ಖಾನಾಪುರ ಪೊಲೀಸರ ನಿರ್ಲಕ್ಷ್ಯ – ಬಡ ಕಾರ್ಮಿಕನ ಜೀವ ಬಲಿ
🔴 ದೂರು ಕೊಡದಂತೆ ಒತ್ತಾಯಿಸಿದ ಖಾಕಿ?
🔴 ಆಸ್ಪತ್ರೆಗಳ ಮೌನ – ಕಡ್ಡಾಯ ಮಾಹಿತಿ ಬಚ್ಚಿಟ್ಟಾರು?
🔴 ಶವದ ಅಸ್ಪಷ್ಟ ಹಾದಿ – ಸತ್ಯಕ್ಕೆ ದಾರಿ ಎಲ್ಲಿದೆ?
🔴 ಭಯಭೀತ ಕುಟುಂಬ – ನ್ಯಾಯಕ್ಕೆ ಯಾರ ನೆರವು?
🔴 ‘ದರ್ಶನ-ರೇಣುಕಾಸ್ವಾಮಿ ಪ್ರಕರಣ’ ನೆನಪಿಸುವ ಜನರ ಕೂಗು
🔴 ಖಾಕಿಯ ವಿರುದ್ಧ ಶಿಸ್ತು ಕ್ರಮವೇ ಸಾರ್ವಜನಿಕರ ಬೇಡಿಕೆ
E belagavi special
ಬೆಳಗಾವಿ
ರಾಜ್ಯದ ಕಾನೂನು ಸುವ್ಯವಸ್ಥೆ ಮೇಲೆ ಜನರು ನಂಬಿಕೆ ಕಳೆದುಕೊಳ್ಳುವಂಥ ಕಳಂಕಿತ ಘಟನೆಯೊಂದು ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ಬಯಲಾಗಿದೆ.
ಬಡತನದಲ್ಲಿ ಹೋರಾಡುತ್ತಿದ್ದ ಕೇವಲ 18ರ ಹರೆಯದ ಹೊಟೇಲ್ ಕಾರ್ಮಿಕ ವೆಂಕಪ್ಪ ಮಯ್ಯೇಕರ ಜೀವ ಬಲಿಯಾದ ಈ ಪ್ರಕರಣದಲ್ಲಿ, ಪೊಲೀಸರ ನಿರ್ಲಕ್ಷ್ಯ, ಆರೋಪಿಗಳ ಪರ ವಕಾಲತ್ತು, ಹಣದ ರಾಜಕಾರಣ ಮತ್ತು ಬಡವರ ಕಣ್ಣೀರನ್ನು ಹಾಸ್ಯ ಮಾಡುವ “ರಾಜೀ ಸಂಧಾನ” ಆಟ – ಇವೆಲ್ಲವೂ ಕಣ್ಣಿಗೆ ಬೀಳುತ್ತಿವೆ.

ಪ್ರಶ್ನೆಗೆ ಪ್ರಶ್ನೆಯೇ!
ಘಟನೆ ನಡೆದದ್ದು ಆಗಸ್ಟ್ 16ರಂದು. ಆ ದಿನವೇ ಕುಟುಂಬಸ್ಥರು ಠಾಣೆ ಬಾಗಿಲು ತಟ್ಟಿದಾಗ, “ದೂರು ಕೊಡಬೇಕಾಗಿಲ್ಲ, ರಾಜೀ ಮಾಡಿಕೊಂಡು ಹೋಗಿ” ಎಂದು ಪೊಲೀಸರು ಬೋಧನೆ ನೀಡಿದರೆನ್ನಲಾಗಿದೆ.
ಮತ್ತೊಂದು ಕಡೆ, ಹಲ್ಲೆಯಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದ ವೆಂಕಪ್ಪನನ್ನು ಮೊದಲು ಖಾಸಗಿ ಆಸ್ಪತ್ರೆಗೆ ದಾಖಲಿಸಿದಾಗಲೇ ಅಪರಾಧ ಪ್ರಕರಣವೆಂದು ತಿಳಿದಿದ್ದರೂ ಸಂಬಂಧಿತ ಠಾಣೆಗೆ ಮಾಹಿತಿ ನೀಡದೆ ವೈದ್ಯರು ಮೌನವಾಗಿದ್ದು ಪ್ರಶ್ನಾರ್ಥಕವಾಗಿದೆ.
ನಂತರ ಬೀಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಿದಾಗಲೂ, ಕಡ್ಡಾಯವಾದ ಎಂಎಲ್ಸಿ ದಾಖಲೆ ಮತ್ತು ಠಾಣೆಗೆ ವರದಿ ಸಲ್ಲಿಸುವ ಕೆಲಸ ಕೈಗೂಡಲಿಲ್ಲ. ಈ ನಡುವೆ ವೆಂಕಪ್ಪನ ಜೀವ ಮಾಯವಾಯಿತು, ಆದರೆ ಖಾಕಿ ಮಾತ್ರ “ಇದು ನಮ್ಮ ಹೊಣೆ ಅಲ್ಲ” ಎನ್ನುವಂತೆ ನಿಂತಿತು.

ಶವದ ಅಸ್ಪಷ್ಟಹಾದಿ ವೆಂಕಪ್ಪ ಮೃತಪಟ್ಟ ನಂತರ ಶವವನ್ನು ಹೇಗೆ ಹಸ್ತಾಂತರ ಮಾಡಿದರು ಎಂಬುದು ಮತ್ತೊಂದು ಗೂಢಪ್ರಶ್ನೆ.
ಮೂಲಗಳ ಪ್ರಕಾರ, ಮೊದಲು ಖಾನಾಪುರದತ್ತ ಕರೆದೊಯ್ಯಲ್ಪಟ್ಟ ಶವವನ್ನು ನಂತರ ಬೆಳಗಾವಿಗೆ ತಂದು ಪ್ರಕ್ರಿಯೆ ಮುಗಿಸಿ, ಬಳಿಕ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಒಂದು ಶವವನ್ನೇ ಹೀಗೆ ತಿರುಗಾಡಿಸಿದರೆ ಸತ್ಯಕ್ಕೆ ಯಾವ ದಾರಿ ಸಿಗುತ್ತದೆ? ಎಂದು ಜನತೆ ಪ್ರಶ್ನಿಸುತ್ತಿದೆ.

ಬಡತನ, ಭಯ, ಅನ್ಯಾಯ
ವೆಂಕಪ್ಪನ ಕುಟುಂಬ ಬಡತನದಲ್ಲಿ ಹೋರಾಡುತ್ತಿರುವ ಸಾಮಾನ್ಯ ಮನೆ.
ಥಾಣೆಯ ಮೆಟ್ಟಿಲೇ ಏರದ, ಪೊಲೀಸರನ್ನೇ ನೋಡಿದರೆ ಹೆದರುವ ಈ ಕುಟುಂಬಕ್ಕೆ ನ್ಯಾಯ ದೊರೆಯದಿದ್ದರೆ ಅವರ ಕಣ್ಣೀರು ಒರೆಸೋದು ಯಾರು?
ಇದು ಕೇವಲ ಒಬ್ಬ ಬಡ ಕಾರ್ಮಿಕನ ದುರಂತವಲ್ಲ – ಪೊಲೀಸ್ ನಿರ್ಲಕ್ಷ್ಯದ ಕಪ್ಪು ಮುಖವಾಡ ಬಯಲಾಗುವ ಪ್ರಕರಣವಾಗಿದೆ.
‘ ದರ್ಶನ ಪ್ರಕರಣ’ ನೆನಪಿಸುವ ಬೇಡಿಕೆ
ಈ ಪ್ರಕರಣ ನಟ ದರ್ಶನ ಗ್ಯಾಂಗ ನಡೆಸಿದ ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ನೆನಪಿಸುತ್ತದೆ. ಅಲ್ಲಿ ಐಪಿಎಸ್ ದಯಾನಂದ ತಕ್ಷಣ ಕ್ರಮ ಕೈಗೊಂಡು ಪ್ರಭಾವಿಗಳನ್ನು ಬಂಧಿಸಿದ್ದರು.
ಅದೇ ಮಾದರಿಯ ಕಠಿಣ ಕ್ರಮ ಖಾನಾಪುರದಲ್ಲೂ ಜಾರಿಯಾಗಬೇಕೆಂಬ ಕೂಗು ಗಟ್ಟಿಯಾಗುತ್ತಿದೆ.
ಪ್ರತಿಯೊಂದು ಪ್ರಕರಣದಲ್ಲಿ ತನ್ನ ಸಿಬ್ಬಂದಿಯನ್ನು ಸಮರ್ಥಿಸುವ ಎಸ್ಪಿ – ಈ ಬಾರಿ ತಪ್ಪು ಮಾಡಿದ ಖಾಕಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತಾರಾ?
ಇದೇ ಜನರ ಕಣ್ಣು ಹಾಯಿಸಿರುವ ಪ್ರಶ್ನೆ.