ಬೆಂಗಳೂರು:
ಸಾರ್ವಜನಿಕ ಹಾಗೂ ರಾಜಕೀಯ ವಲಯದಿಂದ ಉಂಟಾದ ತೀವ್ರ ಆಕ್ಷೇಪದ ಹಿನ್ನೆಲೆ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಜಾತಿಪಟ್ಟಿಯಲ್ಲಿ ಕ್ರಿಶ್ಚಿಯನ್ ಧರ್ಮದೊಂದಿಗೆ ಗುರುತಿಸಲಾಗಿದ್ದ ಮೂಲ ಹಿಂದೂ ಜಾತಿಗಳ 33 ಕಾಲಂಗಳನ್ನು ಕೈ ಬಿಡಲಾಗಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯ್ಕ್ ಭಾನುವಾರ ಸ್ಪಷ್ಟಪಡಿಸಿದರು.

ದೇವರಾಜ ಅರಸು ಭವನದಲ್ಲಿ ಸೋಮವಾರದಿಂದ ಆರಂಭಗೊಳ್ಳಲಿರುವ ಸಮೀಕ್ಷೆ ಹಿನ್ನೆಲೆಯಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಅವರು,
ಕಾಂತರಾಜು ವರದಿಯಲ್ಲಿ ಉಲ್ಲೇಖವಾಗಿದ್ದ ಜಾತಿಗಳು ಹಾಗೂ ಹೊಸದಾಗಿ ಸೇರಿಸಿದ ಜಾತಿಗಳನ್ನು ಒಳಗೊಂಡಂತೆ ಒಟ್ಟು 1561 ಜಾತಿಗಳ ಅಂತಿಮ ಪಟ್ಟಿ ಮಾಡಲಾಗಿತ್ತು.
ಆದರೆ ಇದರ ಬಗ್ಗೆ ಗೊಂದಲ ಹಾಗೂ ರಾಜಕೀಯ ನಾಯಕರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಆಯೋಗ ಸಭೆ ನಡೆಸಿ ಚರ್ಚೆ ಮಾಡಿದೆ.
ಅದರ ಫಲವಾಗಿ, ಸಮೀಕ್ಷೆ ನಡೆಸುವ ಆ್ಯಪ್‌ನ ಡ್ರಾಪ್ ಡೌನ್ ಮೆನುವಿನಿಂದ ವಿವಾದಿತ 33 ಕ್ರಿಶ್ಚಿಯನ್ ಜೊತೆಗೆ ಗುರುತಿಸಲಾಗಿದ್ದ ಹಿಂದೂ ಜಾತಿಗಳನ್ನು ಕೈಬಿಡಲಾಗಿದೆ ಎಂದರು.
ಆದರೆ, ಮಧುಸೂದನ್ ನಾಯ್ಕ್ ಅವರ ಪ್ರಕಾರ,
ಯಾರಾದರೂ ತಮ್ಮ ಜಾತಿಯನ್ನು ಇದೇ ಹೆಸರಿನಿಂದ ನಮೂದಿಸಲು ಬಯಸಿದರೆ, “ಇತರೆ” (Others) ಕಾಲಂನಲ್ಲಿ ನಮೂದಿಸಲು ಅವಕಾಶ ಇದೆ.
ಆ್ಯಪ್‌ನ ಮುಖ್ಯ ಪಟ್ಟಿಯಲ್ಲಿ ಮಾತ್ರ ಈ 33 ಜಾತಿ ಹೆಸರುಗಳು ಕಾಣಿಸದೇ ಇರುತ್ತವೆ.
ಈ ಬದಲಾವಣೆಯೊಂದಿಗೆ, ಮೊದಲು ಇದ್ದ 1561 ಜಾತಿಗಳ ಪಟ್ಟಿ ಈಗ 1528ಕ್ಕೆ ಕುಂಠಿತವಾಗಿದೆ ಎಂದು ಅವರು ವಿವರಿಸಿದರು.