುತೂಹಲ ನೆರೆದಿದೆ.