Headlines

ಸೋಲು ಮುಖಭಂಗವಲ್ಲ, ಹೋರಾಟ ಮುಂದುವರಿಯುತ್ತದೆ” – ಸಚಿವ ಸತೀಶ್

ಬೆಳಗಾವಿ:
ಹುಕ್ಕೇರಿ ಸಹಕಾರಿ ಸಂಘದ ಚುನಾವಣೆಯಲ್ಲಿ ಸೋಲು ಅನುಭವಿಸಿದ ನಂತರ, ಸಚಿವ ಸತೀಶ್ ಜಾರಕಿಹೊಳಿ ಅವರು ಬೆಳಗಾವಿಯ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗಳ ಎದುರು ಮೊದಲ ಬಾರಿಗೆ ಬಾಯ್ಬಿಟ್ಟರು.

ಸೋಲು-ಗೆಲುವು ಪ್ರಕ್ರಿಯೆಯ ಭಾಗ, ಆದರೆ ನಮ್ಮ ಪ್ರಯತ್ನ ವ್ಯರ್ಥವಾಗಿಲ್ಲ. ಕಾರ್ಯಕರ್ತರಿಗೆ ಧೈರ್ಯ ತುಂಬಲು ನಾವು ಕಣಕ್ಕಿಳಿದಿದ್ದೇವೆ,” ಎಂದು ಅವರು ಸ್ಪಷ್ಟಪಡಿಸಿದರು.

ಸೋಲಿನ ಕಾರಣಗಳ ವಿಶ್ಲೇಷಣೆ

“ಹೆಚ್ಚು ಮತಗಳು ಎದುರಾಳಿಗಳಿಗೆ ಬಿದ್ದವು, ಅನೇಕ ಮತಗಳು ರಿಜೆಕ್ಟ್‌ ಆದವು – ಇದು ಸೋಲಿಗೆ ಪ್ರಮುಖ ಕಾರಣ” ಎಂದು ಸತೀಶ್ ಅಭಿಪ್ರಾಯಪಟ್ಟರು.

“ಕೋ-ಆಪರೇಟಿವ್ ಕ್ಷೇತ್ರ ನಮಗೆ ಹೊಸದು ಆದರೂ, ಕೇವಲ ಮೂರು ತಿಂಗಳಲ್ಲಿ 12 ಸಾವಿರ ಮತಗಳನ್ನು ಪಡೆದೆವು. 30 ವರ್ಷಗಳಿಂದ ಬೇರೂರಿರುವ ಬಣವು 20 ಸಾವಿರ ಮತ ಪಡೆದಿದೆ,” ಎಂದರು.

“ಮತದಾರರ ಮನವೊಲಿಸುವಲ್ಲಿ ವಿಫಲರಾದೆವು, ಭಾಷಣಕ್ಕಿಂತ ಹಣ-ಗಾಡಿ-ಕತ್ತಿ ಪ್ರಭಾವ ಹೆಚ್ಚು ಕಂಡಿತು” ಎಂಬ ಅಸಮಾಧಾನವನ್ನು ಅವರು ಹೊರಹಾಕಿದರು.

ವಿರೋಧಿಗಳ ಏಕತೆ, ನಮ್ಮ ಬಲಹೀನತೆ

“ಜಾರಕಿಹೊಳಿ ಕುಟುಂಬದ ವಿರೋಧಿಗಳು ಪಕ್ಷಭೇದ ಮರೆತು ಒಂದಾದರು. ನಮ್ಮ ವಿರೋಧಿಗಳು ಏಕತೆಯಿಂದ ಹೋರಾಡಿದರು. ಆದರೆ ನಮ್ಮ ಕಾರ್ಯಕರ್ತರ ತಂಡ ಸಮಗ್ರವಾಗಿ ಕೆಲಸ ಮಾಡಲಿಲ್ಲ” ಎಂದು ಸಚಿವರು ಒಪ್ಪಿಕೊಂಡರು.
ಅದೇ ಸಮಯದಲ್ಲಿ, “ಇದು ತಾಲೂಕು ಮಟ್ಟದ ಚುನಾವಣೆ, ಜಿಲ್ಲೆ ಅಥವಾ ರಾಜ್ಯ ಮಟ್ಟದ ಮುಖಭಂಗವಲ್ಲ” ಎಂದು ಅವರು ನುಡಿದರು.

ರಮೇಶ್ ಜಾರಕಿಹೊಳಿ – ಅವಶ್ಯಕತೆ ಮತ್ತೆ!

ಸತೀಶ್ ಅವರು ರಮೇಶ್ ಜಾರಕಿಹೊಳಿ ಕುರಿತು ಸ್ಪಷ್ಟವಾಗಿ ಹೇಳಿ, “ಅವರನ್ನು ಹೊರಗಿಟ್ಟಿದ್ದು ಸೋಲಿಗೆ ಕಾರಣವಾಗಿದೆ. ಇಂದು ಅವರ ಅವಶ್ಯಕತೆ ಮತ್ತೆ ಇದೆ” ಎಂದು ಒಪ್ಪಿಕೊಂಡರು.
ಅದೇ ಸಮಯದಲ್ಲಿ, “ಯಾವದೋ ಸೊಸೈಟಿ ಗೆದ್ದರೆ ಲೀಡರ್ ಆಗುವುದಿಲ್ಲ; ಜನರ ಕೆಲಸ ಮಾಡಿದಾಗ ಮಾತ್ರ ಲೀಡರ್ ಆಗಬಹುದು” ಎಂದು ವಿರೋಧಿಗಳಿಗೆ ಸಂದೇಶ ಕಳುಹಿಸಿದರು.

ಡಿಸಿಸಿ ಬ್ಯಾಂಕ್ ಚುನಾವಣೆಯ ಕುರಿತು ಮಾತನಾಡಿದ ಸತೀಶ್, “ಹುಕ್ಕೇರಿಯ ಕುಸ್ತಿ ಇಲ್ಲಿ ಒಗೆಯಲು ಸಾಧ್ಯವಿಲ್ಲ. ಅದು ತಾಲೂಕಿಗೆ ಸೀಮಿತವಾದ ಚುನಾವಣೆ” ಎಂದು ಪ್ರತಿಕ್ರಿಯಿಸಿದರು.
ಮಲಪ್ರಭಾ ಕಾರ್ಖಾನೆಗೆ ಅನುದಾನದ ಕುರಿತು ಅವರು, “ಸರ್ಕಾರ ಕೆಲವು ಕಾರ್ಖಾನೆಗಳಿಗೆ ಹಣ ಕೊಡಲು ಒಪ್ಪಿದೆ. ಅದನ್ನು ಮುಂದಿನ ದಿನಮಾನಗಳಲ್ಲಿ ನೋಡೋಣ” ಎಂದರು.

ವಿರೋಧಿಗಳ ಆರೋಪಗಳಿಗೆ ಉತ್ತರ

“ಜೈ ಕಿಸಾನ್ ಮಾರುಕಟ್ಟೆ ಎಪಿಎಂಸಿಗೆ ಶಿಫ್ಟ್ ಆದದ್ದು ನನ್ನ ಆದೇಶವಲ್ಲ, ಸರ್ಕಾರದ ಆದೇಶ” ಎಂದರು.
“ಬೆಳೆಹಾನಿ-ಮಳೆಹಾನಿಗೆ ಪರಿಹಾರ ನೀಡಲು ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ, ಡಿಸಿಯವರ ಖಾತೆಯಲ್ಲಿ ಹಣವಿದೆ” ಎಂದು ಅವರು ವಿಜಯೇಂದ್ರನ ಆರೋಪ ತಳ್ಳಿ ಹಾಕಿದರು.

Leave a Reply

Your email address will not be published. Required fields are marked *

error: Content is protected !!