ಡಿಸಿಸಿ ಅಖಾಡಕ್ಕೆ ಡಿಕೆಶಿ ಎಂಟ್ರಿ..
ಜಾರಕಿಹೊಳಿ ವಿರುದ್ಧ ಕತ್ತಿ–ಎ.ಬಿ. ಪಾಟೀಲರ ಒಗ್ಗಟ್ಟು?
E belagavi ವಿಶೇಷ
ಬೆಳಗಾವಿ ಜಿಲ್ಲೆಯ ರಾಜಕೀಯ ಭೂಪಟದಲ್ಲಿ ಅಪ್ರತೀಕ್ಷಿತ ತಿರುವು ಸಿಕ್ಕಿದೆ. ಸಹಕಾರಿ ಸಂಸ್ಥೆಗಳ ಚುನಾವಣೆ ಅಖಾಡವೇ ಈಗ ಬೃಹತ್ ರಾಜಕೀಯ ಯುದ್ಧಭೂಮಿಯಾಗಿದೆ. ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘ ಹಾಗೂ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯ ತಾಪಮಾನ ದಿನೇದಿನೇ ಏರುತ್ತಿದ್ದು, ಈ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಹುಕ್ಕೇರಿ ಪ್ರವೇಶ ರಾಜಕೀಯ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಡಿಕೆಶಿ ಅವರ ಈ ಪ್ರವೇಶವು ಕೇವಲ ದಿ.ಉಮೇಶ ಕತ್ತಿ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕಷ್ಟೇ ಸೀಮಿತವಲ್ಲ. ಇದರ ಹಿಂದೆ ಮಹತ್ವದ ರಾಜಕೀಯ ಲೆಕ್ಕಾಚಾರ ಅಡಗಿದೆ ಎಂಬ ಗುಸುಗುಸು ಎಲ್ಲೆಡೆ ಕೇಳಿ ಬರುತ್ತಿದೆ. ಇದೊಂದು ರೀತಿಯಲ್ಲಿ ಸಚಿವ ಸತೀಶ ಜಾರಕಿಹೊಳಿ ಬಲವರ್ಧಿತ ಪ್ರಾಬಲ್ಯಕ್ಕೆ ಸವಾಲು ಎಸೆದಂತಾಗಿದೆ.
ಇದೇ ದಿ. 24 ರಂದೇ ಡಿಕೆಶಿ ಹುಕ್ಕೇರಿಗೆ ಆಗಮನವಾಗಲಿದೆ. ಅವರೊಂದಿಗೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಸಚಿವೆ ಹೆಬ್ಬಾಳಕರ, ಪ್ರಕಾಶ ಹುಕ್ಕೇರಿ, ಗಣೇಶ ಹುಕ್ಕೇರಿ, ಉತ್ತಮ ಪಾಟೀಲ, ಮುಂತಾದವರು ವೇದಿಕೆ ಹಂಚಿಕೊಳ್ಳಲಿದ್ದಾರೆ.
ಕತ್ತಿ-ಎ.ಬಿ. ಪಾಟೀಲ ಬಣ ಪುನರುತ್ಥಾನ?

ಹುಕ್ಕೇರಿ ತಾಲೂಕಿನಲ್ಲೇ ಕತ್ತಿ ಕುಟುಂಬದ ಪ್ರಭಾವವನ್ನು ಗಟ್ಟಿಗೊಳಿಸಲು ಮಾಜಿ ಸಂಸದ ರಮೇಶ ಕತ್ತಿ ಎಲ್ಲಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಮಾಜಿ ಸಚಿವ ಎ.ಬಿ.ಪಾಟೀಲರೂ ಸಹ ಕೈಜೋಡಿಸಿದ್ದಾರೆ.. ರಮೇಶ ಕತ್ತಿ ಭಾಷಣದ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಇದರಿಂದಾಗಿ ಹುಕ್ಕೇರಿಯ ಚುನಾವಣೆಯ ರಾಜಕೀಯ ತೀವ್ರತೆ ಮತ್ತಷ್ಟು ಹೆಚ್ಚಾಗಿದೆ.

ಉಮೇಶ ಕತ್ತಿ ಅವರ ನಿಧನದ ಬಳಿಕ ಕುಗ್ಗಿದ ಶಕ್ತಿಯ ಬಣವು ಈಗ ಡಿಕೆಶಿ ಬೆಂಬಲದ ನೆರಳಿನಲ್ಲಿ ಹೊಸ ಶಕ್ತಿ ಪಡೆದುಕೊಳ್ಳುತ್ತಿದೆ ಎಂಬ ಸುಳಿವು ದೊರೆಯುತ್ತಿದೆ.

ಪಿಎಲ್ಡಿ ಬ್ಯಾಂಕ್‌ನ ನೆನಪು, ಡಿಸಿಸಿ ಚುನಾವಣೆ ಹೊಸ ಕಣ
ಹಿಂದೆ ಪಿಎಲ್ಡಿ ಬ್ಯಾಂಕ್ ಚುನಾವಣೆಯ ಸಂದರ್ಭದಲ್ಲಿ ಜಾರಕಿಹೊಳಿ–ಹೆಬ್ಬಾಳ್ಳರ್ ಬಣದ ಸಂಘರ್ಷ ತೀವ್ರವಾಗಿದ್ದಾಗಲೇ ಡಿಕೆಶಿ ಮಧ್ಯಸ್ಥಿಕೆ ನಡೆಸಿದ್ದರು. ಆ ಅನುಭವದ ಹಿನ್ನಲೆಯಲ್ಲಿ, ಇದೀಗ ಡಿಸಿಸಿ ಚುನಾವಣೆ ಹೊತ್ತಿನಲ್ಲಿ ಅವರ ಹುಕ್ಕೇರಿ ಪ್ರವೇಶ ಮಧ್ಯಸ್ಥಿಕೆಯ ರಾಜಕೀಯ ಪಾಠ ಮರುಕಳಿಸುವುದೇ ಎಂಬುದು ಗಮನಾರ್ಹ.

ಸಣ್ಣ ಚುನಾವಣೆ, ದೊಡ್ಡ ಪರಿಣಾಮ
ಪ್ರಥಮ ಹಂತದಲ್ಲಿ ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ಒನ್‌ಸೈಡ್ ಆಗಿ ಕಾಣಿಸಿದ್ದರೂ, ಬಿರುಕುಗಳು ಬಲವಾದಂತೆ ಟಫ್ ಫೈಟ್ ಸನ್ನಿವೇಶ ಸೃಷ್ಟಿಯಾಗಿದೆ. ಕಾಂಗ್ರೆಸ್ನ ಮಹಿಳಾ ಮುಖಂಡೆಯೊಬ್ಬರು ನಡು ರಸ್ತೆಯಲ್ಲಿ ಕತ್ತಿ ಬಣದವರಿಗೆ ನೇರ ಸವಾಲು ಹಾಕಿದ ಘಟನೆ ರಾಜಕೀಯ ಸಮೀಕರಣವನ್ನು ಬದಲಿಸಿದೆ.