ಮೂರ್ತಿ, ಮೆರವಣಿಗೆ, ಮಹಾಪ್ರಸಾದ
ಬೆಳಗಾವಿಯ ಗಣೇಶೋತ್ಸವ – ಧರ್ಮ-ಸಂಸ್ಕೃತಿ-ಸಾಮರಸ್ಯದ ವೈಭವ

ಬೆಳಗಾವಿ:
ಗಡಿನಾಡದ ಬೆಳಗಾವಿಯ ಗಣೇಶೋತ್ಸವವು ಕೇವಲ ಧಾರ್ಮಿಕ ಆಚರಣೆ ಅಲ್ಲ, ಅದು ಜನರ ಮನ-ಮನಗಳನ್ನು ಒಟ್ಟುಗೂಡಿಸುವ ಸಾಂಸ್ಕೃತಿಕ ಹಬ್ಬ. ದಶಕಗಳಿಂದ ಬೆಳೆದ ಈ ಹಬ್ಬ, ತನ್ನದೇ ಆದ ವಿಶಿಷ್ಟತೆ, ವೈಭವ ಮತ್ತು ಸಾಮಾಜಿಕ ಸೌಹಾರ್ದದಿಂದ ರಾಜ್ಯದಾದ್ಯಂತ ಖ್ಯಾತಿ ಗಳಿಸಿದೆ.
ಸ್ವಾತಂತ್ರ್ಯ ಹೋರಾಟದಿಂದ ಸಂಸ್ಕೃತಿ ಹಬ್ಬದವರೆಗೆ
ಬಾಲಗಂಗಾಧರ ಟಿಳಕನ ಪ್ರೇರಣೆಯಿಂದ ಬೆಳಗಾವಿಯಲ್ಲಿ ಆರಂಭವಾದ ಸಾರ್ವಜನಿಕ ಗಣೇಶೋತ್ಸವವು, ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಜನರನ್ನು ಒಗ್ಗೂಡಿಸಿದ ಸಾಂಸ್ಕೃತಿಕ ವೇದಿಕೆಯಾಗಿ ಪರಿಣಮಿಸಿತು. ಆ ದಿನಗಳಲ್ಲಿ ರಾಷ್ಟ್ರಭಕ್ತಿ ಗೀತೆ, ನಾಟಕ, ಪಾಠ, ಚರ್ಚೆಗಳು ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಆ ಪರಂಪರೆ ಇಂದಿಗೂ ಜೀವಂತ.

ಮೂರ್ತಿಯ ಮೆರುಗು – ಬೆಳಗಾವಿಯ ಹೆಮ್ಮೆ
“ಮುಂಬಯಿ ನಂತರ ಗಣೇಶನ ವೈಭವ ನೋಡಬೇಕೆಂದರೆ ಬೆಳಗಾವಿಗೆ ಬರಬೇಕು” ಎನ್ನುವ ಮಾತು ಅತಿಶಯೋಕ್ತಿ ಅಲ್ಲ.
ಒಂದೇ ತಿಂಗಳ ಮುಂಚಿತದಿಂದಲೇ ಹಬ್ಬದ ಸಿದ್ಧತೆ ಆರಂಭವಾಗುವ ಸಂಪ್ರದಾಯ ಇಲ್ಲಿದೆ. ಆಗ ಜನ ಮಂಟಪಗಳ ಮುಂದೆ ಸಾಲು ಹಾಕಿ ಗಣೇಶನ ದರ್ಶನ ಪಡೆಯುತ್ತಿದ್ದರು.

ಇಂದಿಗೂ ನಗರದ ಪ್ರತಿಯೊಂದು ಬಡಾವಣೆ, ಪ್ರತಿಯೊಂದು ಬೀದಿಯಲ್ಲಿ ಗಣೇಶನ ಸೊಬಗು ಕಾಣಿಸುತ್ತದೆ. ಅನಗೋಳ, ಭಾಜಿ ಮಾರುಕಟ್ಟೆ, ಖಾದರ್ಶಾಹ ಪೀರ್ ಪ್ರದೇಶಗಳಲ್ಲಿ ಕಲಾತ್ಮಕ ಮೂರ್ತಗಳು ಕಣ್ಣು ಕದ್ದರೆ, ಕೆಲವೆಡೆ ಸರಳ ಭಕ್ತಿಭಾವದ ವಾತಾವರಣ ಮನ ಸೆಳೆಯುತ್ತದೆ. ಬೆಳಕಿನ ಅಲಂಕಾರ, ಸಾಮಾಜಿಕ ಸಂದೇಶ ಸಾರುವ ಅಲಂಕೃತ ಗಣಪ ಪ್ರತಿಮೆಗಳು ಹಬ್ಬದ ಮೆರುಗನ್ನು ಮತ್ತಷ್ಟು ಹೆಚ್ಚಿಸುತ್ತವೆ.

ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗಳ
ಬೆಳಗಾವಿಯ ಗಣೇಶ ಮಂಟಪಗಳು ಕೇವಲ ಭಜನೆಗೆ ಮಾತ್ರ ಸೀಮಿತವಲ್ಲ; ಪ್ರತಿದಿನವೂ ನಾಟಕ, ಸಂಗೀತ, ಭಜನ, ಜನಜಾಗೃತಿ ಕಾರ್ಯಕ್ರಮಗಳಿಂದ ಜೀವಂತವಾಗಿರುತ್ತವೆ. ಅನೇಕ ಕಲಾವಿದರ ಮೊದಲ ಪ್ರದರ್ಶನವೇ ಗಣೇಶ ಮಂಟಪದಲ್ಲಿ ನಡೆದದ್ದು. ಹೀಗಾಗಿ ಬೆಳಗಾವಿ ಗಣೇಶೋತ್ಸವವನ್ನು “ಸಂಸ್ಕೃತಿ ಹಬ್ಬ” ಎಂದೂ ಕರೆಯುತ್ತಾರೆ.
ಮಹಾಪ್ರಸಾದ – ಆತ್ಮೀಯತೆಯ ಅಳಿಯದ ನೆನಪು

ಬೆಳಗಾವಿ ಗಣೇಶೋತ್ಸವದ ವಿಶೇಷವೆಂದರೆ ಮಹಾಪ್ರಸಾದ. ಹಿಂದಿನ ದಿನಗಳಲ್ಲಿ ಕೆಲವೇ ಮಂಟಪಗಳಿಗೆ ಸೀಮಿತವಾಗಿದ್ದ ಪ್ರಸಾದ ವಿತರಣೆ, ಇಂದು ನಗರವನ್ನೇ ಆವರಿಸಿದೆ.
ಪೊಲೀಸ್ ಠಾಣೆಗಳಲ್ಲಿಯೂ ನಡೆಯುವ ಮಹಾಪ್ರಸಾದ ವಿಭಿನ್ನ ಆಕರ್ಷಣೆ. ಕಾನೂನು ರಕ್ಷಕರು ಸ್ವತಃ ಅನ್ನ ಹಂಚುವ ಸಂಪ್ರದಾಯ ಜನ-ಪೊಲೀಸರ ಬಾಂಧವ್ಯವನ್ನು ಗಟ್ಟಿಗೊಳಿಸಿದೆ.
ಬಿಸಿ ಬಿಸಿ ಅನ್ನ, ಸಾಂಬಾರ್, ಪಾಯಸ ತಟ್ಟೆಯಲ್ಲಿ ತುಂಬಿ ಜನರ ಕೈ ಸೇರಿದಾಗ, ಅಲ್ಲಿ ಜಾತಿ-ಧನ-ಪಂಗಡದ ಭೇದವಿಲ್ಲ. ಎಲ್ಲರೂ ಒಂದೇ ಸಾಲಿನಲ್ಲಿ ಕುಳಿತು ಅನ್ನ ಸೇವಿಸುತ್ತಾರೆ.
“ಮೂತರ್ಿಯ ಮೆರುಗು ಕಣ್ಣು ತುಂಬಿಸಿದರೆ, ಪ್ರಸಾದದ ಆತ್ಮೀಯತೆ ಮನ ತುಂಬಿಸುತ್ತದೆ” ಎಂಬ ಹಿರಿಯರ ಮಾತು, ಬೆಳಗಾವಿಯ ಗಣೇಶೋತ್ಸವದ ನಿಜವಾದ ತಾತ್ಪರ್ಯವನ್ನು ತೋರ್ಪಡಿಸುತ್ತದೆ.