ಬೆಳಗಾವಿ: ಗಡಿನಾಡ ಬೆಳಗಾವಿಯ ಮಹಾನಗರ ಪಾಲಿಕೆಯಲ್ಲಿ ರಾಜಕೀಯ ಕದನ ಇದೀಗ ಉರಿಯುತ್ತಿದ್ದು, ಆಡಳಿತ ಪಕ್ಷವೇ ಬೀದಿಗೆ ಇಳಿದಿದೆ! ಬಿಜೆಪಿ ಹಿಡಿತದಲ್ಲಿರುವ ಪಾಲಿಕೆಯಲ್ಲಿ ಬಿಜೆಪಿ ನಗರಸೇವಕರೇ ಆಯುಕ್ತರ ಕೊಠಡಿ ಮುಂದೆ ಧರಣಿ ನಡೆಸಿ ಭ್ರಷ್ಟಾಧಿಕಾರಿಗಳ ವಿರುದ್ಧ ಬಂಡಾಯ ಎಬ್ಬಿಸಿದ್ದಾರೆ.
ಕಂದಾಯ ಶಾಖೆಯ ಉಪ ಆಯುಕ್ತೆ ರೇಷ್ಮಾ ತಾಳಿಕೋಟಿ ಸೇರಿದಂತೆ ಐವರು ಅಧಿಕಾರಿಗಳ ವಿರುದ್ಧ ಗಂಭೀರ ಭ್ರಷ್ಟಾಚಾರ ಆರೋಪ ಹೊರಬಿದ್ದ ಹಿನ್ನೆಲೆ, ನಗರಸೇವಕರು — “ಎತ್ತಂಗಡಿ ಆಗುವವರೆಗೂ ಹೋರಾಟ ನಿಲ್ಲದು!” ಎಂದು ಘೋಷಿಸಿದ್ದಾರೆ.
ಬೆಳಿಗ್ಗೆ ಆರಂಭವಾದ ಧರಣಿ ಸಂಜೆಯವರೆಗೂ ಮುಂದುವರಿದಿದ್ದು, ಆಡಳಿತ ಕಚೇರಿಯೇ ರಾಜಕೀಯ ಕಣದಂತಾಗಿದೆ.
ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ ನೇತೃತ್ವದಲ್ಲಿ ರವಿ ಧೋತ್ರೆ, ಗಿರೀಶ ಧೋಂಗಡಿ ಸೇರಿದಂತೆ ವಿವಿಧ ಸ್ಥಾಯಿ ಸಮಿತಿ ಸದಸ್ಯರು ಭಾಗವಹಿಸಿದರು. ಫಲವಾಗಿ ಪಾಲಿಕೆಯಲ್ಲಿ ಅಸ್ಪಷ್ಟತೆ, ಅಸಮಾಧಾನ ಮತ್ತು ಆಡಳಿತದ ಗೊಂದಲದ ವಾತಾವರಣ ನಿರ್ಮಾಣವಾಗಿದೆ.
ಏನಿದು ರಾದ್ದಾಂತ?
ಸೆಪ್ಟೆಂಬರ್ 26ರಂದು ನಡೆದ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ, ಉಪ ಆಯುಕ್ತೆ ರೇಷ್ಮಾ ತಾಳಿಕೋಟಿ ಹಾಗೂ ನಾಲ್ವರು ಅಧಿಕಾರಿಗಳ ವಿರುದ್ಧ ಗಂಭೀರ ಆರೋಪಗಳು ಪ್ರತಿಧ್ವನಿಸಿ, ಅವರನ್ನು ತಕ್ಷಣ ಕರ್ತವ್ಯದಿಂದ ಬಿಡುಗಡೆ ಮಾಡಲು ಸಭೆಯು ಏಕಮತದಿಂದ ತೀರ್ಮಾನಿಸಿತು.
“ನಿವೃತ್ತ ನ್ಯಾಯಾಧೀಶರಿಂದ 15 ದಿನಗಳೊಳಗಾಗಿ ತನಿಖೆ ನಡೆಸಬೇಕು; ತನಿಖೆ ಮುಗಿಯುವವರೆಗೆ ಆರೋಪಿತ ಅಧಿಕಾರಿಗಳನ್ನು ಕರ್ತವ್ಯದಿಂದ ದೂರವಿಡಬೇಕು,” ಎಂದು ಸ್ಪಷ್ಟ ನಿರ್ದೇಶ ನೀಡಿದ್ದರು. ಆದರೆ ಸಭೆಗೆ ಆರೋಗ್ಯ ಕಾರಣದಿಂದ ಹಾಜರಾಗದಿದ್ದ ರೇಷ್ಮಾ ತಾಳಿಕೋಟಿ ಅವರು ನಂತರ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದು, ನಗರಸೇವಕರ ಕೋಪಕ್ಕೆ ಕಾರಣವಾಯಿತು. ಮೇಯರ್ ಅವರ ಅಧಿಕೃತ ಪತ್ರಕ್ಕೂ ಪ್ರತಿಕ್ರಿಯೆ ಬರದಿರುವುದು ಆಡಳಿತ ಪಕ್ಷದ ಸದಸ್ಯರನ್ನು ಉಗ್ರಗೊಳಿಸಿದೆ.
“ಹೋರಾಟ ನಿಲ್ಲದು” — ಕೊಂಗಾಲಿ ಎಚ್ಚರಿಕೆ
“ಭ್ರಷ್ಟ ಅಧಿಕಾರಿಗಳು ಪಾಲಿಕೆಯಲ್ಲಿ ಇರಬಾರದು. ಜನರ ವಿಶ್ವಾಸ ಉಳಿಸಲು ಕ್ರಮ ಅಗತ್ಯ. ಎತ್ತಂಗಡಿ ಆಗದಿದ್ದರೆ ಮುಖ್ಯಮಂತ್ರಿಯವರವರೆಗೆ ಹೋಗುತ್ತೇವೆ.”
ಶಾಸಕರ ಹೇಳಿಕೆ ವಿರುದ್ಧ ತೀವ್ರ ಕಿಡಿ
ಈ ಬೆಳವಣಿಗೆಯ ಮಧ್ಯೆ ಕಾಂಗ್ರೆಸ್ ಶಾಸಕ ಆಸೀಫ್ ಶೇಠರು“ಅಧಿಕಾರಿಗಳನ್ನು ಎತ್ತಂಗಡಿ ಮಾಡಿದರೆ ಪಾಲಿಕೆ ಸೂಪರ್ ಸೀಡ್ ಆಗುತ್ತದೆ” ಎಂಬ ಹೇಳಿಕೆಗೆ ನಗರಸೇವಕರು ಕಿಡಿಕಾರಿದ್ದಾರೆ.
“ಸೂಪರ್ ಸೀಡ್ ಮಾಡಿದರೂ ಜನರ ಪರ ಹೋರಾಟ ನಿಲ್ಲದು!” ಎಂದು ಘೋಷಿಸಿದ ನಗರಸೇವಕರು, ಶಾಸಕರ ನಿಲುವನ್ನು “ಭ್ರಷ್ಟರ ಪರ ರಕ್ಷಣಾತ್ಮಕ ರಾಜಕೀಯ” ಎಂದು ಬಣ್ಣಿಸಿದ್ದಾರೆ.
ಪಾಲಿಕೆಯಲ್ಲಿ ಬಿಜೆಪಿ ಆಡಳಿತವಿದ್ದರೂ ಬಿಜೆಪಿ ನಗರಸೇವಕರೇ ಆಯುಕ್ತರ ವಿರುದ್ಧ ಧರಣಿಗೆ ಇಳಿದಿರುವುದು, ನಗರದ ರಾಜಕೀಯ ಸಮೀಕ್ಷೆಯಲ್ಲಿ ಹೊಸ ಬಿರುಕನ್ನು ಬಯಲಿಗೆಳೆದಿದೆ.
ಆಡಳಿತ, ರಾಜಕೀಯ ಮತ್ತು ಅಧಿಕಾರಿಗಳ ನಡುವೆ ಶಕ್ತಿ ಪರೀಕ್ಷೆ ಆರಂಭವಾಗಿದ್ದು, ಇದೀಗ ರಾಜ್ಯ ಸರ್ಕಾರದ ಪ್ರತಿಕ್ರಿಯೆಯೇ ಮುಂದಿನ ಬೆಳವಣಿಗೆಗೆ ಕಾದು ನೋಡಬೇಕಿದೆ.