ಬಳ್ಳಾರಿಯಲ್ಲಿ 16 ಕೋಟಿ ರೂ. ಜಿಎಸ್‌ಟಿ ವಂಚನೆ ಬಯಲು – ಒಬ್ಬನ ಬಂಧನ

ಬಳ್ಳಾರಿ:
ಬೆಳಗಾವಿ ಘಟಕದ ಕೇಂದ್ರ ಜಿಎಸ್‌ಟಿ ಗುಪ್ತಚರ ನಿರ್ದೇಶನಾಲಯ (ಡಿ.ಜಿ.ಜಿ.ಐ) ಅಧಿಕಾರಿಗಳ ದಾಳಿಯಿಂದ ಬಳ್ಳಾರಿಯಲ್ಲಿ ಭಾರೀ ಮಟ್ಟದ ತೆರಿಗೆ ವಂಚನೆ ಬಯಲಾಗಿದೆ. ಮೂರು ಬೇರೆ ಬೇರೆ ಸ್ಥಳಗಳಲ್ಲಿ ನಡೆಸಿದ ಶೋಧ ಮತ್ತು ತಪಾಸಣೆ ಕಾರ್ಯಾಚರಣೆಯಲ್ಲಿ 16 ಕೋಟಿ ರೂ. ಮೌಲ್ಯದ ನಕಲಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ವಹಿವಾಟು ಪತ್ತೆಯಾಗಿದೆ.

ತನಿಖೆಯ ಪ್ರಾಥಮಿಕ ಹಂತದಲ್ಲಿಯೇ, ಯಾವುದೇ ನೈಜ ವ್ಯವಹಾರ ಚಟುವಟಿಕೆಗಳಿಲ್ಲದೇ ನಕಲಿ ಸಂಸ್ಥೆಗಳ ಜಾಲವನ್ನು ರಚಿಸಿ, ನಕಲಿ ಇನ್‌ವಾಯ್ಸ್ ಮತ್ತು ಇ-ವೇ ಬಿಲ್‌ಗಳನ್ನು ಸೃಷ್ಟಿಸಿರುವುದಾಗಿ ಬಹಿರಂಗವಾಗಿದೆ. ದತ್ತಾಂಶ ವಿಶ್ಲೇಷಣೆ ಆರೋಪಿಯು ನಡೆಸಿದ ಚಟುವಟಿಕೆಗಳು ಸಂಪೂರ್ಣ ವಂಚನೆಯ ಸ್ವರೂಪದ್ದೇ ಎಂದು ದೃಢಪಡಿಸಿದೆ.

ಶೋಧದ ವೇಳೆ ನಕಲಿ ಬಾಡಿಗೆ ಒಪ್ಪಂದಗಳು, ಲೆಟರ್‌ಹೆಡ್‌ಗಳು, ನಕಲಿ ಇನ್‌ವಾಯ್ಸ್‌ಗಳು ಹಾಗೂ ವಂಚನೆಗೆ ಬಳಸಿದ ಆಧಾರ್, ಪ್ಯಾನ್ ಕಾರ್ಡ್ ಸೇರಿದಂತೆ ಹಲವಾರು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯು ತನ್ನ ಉದ್ಯೋಗಿಗಳ ವೈಯಕ್ತಿಕ ದಾಖಲೆಗಳನ್ನೇ ದುರುಪಯೋಗ ಪಡಿಸಿ ಶೆಲ್ ಕಂಪನಿಗಳನ್ನು ನಡೆಸುತ್ತಿದ್ದಾನೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಬಂಧಿತನನ್ನು ‘ಮಾಸ್ಟರ್ ಮೈಂಡ್’ ಎಂದು ಗುರುತಿಸಿರುವ ಅಧಿಕಾರಿಗಳು, ಅವನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಕಸ್ಟಡಿಗೆ ಕಳುಹಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!