ಸಚಿವರಿಗೆ ನೇಕಾರರ ಅಳಲು ಮುಟ್ಟಿಸಿದ ಶಾಸಕ ಅಭಯ.
ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಕೂಡ ನೇಕಾರರ ಸಮಸ್ಯೆ ಬಗ್ಗೆ ವಿವರಿಸಿದ ಶಾಸಕ ಅಭಯ ಪಾಟೀಲ
ಮೇಯರ್ ಮಂಗೇಶ ಪವಾರ್, ಉಪಮೇಯರ್ ವಾಣಿ ಜೋಶಿ, ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ, ಗೀತಾ ಸುತಾರ ಉಪಸ್ಥಿತಿ.
ನೇಕಾರ ಮುಖಂಡ ಗಜಾನನ ಗುಂಜೇರಿ ನೇತೃತ್ವದಲ್ಲಿ ಮನವಿ ಅರ್ಪಣೆ

ಬೆಳಗಾವಿ:
ಶತಮಾನಗಳಿಂದ ಶಹಾಪುರ ಸೀರೆಗಳ ವೈಭವ, ಪರಂಪರೆ ಮತ್ತು ದೇಶೀಯ ಸಾಂಸ್ಕೃತಿಕ ಐಕ್ಯತೆಯನ್ನು ಜಗತ್ತಿಗೆ ತೋರಿಸುತ್ತಿರುವ ಬೆಳಗಾವಿ, ಇಂದು ನೇಕಾರರ ನೋವಿನ ಕೂಗಿನಿಂದ ಗದ್ದುಗೆ ಮಾಡುತ್ತಿದೆ. ಕೈಮಗ್ಗ ವೃತ್ತಿ ಮತ್ತು ನೇಕಾರರ ಬದುಕು ನಾಶದ ಅಂಚಿನಲ್ಲಿರುವ ಹಿನ್ನೆಲೆಯಲ್ಲಿ, “ಕೈಮಗ್ಗ ವೃತ್ತಿ ಉಳಿಸಿ, ನೇಕಾರರ ಬದುಕು ಉಳಿಸಿ” ಎಂಬ ಹೃದಯಸ್ಪರ್ಶಿ ಕೂಗು ಕೇಂದ್ರ ಸರ್ಕಾರದ ಗಮನಕ್ಕೆ ತಲುಪುತ್ತಿದೆ.

ನೇಕಾರರ ನಿಯೋಗದ ಮುಖಾಮುಖಿ:
ಶಾಸಕ ಅಭಯ ಪಾಟೀಲ್ ನೇತೃತ್ವದ ನೇಕಾರ ನಿಯೋಗವು ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಕೇಂದ್ರ ಗೃಹ ಸಚಿವ ಬಂಟೆ ಸಂಜಯ್ ಕುಮಾರ್ ಅವರನ್ನು ಸ್ವಾಗತಿಸಿ, ನೇಕಾರರ ಸಮಸ್ಯೆಗಳ ಕುರಿತು ವಿಸ್ತೃತ ಚರ್ಚೆ ನಡೆಸಿತು. ಈ ಸಂದರ್ಭದಲ್ಲಿ ಮೇಯರ್ ಮಂಗೇಶ ಪವಾರ, ಉಪಮೇಯರ್ ವಾಣಿ ವಿಲಾಸ ಜೋಶಿ, ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ, ಬಿಜೆಪಿ ಮುಖಂಡೆ ಗೀತಾ ಸುತಾರ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

*ವಿನಾಶದ ಅಂಚಿನ ಕೈಮಗ್ಗ ವೃತ್ತಿ:*
ನೇಕಾರ ಮುಖಂಡ ಗಜಾನನ ಗುಂಜೇರಿ ನೇತೃತ್ವದಲ್ಲಿ, 1985 ರ ಕೈಮಗ್ಗ (ಆಮದುಗೊಳಿಸಲಾದ ವಸ್ತುಗಳ ಕಾಯ್ದೆ) ವೃತ್ತಿಗೆ ರಕ್ಷಣಾ ಕವಚವಾಗಿದ್ದರೂ, ಕೈಗಾರಿಕರಣ, ಮಾರುಕಟ್ಟೆ ಕುಸಿತ, ಸಾಲದ ಬಲೆ ಮುಂತಾದ ಸವಾಲುಗಳ ನಡುವೆ ವೃತ್ತಿ ವಿನಾಶದ ಅಂಚಿನಲ್ಲಿದೆ. ನೇಕಾರರು ತಮ್ಮ ಬದುಕನ್ನು ಕಾಪಾಡಲು ಆರ್ಥಿಕ ನೆರವು, ತರಬೇತಿ, ಮಾರುಕಟ್ಟೆ ಬೆಂಬಲ ಮತ್ತು ಸಬ್ಸಿಡಿ ಸೌಲಭ್ಯಗಳ ಮರುಪ್ರಾರಂಭಕ್ಕೆ ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಪ್ರಮುಖ ಬೇಡಿಕೆಗಳು:
ಸ್ಥಳೀಯ ನೇಕಾರರ ಸ್ಥಿತಿ-ಗತಿಗಳ ಸಮೀಕ್ಷೆ ಮತ್ತು ಸಮಾಲೋಚನೆ ನಡೆಸುವುದು.
ಕೈಮಗ್ಗ ವೃತ್ತಿ ಮತ್ತು ನೇಕಾರರ ಜೀವನೋಪಾಯಕ್ಕೆ ಸಮತೋಲನ ಸಾಧಿಸುವ ಹೊಸ ನೀತಿಗಳನ್ನು ರೂಪಿಸುವುದು.
ಪವರ್‌ಲುಮ್ ನೇಕಾರರಿಗೆ ಮಾನ್ಯತೆ, ಕಲ್ಯಾಣ ಯೋಜನೆಗಳು, ಸಾಲ, ತರಬೇತಿ, ಮಾರುಕಟ್ಟೆ ಬೆಂಬಲ ಒದಗಿಸುವುದು.
ಎಂಎಸ್‌ಎಂಇ ವಿಭಾಗದ PMEGP, CLCS ಸಬ್ಸಿಡಿ ಯೋಜನೆಗಳನ್ನು ಮರುಪ್ರಾರಂಭಿಸುವುದು.
ಆರ್ಥಿಕ ಸಂಕಷ್ಟದಿಂದ ನೇಕಾರರು ಆತ್ಮಹತ್ಯೆಗೆ ಶರಣಾಗುತ್ತಿರುವ ಘಟನೆಗಳನ್ನು ತಡೆಯಲು ತಕ್ಷಣ ಕ್ರಮ ಕೈಗೊಳ್ಳುವುದು.
ವೃತ್ತಿಯೇ ನೇಕಾರರ ಬದುಕಿನ ಆಧಾರ:
ಬೆಳಗಾವಿಯ ಶಹಾಪುರ ಸೀರೆ ಕೇವಲ ವಸ್ತ್ರವಲ್ಲ, ಅದು ಸಂಸ್ಕೃತಿ, ಶ್ರಮಜೀವಿಗಳ ಶ್ವಾಸ ಮತ್ತು ಪರಂಪರೆ. “ಕಾನೂನುಗಳಿಗಿಂತ ಹೆಚ್ಚಾಗಿ, ಮಾನವೀಯತೆ ಮತ್ತು ಸಹಾನುಭೂತಿಯ ದೃಷ್ಟಿಯಿಂದ ನೇಕಾರರ ಅಳಲು ಕೇಳಿ ಸ್ಪಂದಿಸಬೇಕು” ಎಂದು ಸಮುದಾಯ ಮನವಿ ಮಾಡಿದೆ.