ಮೂರು ದಿನಗಳ ಅದ್ಧೂರಿ ಉತ್ಸವಕ್ಕೆ 5 ಕೋಟಿ ಅನುದಾನ – ಖ್ಯಾತ ಕಲಾವಿದರ ಸಾಂಸ್ಕೃತಿಕ ರಸಮಂಜರಿ
ಬೆಳಗಾವಿ:
ಕಿತ್ತೂರಿನಲ್ಲಿ ಮತ್ತೆ ರಾಣಿ ಚೆನ್ನಮ್ಮನ ಶೌರ್ಯಗಾಥೆ ಜೀವಂತಗೊಳ್ಳಲಿದೆ. ಅ. 23ರಿಂದ 25ರವರೆಗೆ ನಡೆಯಲಿರುವ ಮೂರು ದಿನಗಳ ಕಿತ್ತೂರು ಉತ್ಸವಕ್ಕೆ ಭರ್ಜರಿ ಸಿದ್ಧತೆಗಳು ಪೂರ್ಣಗೊಂಡಿವೆ.
“200ನೇ ವಿಜಯೋತ್ಸವದ ಅದ್ಧೂರಿಯಿಗೂ ಕಡಿಮೆ ಆಗದ ರೀತಿಯಲ್ಲಿ ಈ ಬಾರಿಯೂ ಉತ್ಸವ ನಡೆಯಲಿದೆ,” ಎಂದು ಶಾಸಕ ಬಾಬಾಸಾಹೇಬ ಪಾಟೀಲ ಘೋಷಿಸಿದರು.
ಉದ್ಘಾಟನೆಗೆ ಕೃಷ್ಣ ಬೈರೇಗೌಡ, ಸಮಾರೋಪಕ್ಕೆ ಸಿದ್ದರಾಮಯ್ಯ?
ಉಪಸಮಿತಿ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾಟೀಲ ಅವರು “ಮೊದಲ ದಿನ ಕಂದಾಯ ಸಚಿವ ಕೃಷ್ಣ ಬೈರೇಗೌಡ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಶಿವರಾಜ ತಂಗಡಗಿ, ಸಂತೋಷ ಲಾಡ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.

ಸಮಾರೋಪ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವತಃ ಆಗಮಿಸುವ ನಿರೀಕ್ಷೆ ಇದೆ,” ಎಂದರು.
ಸಂಗೀತ–ಸಾಹಿತ್ಯದ ಮೇಳ.
ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಉತ್ಸವದ ರೂಪರೇಖೆ ವಿವರಿಸಿ ಹೇಳಿದರು:
ಈ ಬಾರಿ ಯಾವುದೇ ಅನುದಾನ ಕೊರತೆ ಇಲ್ಲ. 5 ಕೋಟಿಯ ಪೈಕಿ 3.5 ಕೋಟಿ ರೂ. ಈಗಾಗಲೇ ಬಿಡುಗಡೆಯಾಗಿದೆ. 23ರಂದು ಗಾಯಕಿ ಅನುರಾಧಾ ಭಟ್, 24ರಂದು ಸರಿಗಮಪ ತಂಡ, 25ರಂದು ಬಾಲಿವುಡ್ ಖ್ಯಾತ ಗಾಯಕಿ ನೀತಿ ಮೋಹನ್ ಮನರಂಜನೆಯ ರಸದೌತಣ ಉಣಬಡಿಸಲಿದ್ದಾರೆ. ಸ್ಥಳೀಯ ಕಲಾವಿದರಿಗೂ ಪ್ರಾಮುಖ್ಯತೆ ನೀಡಲಾಗಿದೆ.”

ಮುಖ್ಯ ವೇದಿಕೆ ಸೇರಿ ಮೂರು ವೇದಿಕೆಗಳಲ್ಲಿ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಚಟುವಟಿಕೆಗಳು ನಡೆಯಲಿವೆ. ನಾಡಿನ ಜನತೆಗೆ ಭವ್ಯ ಮೆರವಣಿಗೆಯೂ ಕಣ್ತುಂಬ ಸಂಭ್ರಮ ನೀಡಲಿದೆ.
“ಕಿತ್ತೂರು ಉತ್ಸವ ರಾಷ್ಟ್ರ ಹಬ್ಬದ ಸಾಂಕೇತಿಕ”

“ರಾಣಿ ಚೆನ್ನಮ್ಮ ಕೇವಲ ಕರ್ನಾಟಕದ ಹೋರಾಟಗಾರ್ತಿ ಅಲ್ಲ, ಅವರು ರಾಷ್ಟ್ರದ ಪ್ರತೀಕ.
ಹಿಂದಿನ ವರ್ಷ ಮುಖ್ಯಮಂತ್ರಿಗಳು ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ರೀತಿಯೇ ಜನಮನ ಗೆದ್ದಿತ್ತು. ಈ ಬಾರಿಯೂ ಅದೇ ಮಟ್ಟದ ಉತ್ಸಾಹ ಇದೆ,”ಎಂದು ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ತಿಳಿಸಿದರು.ಡ್ರೋನ್ ಶೋ ಇಲ್ಲ –
“ಉತ್ತರ ಭಾರತದ ಕಲಾವಿದರಿಗೆ ಈ ನಾಡಿನ ಇತಿಹಾಸ ಪರಿಚಯವಾಗಬೇಕೆಂಬ ಉದ್ದೇಶದಿಂದ ಅವರನ್ನು ಆಹ್ವಾನಿಸಿದ್ದೇವೆ. ಸ್ಯಾಂಡಲ್ವುಡ್ ಖ್ಯಾತ ಕಲಾವಿದರು ಸಹ ಭಾಗಿಯಾಗಲಿದ್ದಾರೆ. ಆದರೆ ಈ ಬಾರಿ ಡ್ರೋನ್ ಶೋ ನಡೆಯುವುದಿಲ್ಲ,” ಎಂದು ಅವರು ಸ್ಪಷ್ಟಪಡಿಸಿದರು.
ಹಿಂದಿನ ವರ್ಷ ಕೇವಲ 1 ಕೋಟಿ ಅನುದಾನ ಇದ್ದರೆ, ಈಗ 5 ಕೋಟಿ ರೂ. ಬಂದಿದೆ. ಮುಂದಿನ ವರ್ಷಕ್ಕಾಗಿ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿ ಉತ್ಸವವನ್ನು ಇನ್ನಷ್ಟು ವಿಸ್ತರಿಸುವ ಯೋಚನೆ ಇದೆ ಎಂದರು.
ವಿದ್ಯಾರ್ಥಿಗಳಿಗೆ ಪ್ರೇರಣೆಯ ವೇದಿಕೆ
“ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಸಾಹಿತ್ಯ ಮತ್ತು ವಿಚಾರಗೋಷ್ಠಿಗಳಿಗೆ ವಿಶೇಷ ಆದ್ಯತೆ ನೀಡಲಾಗಿದೆ. ಶಾಲೆ–ಕಾಲೇಜು ವಿದ್ಯಾರ್ಥಿಗಳು ಚೆನ್ನಮ್ಮನ ಸಾಹಸ, ಶೌರ್ಯ ಹಾಗೂ ಕಿತ್ತೂರಿನ ಇತಿಹಾಸ ಅರಿಯಬೇಕು.
ಇದಕ್ಕಾಗಿ ವಿಷಯವಾರು ವಿಚಾರಗೋಷ್ಠಿಗಳನ್ನು ಆಯೋಜಿಸಲಾಗಿದೆ,” ಎಂದು ರೋಷನ್ ತಿಳಿಸಿದರು.
ಕೋಟೆಗೆ ಹೊಸ ರೂಪ – ಥೀಮ್ ಪಾರ್ಕ್ ಶೀಘ್ರದಲ್ಲೇ
“ಕಿತ್ತೂರು ಕೋಟೆ ಮತ್ತು ಅರಮನೆ ಅಭಿವೃದ್ಧಿ ಕಾರ್ಯಗಳಿಗೆ 18 ಕೋಟಿ ರೂ. ಅನುದಾನ ನೀಡಲಾಗಿದೆ.
ಇನ್ನೂ 58 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಥೀಮ್ ಪಾರ್ಕ್ ಟೆಂಡರ್ ಹಂತದಲ್ಲಿದೆ.
ಮುಂದಿನ ಐದು ವರ್ಷಗಳಲ್ಲಿ ಕೋಟೆಗೆ ಹೊಸ ರೂಪ ನೀಡುವುದು ನನ್ನ ಮೊದಲ ಆದ್ಯತೆ,” ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ ಹೇಳಿದರು
ಉತ್ಸವದ ಹಿನ್ನೆಲೆ
ಕಿತ್ತೂರು ಉತ್ಸವವನ್ನು 1950ರಿಂದ ರಾಜ್ಯ ಮಟ್ಟದಲ್ಲಿ ಆಚರಿಸಲಾಗುತ್ತಿದೆ.
1824ರಲ್ಲಿ ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿದ ವಿಜಯೋತ್ಸವದ ಸ್ಮರಣೆ ಈ ಹಬ್ಬದ ಆತ್ಮ.
ಕಳೆದ ವರ್ಷ 200ನೇ ವಿಜಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗಿತ್ತು.
ಈ ಬಾರಿ “ಚೆನ್ನಮ್ಮ – ಚೇತನದ ಕಿತ್ತೂರು” ಎಂಬ ಥೀಮ್‌ನಡಿ ಉತ್ಸವ ನಡೆಯಲಿದೆ.
ಈ ವೇಳೆ ಜಿ.ಪಂ ಸಿಇಒ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ, ಎಸಿ ಪ್ರವೀಣ ಜೈನ್, ಎಸಿ ಶ್ರವಣ ನಾಯಿಕ, ಹಾಗೂ ಕನ್ನಡ ಮತ್ತು ಸಂಸ್ಕೃತಿ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಉಪಸ್ಥಿತರಿದ್ದರು.

