ಇಂದು ಪಾಲಿಕೆ ಸಭೆ: ಕಂದಾಯ ಟಾರ್ಗೆಟ್
ಬೆಳಗಾವಿ
ರಾಜಕೀಯ ಕಾವು ತಾರಕಕ್ಕೇರಿರುವ ಸಂದರ್ಭದಲ್ಲಿ ಇಂದು (ಸೆ. 25) ನಡೆಯಲಿರುವ ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ಚರ್ಚೆಗೆ ವೇದಿಕೆಯಾಗಲಿದೆ.

ಕಳೆದ ಸಭೆಯಲ್ಲಿ ಬಿರುಸಿನ ಚರ್ಚೆಗೆ ಕಾರಣವಾದ ಕಂದಾಯ ಶಾಖೆ ಈ ಬಾರಿ ಮತ್ತೊಮ್ಮೆ ಸಭೆಯ ಕೇಂದ್ರಬಿಂದು ಆಗುವ ಸಾಧ್ಯತೆ ಇದೆ. ಸಾರ್ವಜನಿಕರಿಂದ ಬಂದಿರುವ ಅನ್ಯಾಯದ ದೂರಿನ ಹಿನ್ನೆಲೆಯಲ್ಲಿ ಈ ವಿಷಯ ಗಂಭೀರ ಸ್ವರೂಪ ತಾಳಲಿದೆ ಎನ್ನಲಾಗಿದೆ. ಕಳೆದ ಬಾರಿ ಮೇಯರ್ ವಿಚಾರವನ್ನು ಮುಂದೂಡಿದ್ದರಿಂದ, ಈ ಬಾರಿ ಆಡಳಿತ–ವಿರೋಧ ಪಕ್ಷದ ಸದಸ್ಯರು ಕೂಡಿಕೊಂಡು ಅಣದಿಕಾರಿಗಳ ವಿರುದ್ಧ ವಾಗ್ಧಾಳಿ ನಡೆಸಬಹುದು.

ಪಿಐಡಿ ಮತ್ತು ಇ-ಆಸ್ತಿ ವ್ಯವಸ್ಥೆಯಲ್ಲಿರುವ ಲೋಪದೋಷಗಳನ್ನೂ ಪಕ್ಷಾತೀತವಾಗಿ ಸದಸ್ಯರು ಪ್ರಸ್ತಾಪಿಸುವ ನಿರೀಕ್ಷೆ ಇದೆ. ಜೊತೆಗೆ 217 ಕೋಟಿ ರೂ. ಆಡಿಟ್ ಆಕ್ಷೇಪಣೆ ಸಭೆಗೆ ಮತ್ತೊಂದು ಬಿಸಿಯೂಟ ನೀಡಲಿದ್ದು, ಇದಕ್ಕೆ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ ಎಂಬ ವಾದಗಳು ಕೇಳಿಬರುತ್ತಿವೆ. ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ ಸ್ವತಃ ಅಧಿಕಾರಿಗಳ ವಿರುದ್ಧ ಕಿಡಿಕಾರಲಿದ್ದಾರೆ ಎಂಬ ಸೂಚನೆಗಳು ಈಗಾಗಲೇ ಹೊರಬಿದ್ದಿವೆ.
ಸಭೆಯಲ್ಲಿ ಪೌರ ಕಾರ್ಮಿಕರು ಮತ್ತು ನೈರ್ಮಲ್ಯ ಕಾರ್ಮಿಕರಿಗೆ ಬೆಳಗಿನ ಉಪಹಾರ ಪೂರೈಕೆ, ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ನಿಯಂತ್ರಣ, ಮತ್ತಿತರ ನಾಗರಿಕ ಸಮಸ್ಯೆಗಳೂ ಚರ್ಚೆಗೆ ಬರಲಿವೆ.