ಹುಕ್ಕೇರಿ ವಿದ್ಯುತ್ ಸಹಕಾರ ಸಂಘದ ಚುನಾವಣೆ ಬಿರುಸಿಗೆ – ಜೊಲ್ಲೆ–ಜಾರಕಿಹೊಳಿ ಜಂಟಿ ಪ್ರಚಾರ
“ಸೆ. 28ರಂದು ನಡೆಯುವ ಹುಕ್ಕೇರಿ ವಿದ್ಯುತ್ ಸಹಕಾರ ಸಂಘದ ಚುನಾವಣೆಯಲ್ಲಿ ದಿ. ಅಪ್ಪಣ್ಣಗೌಡ ಪಾಟೀಲರ ಹೆಸರಿನಲ್ಲಿ ರಚಿಸಿರುವ ನಮ್ಮ ಪೆನಲ್ ಗೆ ಮತ ನೀಡಿ ಆಶೀರ್ವದಿಸಿ. ರೈತರ ಹಿತಕ್ಕಾಗಿ ಪಾರದರ್ಶಕ ಆಡಳಿತ ನೀಡುವುದೇ ನಮ್ಮ ಬದ್ಧತೆ.”

ಬಾಲಚಂದ್ರ ಜಾರಕಿಹೊಳಿ, ಶಾಸಕ ಮತ್ತು ಅಧ್ಯಕ್ಷರು, ಬೆಮ್ಯುಲ್ .
ಬೆಳಗಾವಿ:
ಹುಕ್ಕೇರಿ ತಾಲೂಕಿನಲ್ಲಿ ನಷ್ಟದಲ್ಲಿರುವ ಸಹಕಾರ ಸಂಸ್ಥೆಗಳನ್ನು ಪುನರುಜ್ಜೀವನಗೊಳಿಸಲು ಮತ್ತು ರೈತರ ಹಿತಾಸಕ್ತಿಯನ್ನು ಕಾಪಾಡಲು ಪಕ್ಷಾತೀತ-ಜಾತ್ಯಾತೀತ ವೇದಿಕೆಯಲ್ಲಿ ಸಹಕಾರ ಪರ್ವವನ್ನು ಆರಂಭಿಸಿರುವುದಾಗಿ ಚಿಕ್ಕೋಡಿ ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಘೋಷಿಸಿದ್ದಾರೆ.
ಭಾನುವಾರ ಘೋಡಗೇರಿ ಗ್ರಾಮದಲ್ಲಿ ನಡೆದ ವಿದ್ಯುತ್ ಸಹಕಾರ ಸಂಘದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಜೊಲ್ಲೆ, “ರೈತರ ಹಿತದೃಷ್ಟಿಯಿಂದ ನಾವು ಎಲ್ಲರೂ ಒಂದಾಗಿ ನೇತೃತ್ವ ವಹಿಸಿದ್ದೇವೆ. ಕಳೆದ ಮೂವತ್ತು ವರ್ಷಗಳಿಂದ ಸಹಕಾರ ಸಂಸ್ಥೆಗಳಲ್ಲಿ ದಬ್ಬಾಳಿಕೆ ನಡೆಸಿ ರೈತರನ್ನು ವಂಚಿಸುತ್ತ ಬಂದವರ ಕಾಲ ಮುಗಿದಿದೆ. ಈಗ ಹೊಸ ಶಕೆಯ ಆರಂಭವಾಗುತ್ತಿದೆ,” ಎಂದು ಕತ್ತಿ ಬಣವನ್ನು ಪರೋಕ್ಷವಾಗಿ ಟೀಕಿಸಿದರು.

“ *ಅಪ್ಪಣ್ಣಗೌಡರ ಕನಸು ನನಸಾಗಿಸುವ ಸಂಕಲ್ಪ”*
ಸಭೆಯಲ್ಲಿ ಮಾತನಾಡಿದ ಬೆಮ್ಯುಲ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ, “ವಿದ್ಯುತ್ ಸಂಘ ಮತ್ತು ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಯನ್ನು ಬಲಿಷ್ಠಗೊಳಿಸಿ, ಅಪ್ಪಣ್ಣಗೌಡ ಪಾಟೀಲರ ಕನಸು ನನಸಾಗಿಸಲು ನಾವು ಬದ್ಧರಾಗಿದ್ದೇವೆ. ರೈತರಿಗೆ ಪಾರದರ್ಶಕ ಆಡಳಿತ ನೀಡುವುದು ನಮ್ಮ ಮುಖ್ಯ ಗುರಿ. ಕಬ್ಬು ಪೂರೈಕೆ ಮಾಡಿದ ರೈತರಿಗೆ ಕೇವಲ 15 ದಿನಗಳಲ್ಲಿ ಬಿಲ್ ಸಂದಾಯ ಮಾಡುವ ವ್ಯವಸ್ಥೆ ಮಾಡುತ್ತೇವೆ,” ಎಂದು ಭರವಸೆ ನೀಡಿದರು.

“ಮೂವತ್ತು ವರ್ಷಗಳಿಂದ ಕೆಲವರ ಕಪಿಮುಷ್ಟಿಯಲ್ಲಿ ಸಿಲುಕಿರುವ ಸಂಸ್ಥೆಗಳನ್ನು ನಾವು ರೈತರ ಕೈಗೆ ಮರಳಿ ನೀಡುತ್ತೇವೆ. ಸಹಕಾರ ಸಂಸ್ಥೆಗಳನ್ನು ಸಾಲದ ಸುಳಿಯಿಂದ ಪಾರು ಮಾಡಿ, ನೆಮ್ಮದಿ ಆಡಳಿತ ನೀಡುವುದು ನಮ್ಮ ಸಂಕಲ್ಪ. ಸೆಪ್ಟೆಂಬರ್ 28ರ ಚುನಾವಣೆಯಲ್ಲಿ ನಮ್ಮ ಪೆನಲ್ ಗೆ ಬೆಂಬಲಿಸಿ, ರೈತರ ಸೇವೆಗೆ ಅವಕಾಶ ನೀಡಬೇಕೆಂದು ಪ್ರಬುದ್ಧ ಮತದಾರರಿಗೆ ಮನವಿ ಮಾಡುತ್ತೇನೆ,” ಎಂದು ಹೇಳಿದರು.

*ಸರ್ಕಾರದ ನೆರವು–ಪೈಲಟ್ ಯೋಜನೆ*
ಜೊಲ್ಲೆ ಅವರು, “ಎಲೆಮುನೊಳ್ಳಿ ಗ್ರಾಮದಲ್ಲಿ ಪೈಲಟ್ ಯೋಜನೆಯಡಿ ರೈತರಿಗೆ 24 ಗಂಟೆಯೊಳಗೆ ಟಿಸಿ (ಟ್ರಾನ್ಸ್‌ಫಾರ್ಮರ್ ಕನೆಕ್ಷನ್) ನೀಡುವ ಕೆಲಸ ಆರಂಭಿಸಿದ್ದೇವೆ. ಸತೀಶ್ ಜಾರಕಿಹೊಳಿ ಅವರ ಮೂಲಕ ಸರ್ಕಾರದಿಂದ ಆರ್ಥಿಕ ನೆರವು ಲಭ್ಯವಾಗಲಿದೆ,” ಎಂದು ಭರವಸೆ ನೀಡಿದರು.
ಸಭೆಯಲ್ಲಿ ಮಾಜಿ ಸಚಿವ ಶಶಿಕಾಂತ ನಾಯಿಕ, ವಿದ್ಯುತ್ ಸಹಕಾರ ಸಂಘದ ಅಧ್ಯಕ್ಷ ಜಯಗೌಡ ಪಾಟೀಲ, ಹೀರಾ ಶುಗರ್ಸ್ ಅಧ್ಯಕ್ಷ ಅಜ್ಜಪ್ಪ ಕಲ್ಲಟ್ಟಿ, ಅಶೋಕ ಅಂಕಲಿ, ಅಶೋಕ ಪಟ್ಟಣಶೆಟ್ಟಿ, ಪರಗೌಡ ಪಾಟೀಲ, ರವಿ ಹಿಡಕಲ್, ಬಸವರಾಜ ಪಾಟೀಲ, ಶಿವನಾಯಿಕ ನಾಯಿಕ, ಬಸವರಾಜ ಮಟಗಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
—