ಗುರಿ ಸಾಧನೆಗಾಗಿ ವಿದ್ಯಾರ್ಥಿಗಳು ಪ್ರಾಥಮಿಕ ಗುರಿಯತ್ತ ಗಮನ ಹರಿಸಬೇಕು

ಪುಣೆ :
“ಗುರಿಯತ್ತ ಮುನ್ನುಗ್ಗುವಾಗ ಪ್ರತಿ ವಿದ್ಯಾರ್ಥಿಯೂ ಮೊದಲಿಗೆ ತನ್ನ ಎದುರಿನ ಪ್ರಾಥಮಿಕ ಗುರಿಗಳನ್ನು ಆದ್ಯತೆಗೊಳಿಸಿದಾಗ ಮಾತ್ರ ಅಂತಿಮ ಗುರಿ ಸಾಧನೆ ಸುಲಭವಾಗುತ್ತದೆ,” ಎಂದು ಬೆಳಗಾವಿಯ ಹಿರಿಯ ಪತ್ರಕರ್ತ ಹಾಗೂ ಸಮಾಜಸೇವಕ ಲೂಯಿಸ್ ರೋಡ್ರಿಗ್ಸ್ ಅಭಿಪ್ರಾಯಪಟ್ಟರು

ಮಂಗಳವಾರ ಸಂಜೆ ಪುಣೆಯ ‘ಸಂತುಲನ’ ಸಂಸ್ಥೆಯ ವತಿಯಿಂದ ಆಯೋಜಿಸಲಾದ ಸನ್ಮಾನ ಸಮಾರಂಭಕ್ಕೆ ಪ್ರತಿಕ್ರಿಯೆ ನೀಡುತ್ತಿದ್ದ ಅವರು ಮಾತನಾಡಿದರು. ‘ಜಿಂದಾಬಾದ್’ ಎಂಬ ಸಂತುಲನ ಸಂಸ್ಥೆಯ ಘೋಷವಾಕ್ಯದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಸಂಸ್ಥಾಪಕ ಅಡ್ವೊಕೇಟ್ ಬಸ್ತು ರೇಗೇ, ಸಂಸ್ಥೆಯ ನಿರ್ದೇಶಕಿ ಅಡ್ವೊಕೇಟ್ ಪಲ್ಲವಿ ರೇಗೇ ಹಾಗು ಪುಣೆಯ ಕೊಂಕಣಿ ಸಮಾಜದ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.

“ಜೀವನದಲ್ಲಿ ಎತ್ತರದ ಗುರಿ ಇರುವುದು ಅತ್ಯಂತ ಮಹತ್ವದ್ದು. ಆದರೆ ಅದೇ ಸಮಯದಲ್ಲಿ ಸಮಾಜದ ಋಣವಿರುವುದರ ಭಾವನೆ ಪ್ರತಿಯೊಬ್ಬರೂ ಬಾಲ್ಯದಿಂದಲೇ ಮನಸ್ಸಿನಲ್ಲಿ ಬೆಳೆಸಿಕೊಳ್ಳಬೇಕು. ಗುರಿ ಸಾಧನೆ ಆದ ನಂತರ ಆ ಋಣವನ್ನು ಹೇಗೆ ತೀರಿಸಬೇಕು ಎಂಬ ಅರಿವು ಸಹ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿರಬೇಕು,” ಎಂದು ಅವರು ಕಾಲಾಂತರದ ಉದಾಹರಣೆ ನೀಡುತ್ತ ಹೇಳಿದರು.

ಸಂತುಲನ ಸಂಸ್ಥೆಯು ಕಳೆದ ಮೂರು ದಶಕಗಳಿಂದ ಕಲ್ಲುಗಣಿಗಾರರು ಮತ್ತು ಅವರ ಕುಟುಂಬಗಳ ಸಮಗ್ರ ಅಭಿವೃದ್ಧಿಗಾಗಿ, ವಂಚಿತ ಮಹಿಳೆಯರ ಸಬಲೀಕರಣಕ್ಕಾಗಿ ಹಾಗೂ ಹಿಂದುಳಿದ ಮತ್ತು ದೀನರಿಗೆ ನಿಸ್ವಾರ್ಥ ಸೇವೆ ಮಾಡುತ್ತಿರುವ ಕಾರ್ಯವನ್ನು ಅವರು ಹೃತ್ಪೂರ್ವಕವಾಗಿ ಶ್ಲಾಘಿಸಿದರು. “ದೇವ ಬರೆ ಕರುಂ” ಎಂಬ ಕೊಂಕಣಿ ಪದಗಳಿಂದ ವಿದ್ಯಾರ್ಥಿಗಳಿಗೆ ಶುಭಾಶಯಗಳನ್ನು ಕೋರಿದರು.

ಈ ಸಂದರ್ಭದಲ್ಲಿ ಲೂಯಿಸ್ ರೋಡ್ರಿಗ್ಸ್ ಅವರ ಪತ್ರಿಕೋದ್ಯಮ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಮಾಡಿದ ಸೇವೆ, ಜೊತೆಗೆ ಇತ್ತೀಚಿಗೆ ಕರ್ನಾಟಕ ರಾಜ್ಯಸರ್ಕಾರದ ಅಲ್ಪಸಂಖ್ಯಾತ ಜಿಲ್ಲಾ ಸಮಿತಿಯ ಸಲಹೆಗಾರರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಅವರಿಗೆ ಶಾಲು, ಸ್ಮರಣಿಕೆ ಹಾಗೂ ಪುಷ್ಪಗುಚ್ಛ ನೀಡಿ ಸನ್ಮಾನಿಸಲಾಯಿತು. ಸಂತುಲನ ಸಂಸ್ಥೆಯ ಸಂಘಟಕ ಆದಿನಾಥ ಚಾಂದಣೆ, ಮುಖ್ಯಶಿಕ್ಷಕ ಬಾಲಾಜಿ ಧೋಣೆ, ಸಂತುಲನ ಮಹಿಳಾ ಪಟಸಂಸ್ಥೆಯ ನಿರ್ದೇಶಕಿ ಸುರೇಖಾ ಗಾಯಕವಾಡ, ಬೇಬಿ ಬೋಖಲೆ, ಸೀಮಾ ಸಾಳವೆ ಹಾಗೂ ಇತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!