ಎಸ್ಜಿಬಿಐಟಿಯಲ್ಲಿ ಎನ್ಎಸ್ಎಸ್ ದಿನಾಚರಣೆ
ಸಮಾಜ ಸೇವೆಯ ಮೌಲ್ಯಗಳನ್ನು
ಜೀವನದಲ್ಲಿ ಅಳವಡಿಸಿಕೊಳ್ಳಿ
ಬೆಳಗಾವಿ:
“ಎನ್ಎಸ್ಎಸ್ ಪ್ರತಿಜ್ಞಾವಿಧಿ ಕೇವಲ ಪದಗಳ ಸಮೂಹವಲ್ಲ, ಅದು ಜೀವನ ಸಾಗರದಲ್ಲಿ ದೀಪಸ್ತಂಭದಂತಿದೆ. ಪ್ರತಿಯೊಬ್ಬ ವಿದ್ಯಾರ್ಥಿ ಇದರ ಮೌಲ್ಯಗಳನ್ನು ಅಳವಡಿಸಿಕೊಂಡರೆ ಸಮಾಜದ ನಿಜವಾದ ನಾಯಕತ್ವ ತೋರಿಸಬಲ್ಲರು ಎಂದು ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಡಾ . ಎಫ್.ವಿ. ಮಾನ್ವಿ ಹೇಳಿದರು.

ನಗರದಲ್ಲಿಂದು ಎಸ್ಜಿಬಿಐಟಿ ಮಹಾವಿದ್ಯಾಲಯದಲ್ಲಿ ನಡೆದ ಎನ್ಎಸ್ಎಸ್ ದಿನಾಚರಣೆ ಕಾರ್ಯಕ್ರಮದಲ್ಲಿಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಸೇವೆಯ ಮೂಲಕ ಮಾತ್ರ ಜೀವನದ ಅರ್ಥವನ್ನು ಅರಿಯಬಹುದು. ಸೇವೆ ಮಾಡಿದವನು ಸಮಾಜದಲ್ಲಿ ಶಾಶ್ವತ ಗುರುತನ್ನು ಮೂಡಿಸುತ್ತಾನೆ ಎಂದರು.ವಿದ್ಯಾರ್ಥಿಗಳು ತಮ್ಮ ನಡೆ-ನುಡಿಗಳ ಮೂಲಕ ಇತರರಿಗೆ ಮಾದರಿಯಾಗಬೇಕು. ಇದು ಎನ್ಎಸ್ಎಸ್ನ ನಿಜವಾದ ಸಾಧನೆ. ಎಂದು ಅವರು ಹೇಳಿದರು.
ಪ್ರಾಚಾರ್ಯ ಡಾ. ಬಿ. ಆರ್. ಪಟಗುಂದಿ ಮಾತನಾಡಿ, “ವಿದ್ಯಾರ್ಥಿ ಜೀವನವೇ ಶಿಸ್ತಿನ ಪಾಠಶಾಲೆ. ಎನ್ಎಸ್ಎಸ್ನ ಸೇವಾ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಈ ಶಿಸ್ತಿನ ಪಾಠವನ್ನು ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಎನ್ಎಸ್ಎಸ್ ಘಟಕಕ್ಕೆ ಈ ಬಾರಿ ಸೇರ್ಪಡೆಗೊಂಡ ಹೊಸ ಸ್ವಯಂಸೇವಕರಿಗೆ ಪ್ರಾಚಾರ್ಯರು ಸಾಂಕೇತಿಕವಾಗಿ ಬ್ಯಾಡ್ಜ್ಗಳನ್ನು ವಿತರಿಸಿ ಸಮಾಜ ಸೇವೆಯ ನೂತನ ಪಯಣಕ್ಕೆ ಚಾಲನೆ ನೀಡಿದರು.
ದೈಹಿಕ ಶಿಕ್ಷಕ ಶ್ರೀಧರ ನೇಮಗೌಡ ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪ್ರಾಸ್ತಾವಿಕ ಭಾಷಣ ಮಾಡಿದ ಎನ್ಎಸ್ಎಸ್ ಘಟಕದ ಕಾರ್ಯಕ್ರಮಾಧಿಕಾರಿ ಪ್ರೊ. ಮಂಜುನಾಥ ಶರಣಪ್ಪನವರ್ ಅವರು, ನಾಟ್ ಮೀ, ಬಟ್ ಯು ಎನ್ನುವ ಧ್ಯೇಯವಾಕ್ಯವು ನಿಜವಾದ ಮಾನವೀಯತೆಯ ಪ್ರತೀಕ. ಸಮಾಜ ಸೇವೆಯ ಮೂಲಕ ವಿದ್ಯಾರ್ಥಿಗಳು ರಾಷ್ಟ್ರ ನಿರ್ಮಾಣದಲ್ಲಿ ಪಾಲ್ಗೊಂಡಾಗ ಜೀವನವೇ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.