ಬೆಳಗಾವಿ: ಬೆಳಗಾವಿ ಜಿಲ್ಲಾ ಸಹಕಾರ ಬ್ಯಾಂಕ್ ಚುನಾವಣೆ ಈಗ ತಲೆಕೆಳಗಾಗಿ ರಾಜಕೀಯ ಬಿರುಕುಗಳನ್ನು ಬಯಲಿಗೆಳೆಯುತ್ತಿದೆ.
ಪರಿಷತ್ ಸದಸ್ಯ ಹಾಗೂ ಸಚಿವ ಲಕ್ಷ್ಮಿ ಹೆಬ್ಬಾಳ್ವರ್ ಸಹೋದರ ಚನ್ನರಾಜ್ ಹಟ್ಟಿಹೊಳಿ, ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಲು ನಾಲ್ಕೈದು ತಿಂಗಳಿಂದ ಭರ್ಜರಿ ಸಿದ್ಧತೆ ನಡೆಸಿದ್ದರೂ, ಅಚಾನಕ್ ಹಿಂದೆ ಸರಿದಿರುವುದು ಜಿಲ್ಲೆಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಈ ತಿರುವಿನ ಹಿನ್ನಲೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಪ್ರಮುಖ ಪಾತ್ರವಹಿಸಿದ್ದಾರೆ ಎನ್ನುವುದು ಸ್ಪಷ್ಟ. ಸ್ವತಃ ವಿಡಿಯೋ ಹೇಳಿಕೆ ನೀಡಿರುವ ಜಾರಕಿಹೊಳಿ, “ನನ್ನ ಮನವೊಲಿಕೆಯ ಪರಿಣಾಮವಾಗಿ ಚನ್ನರಾಜ್ ಹಟ್ಟಿಹೊಳಿ ಹಿಂಪಡೆಯಲು ಒಪ್ಪಿಕೊಂಡಿದ್ದಾರೆ” ಎಂದು ಘೋಷಿಸಿದ್ದಾರೆ.
ಚುನಾವಣಾ ಸಮರದಲ್ಲಿ ಹಟ್ಟಿಹೊಳಿ ಹಿಂಪಡೆಯುವುದು ಕೇವಲ ವೈಯಕ್ತಿಕ ನಿರ್ಧಾರವಲ್ಲ; ಇದು ಜಾರಕಿಹೊಳಿ ಬಲಪಂಕ್ತಿಯ ಪ್ರಾಬಲ್ಯಕ್ಕೆ ಮತ್ತೊಂದು ಸಾಟಿ ಎನ್ನಲಾಗುತ್ತಿದೆ. ಖಾನಾಪುರದ ಪಿಕೆಪಿಎಸ್ ನಿರ್ದೇಶಕರ ಬೆಂಬಲ ಸಂಪಾದಿಸಿದ್ದ ಹಟ್ಟಿಹೊಳಿ ಹೀಗೆ ಹಿಂತೆಗೆದುಕೊಳ್ಳುವುದರಿಂದ, ಡಿಸಿಸಿ ಬ್ಯಾಂಕ್ ಚುನಾವಣೆಯ ಪೈಪೋಟಿ ಏಕಪಕ್ಷೀಯವಾಗಿ ಜಾರಕಿಹೊಳಿ ಶಕ್ತಿ ಪ್ರದರ್ಶನವಾಗುವ ಸೂಚನೆ ನೀಡುತ್ತಿದೆ.

ಜಿಲ್ಲೆಯ ಕಾಂಗ್ರೆಸ್ ಅಂತರಂಗದಲ್ಲಿ ಕೂಡಾ ಈ ಬೆಳವಣಿಗೆ ಭೂಕಂಪದಂತೆ ಪರಿಣಮಿಸಿದ್ದು, “ಜಾರಕಿಹೊಳಿ ಮಾತೇ ಕೊನೆ ಮಾತು” ಎಂಬ ಸಂದೇಶ ಮತ್ತೊಮ್ಮೆ ಬಲವಾಗಿ ಹೊರಹೊಮ್ಮಿದೆ.
“ಹಟ್ಟಿಹೊಳಿ ಹಿಂಪಡೆಯಲು ಇರುವ ನಿಜವಾದ ಕಾರಣವನ್ನು ಮುಂದಿನ ದಿನಗಳಲ್ಲಿ ಬಹಿರಂಗಪಡಿಸುತ್ತೇನೆ” ಎಂಬ ಸತೀಶ್ ಜಾರಕಿಹೊಳಿ ಹೇಳಿಕೆಯೇ ಮುಂದಿನ ರಾಜಕೀಯ ಕುತೂಹಲಕ್ಕೆ ಇಂಧನವಾಗಿದೆ.
ಜಿಲ್ಲೆಯ ಶಕ್ತಿ ಕೇಂದ್ರಗಳ ನಡುವೆ ನಡೆಯುತ್ತಿರುವ ಈ ಸ್ತಬ್ಧಯುದ್ಧ, ಡಿಸಿಸಿ ಬ್ಯಾಂಕ್ ಚುನಾವಣೆ ಮೀರಿದ ಅರ್ಥ ಪಡೆದು, 2028ರ ರಾಜಕೀಯ ಸಮೀಕರಣಗಳಿಗೂ ನೆಲಹಾಸು ಮಾಡುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ .