ಹುಕ್ಕೇರಿಯಲ್ಲಿ ಗರಿಗೆದರುತ್ತಿರುವ ರಾಜಕೀಯ ಕದನ.
ಕತ್ತಿ – ಜಾರಕಿಹೊಳಿ ಸಂಘರ್ಷಕ್ಕೆ ಸಹಕಾರಿ ಸಂಘದ ಚುನಾವಣೆ ವೇದಿಕೆ
ಬೆಳಗಾವಿ:
ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯು ಈ ಬಾರಿ ಸಾಮಾನ್ಯ ಚುನಾವಣೆ ಅಲ್ಲ.
ಇದು “ಲೆಕ್ಕ ಕೊಡಿ, ಲೆಕ್ಕ ಕೊಡಿ” ಎಂಬ ರಾಜಕೀಯ ಘೋಷಣೆಯ ಅಖಾಡವಾಗಿದೆ.
ಒಂದೆಡೆ ಕತ್ತಿ ಕುಟುಂಬ, ಮತ್ತೊಂದೆಡೆ ಜಾರಕಿಹೊಳಿ ಸಹೋದರರು – ಎರಡೂ ಕಡೆಯಿಂದ ಲೆಕ್ಕದ ರಾಜಕೀಯ ಜನಮನ ಸೆಳೆಯಲು ತೀವ್ರವಾಗಿ ಆಡುವ ಆಟ.
*ಕತ್ತಿಯ ಸವಾಲು – “ಜಾರಕಿಹೊಳಿಯವರ ಲೆಕ್ಕವೇನು?”*
ಮಾಜಿ ಸಂಸದ ರಮೇಶ ಕತ್ತಿ, ತಮ್ಮ ಪ್ರಚಾರದಲ್ಲಿ “ಜಾರಕಿಹೊಳಿ ಕುಟುಂಬ ಸಹಕಾರ ಕ್ಷೇತ್ರದಲ್ಲಿ ನೀಡಿದ ಲೆಕ್ಕ ಏನು? ಜನರ ಹಣವನ್ನು ಹೇಗೆ ಬಳಸಿದ್ದಾರೆ?” ಎಂದು ಹಚ್ಚಿ ಹಿಡಿದಿದ್ದಾರೆ.
ಅವರ ಭಾಷಣದಲ್ಲಿ “ಸಾಧನೆ”ಗಿಂತ ಹೆಚ್ಚು “ಜಾರಕಿಹೊಳಿ ಕುಟುಂಬದ ಲೆಕ್ಕ”ವೇ ಪ್ರಸ್ತಾಪವಾಗುತ್ತಿದೆ.
*ಆದರೆ ಜನತೆ ಕೇಳುತ್ತಿರುವ ಪ್ರಶ್ನೆ –*
“ಜಾರಕಿಹೊಳಿಯರ ಜೊತೆ ಹತ್ತು ವರ್ಷ ಒಂದೇ ವೇದಿಕೆಯಲ್ಲಿ ಇದ್ದಾಗ ಲೆಕ್ಕ ಕೇಳದವರು, ಈಗ ಬೇರಾದ ಮೇಲೆ ಮಾತ್ರ ಏಕೆ ‘ಲೆಕ್ಕ, ಲೆಕ್ಕ’ ಅಂತಾ ಕೂಗುತ್ತಿದ್ದಾರೆ?”
*ಮೂವತ್ತು ವರ್ಷದ ಹಿಡಿತ – ಲೆಕ್ಕ ತೋರಿಸದ ಕತ್ತಿ?*

ಹುಕ್ಕೇರಿ ವಿದ್ಯುತ್ ಸಂಘ 30 ವರ್ಷಗಳ ಕಾಲ ಕತ್ತಿ ಕುಟುಂಬದ ಹಿಡಿತದಲ್ಲಿ ಇತ್ತು.
ಈ ಅವಧಿಯ ಸಾಧನೆ, ರೈತರ ಲಾಭ, ಅಭಿವೃದ್ಧಿಯ ಲೆಕ್ಕವನ್ನು ತೋರಿಸುವ ಬದಲು “ಹೊರಗಿನವರು – ಒಳಗಿನವರು” ಎಂಬ ರಾಜಕೀಯ ಮಾತಿನಿಂದ ಜನರ ಗಮನ ಬೇರೆಡೆ ತಿರುಗಿಸಲಾಗಿದೆ ಎಂಬ ಟೀಕೆ ಕೇಳಿಬರುತ್ತಿದೆ.
“ಮೊದಲು ನೀವು ನಿಮ್ಮ ಲೆಕ್ಕ ತೋರಿಸಿ, ನಂತರ ಇತರರ ಲೆಕ್ಕ ಕೇಳಿ” ಎಂಬ ಸಂದೇಶ ಜನಮನದಲ್ಲಿ ಹರಿದಾಡುತ್ತಿದೆ.
*ಜಾರಕಿಹೊಳಿಯವರ ತಿರುಗೇಟು – “ನಮ್ಮ ಲೆಕ್ಕ ಸಿದ್ಧ”*

ಘಟಪ್ರಭಾ ಸಕ್ಕರೆ ಕಾರ್ಖಾನೆಯ 30 ವರ್ಷದ ಲೆಕ್ಕವನ್ನು ನಾವು ತಕ್ಷಣ ಕೊಡಲು ಸಿದ್ಧ. ಆದರೆ ನೀವು ಸಂಕೇಶ್ವರ ಹಿರಣ್ಯಕೇಶಿ ಕಾರ್ಖಾನೆ, ಹುಕ್ಕೇರಿ ವಿದ್ಯುತ್ ಸಂಘ, ಬಿಡಿಸಿಸಿ ಬ್ಯಾಂಕ್ ಹತ್ತು ವರ್ಷದ ಲೆಕ್ಕ ನೀಡಲು ಸಿದ್ಧರೇ?” ಎಂದು ನೇರ ಸವಾಲು ಹಾಕಿದ್ದಾರೆ.
ಇದೇ ವೇಳೆ ಸತೀಶ ಜಾರಕಿಹೊಳಿ ಸಹ ತಮ್ಮ ಶೈಲಿಯಲ್ಲಿ –

“ಬೈಯುವುದನ್ನು ಬಿಟ್ಟು ಸಾಧನೆ ತೋರಿಸಿ. ಜನಸೇವೆಯ ಲೆಕ್ಕವೇ ಜನರನ್ನು ಒಲಿಸಲಿದೆ” ಎಂದು ಕತ್ತಿಯವರನ್ನು ಪ್ರಶ್ನಿಸಿದ್ದಾರೆ.
*ಅಂತಿಮ ಲೆಕ್ಕ – ಜನತೆಯ ಕೈಯಲ್ಲಿ*
ಈ ರಾಜಕೀಯ ಮಾತಿನ ಸಮರದಲ್ಲಿ ಕೊನೆಯ ಲೆಕ್ಕ ಹಾಕಬೇಕಾದವರು ಹುಕ್ಕೇರಿಯ ಮತದಾರರು.
“ಯಾರದ್ದೇ ಲೆಕ್ಕ, ಯಾರದ್ದೇ ಭಾಷಣ… ನಮಗೆ ಬೇಕಾದದ್ದು ಸೇವೆ ಮತ್ತು ಅಭಿವೃದ್ಧಿಯ ನಿಜವಾದ ಲೆಕ್ಕ” ಎಂದು ಜನತೆ ಸ್ಪಷ್ಟ ಸಂದೇಶ ನೀಡುತ್ತಿದ್ದಾರೆ.
ಸೆಪ್ಟೆಂಬರ್ 28ರಂದು ನಡೆಯಲಿರುವ ಈ ಚುನಾವಣೆ ಕೇವಲ ಸಹಕಾರಿ ಸಂಘದ ಆಡಳಿತ ಬದಲಾವಣೆಯಲ್ಲ –
ಇದು ಕತ್ತಿ – ಜಾರಕಿಹೊಳಿ ಕುಟುಂಬಗಳ ದೀರ್ಘಕಾಲದ ಪ್ರಾಬಲ್ಯ ಹೋರಾಟಕ್ಕೆ ಜನತೆ ಹಾಕುವ ಅಂತಿಮ ಲೆಕ್ಕದ ತೀರ್ಪು ಆಗಲಿದೆ.