ಫುಟಬಾಲ್ ಸಂಘದಲ್ಲಿ ಅವ್ಯವಹಾರ- ದೂರು

ಬೆಳಗಾವಿ:
ಜಿಲ್ಲಾ ಫುಟ್‌ಬಾಲ್ ಸಂಘದಲ್ಲಿ ಭಾರೀ ಹಣಕಾಸು ಅವ್ಯವಹಾರ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಸ್ಥಳೀಯ ಫುಟ್‌ಬಾಲ್ ಕ್ಲಬ್‌ಗಳು, ಆಟಗಾರರು ಹಾಗೂ ಗುರುವಾರ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ರಾಣಿ ಚೆನ್ನಮ್ಮ ವೃತ್ತದಿಂದ ಪ್ರಾರಂಭಿಸಿ ಡಿಸಿ ಕಚೇರಿವರೆಗೆ ಮೆರವಣಿಗೆ ನಡೆಸಿ, ಮನವಿ ಪತ್ರವನ್ನು ಸಲ್ಲಿಸಿದರು.

ಜಿಲ್ಲಾ ಸಂಘಕ್ಕೆ ಹೊಸ ಚುನಾವಣೆಯನ್ನು ತಕ್ಷಣ ನಡೆಸುವಂತೆ ಆಗ್ರಹಿಸಿದರು.
ಚೌಗಲೆ ಫುಟ್‌ಬಾಲ್ ಕ್ಲಬ್‌ನ ಕಾರ್ಯದರ್ಶಿ ಪ್ರಮೇಯ್ ಶೆಟ್ಟಿ ಮಾತನಾಡಿ, “ಬೆಳಗಾವಿ ಜಿಲ್ಲಾ ಫುಟ್‌ಬಾಲ್ ಸಂಘದ ಅಧ್ಯಕ್ಷರು ಹಣಕಾಸು ಅವ್ಯವಹಾರದಲ್ಲಿ ತೊಡಗಿದ್ದಾರೆ. ರಾಜ್ಯ ಫುಟ್‌ಬಾಲ್ ಸಂಘವು ಈಗಾಗಲೇ ಅವರನ್ನು ಅಮಾನತುಗೊಳಿಸಿ ಹೊಸ ಚುನಾವಣೆ ನಡೆಸುವಂತೆ ಆದೇಶಿಸಿದೆ. ರಾಜ್ಯ ಮಟ್ಟದ ಅಧಿಕಾರಿಗಳ ಅನುಮತಿ ಇಲ್ಲದೇ ನಿಧಿ ಹಿಂಪಡೆಯಲ್ಪಟ್ಟ ಘಟನೆಗಳೂ ನಡೆದಿವೆ. ಈ‌ ಬಗ್ಗೆ ಪ್ರಶ್ನೆ ಮಾಡುವ ಜಿಲ್ಲಾ ಸಂಘಗಳನ್ನು ಅಮಾನತುಗೊಳಿಸುವ ಬೆದರಿಕೆ ನೀಡಲಾಗುತ್ತಿದೆ,” ಎಂದು ಆರೋಪಿಸಿದರು.
ಮಾಜಿ ಉಪ ಮೇಯರ್ ಆನಂದ ಚವಾಣ್ ಮಾತನಾಡಿ, “ಜಿಲ್ಲಾ ಫುಟ್‌ಬಾಲ್ ಸಂಘದ ಅಧಿಕಾರಿಗಳ ಅಧಿಕಾರದ ದುರುಪಯೋಗದ ಬಗ್ಗೆ ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಘಕ್ಕೆ ಈಗಾಗಲೇ ದೂರು ಸಲ್ಲಿಸಲಾಗಿದೆ. ರಾಜ್ಯ ಸಂಸ್ಥೆ ಜುಲೈ 5ರೊಳಗೆ ಚುನಾವಣೆ ನಡೆಸಲು ನಿರ್ದೇಶನ ನೀಡಿತ್ತು. ಜಿಲ್ಲಾಡಳಿತ ತಕ್ಷಣ ಚುನಾವಣೆಯನ್ನು ಆಯೋಜಿಸಿ, ಬೆಳಗಾವಿಯಲ್ಲಿ ಫುಟ್‌ಬಾಲ್ ಚಟುವಟಿಕೆಗಳು ಪುನರಾರಂಭವಾಗುವಂತೆ ನೋಡಿಕೊಳ್ಳಬೇಕು. ಆಟಗಾರರಿಗೆ ನ್ಯಾಯ ಸಿಗಬೇಕು,” ಎಂದು ಒತ್ತಾಯಿಸಿದರು.
ಈ ಪ್ರತಿಭಟನೆಯಲ್ಲಿ ಅನೇಕ ಫುಟ್‌ಬಾಲ್ ಕ್ಲಬ್ ಸದಸ್ಯರು, ಅಭಿಮಾನಿಗಳು ಹಾಗೂ ಆಟಗಾರರು ಭಾಗವಹಿಸಿದರು.

Leave a Reply

Your email address will not be published. Required fields are marked *

error: Content is protected !!