ನಾಳೆ
ಬೆಳಗಾವಿ: ಇಲ್ಲಿನ ಶಹಾಪುರದಲ್ಲಿರುವ ಕೆಎಲ್ಇ ಸಂಸ್ಥೆಯ ಬಿ.ಎಂ.ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲದಲ್ಲಿ ನಿರ್ಮಿಸಲಾಗಿರುವ ಅತ್ಯಾಧುನಿಕ ಆಯುಷ್ಮತಿ ಆಯುರ್ವೇದ ಸ್ಪಾ ಕೇಂದ್ರ ಡಿ.15ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ತಿಳಿಸಿದರು.

ಇಲ್ಲಿನ ಶಹಾಪುರದಲ್ಲಿರವ ಆಯುರ್ವೇದ ಕಾಲೇಜಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯ ಅತಿಥಿಗಳಾಗಿ ಆಗಮಿಸಲಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಉದ್ಘಾಟಿಸಲಿದ್ದಾರೆ. ತಮ್ಮ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲೀನಿ ರಜನೀಶ್, ಕೇರಳದ ಡಾ.ದೇವಿಕಾ ದೇಶಮುಖ ಹಾಗೂ ಶಾಸಕ ಅಭಯ ಪಾಟೀಲ ಆಗಮಿಸುವರು ಎಂದು ಡಾ.ಕೋರೆ ಮಾಹಿತಿ ನೀಡಿದರು.
ಆಯುರ್ವೇದ ಚಿಕಿತ್ಸೆಗೆ ಆಧುನಿಕ ಸ್ಪರ್ಶದ ಮೂಲಕ ಚಿಕಿತ್ಸೆ ನೀಡುವ ಉದ್ದೇಶದಿಂದ ಈ ಕೇಂದ್ರವನ್ನು ತೆರೆಯಲಾಗಿದೆ. ರಾಜ್ಯದಲ್ಲಿ ಎಲ್ಲಿಯೂ ಇಂತಹ ಅತ್ಯಾಧುನಿಕ ಸ್ಪಾ ಇಲ್ಲ. ರಾಜ್ಯದಲ್ಲಿಯೇ ಇದು ಮೊದಲು ಸ್ಪಾ ಕೇಂದ್ರ ಎಂದು ವಿವರಿಸಿದರು.
ಸುಮಾರು 4.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕೆಎಲ್ಇ ಸಂಸ್ಥೆಯ ಈ ಆಯುಷ್ಮತಿ ಆಯುರ್ವೇದ ಕೇಂದ್ರದಲ್ಲಿ ಜನಸಾಮಾನ್ಯರ ಕೈಗೆಟುವ ಬೆಲೆಯಲ್ಲಿ ಚಿಕಿತ್ಸೆ ನೀಡಲು ಉದ್ದೇಶ ಹೊಂದಲಾಗಿದೆ. ಈ ಚಿಕಿತ್ಸೆಗೆ ಬೇಕಾದ ವಿವಿಧ ಪ್ರಕಾರದ ಔಷಧಿ ಗುಣವುಳ್ಳ ಎಣ್ಣೆಗಳನ್ನು ಇಲ್ಲಿಯೇ ತಯಾರಿಸಲಾಗುತ್ತದೆ ಎಂದು ಹೇಳಿದರು,

ಕ್ರಾನಿಕಲ್ ರೋಗಕ್ಕೆ ಆಯುರ್ವೇದ ಸ್ಪಾ ಚಿಕಿತ್ಸೆ ತುಂಬಾ ಅನುಕೂಲ ಎಂದರು.
ಈ ಆಧುನಿಕ್ ಸ್ಪಾ ಕೇಂದ್ರದಲ್ಲಿ ಒಟ್ಟು ಸಕಲ ಸೌಲಭ್ಯಗಳುಳ್ಳ ಆರು ಕೊಠಡಿಗಳಿದ್ದು, ಮಹಿಳೆಯರು ಹಾಗೂ ಪುರುಷರಿಗೆ ತಲಾ ಮೂರು ಕೊಠಡಿಗಳನ್ನು ಸಿದ್ಧಪಡಿಸಲಾಗಿದೆ. ಯೋಗ ಹಾಗೂ ಸೌಂದರ್ಯವರ್ಧಕ ಚಿಕಿತ್ಸೆಗೂ ಆದ್ಯತೆ ನೀಡಲಾಗಿದೆ ಎಂದು ಡಾ. ಪ್ರಭಾಕರ ಕೋರೆ ತಿಳಿಸಿದರು.
ಆಯುಷ್ಮತಿ ಕೇಂದ್ರದ ಡಾ.ಸುಹಾಸ ಶೆಟ್ಟಿ ಮಾತನಾಡಿ, ಆಯುಷ್ಮತಿ ಇಲ್ಲಿನ ಕೆಎಲ್ಇ ಸಂಸ್ಥೆಯ ಆಯುವರ್ಲ್ಡ್ ಆಸ್ಪತ್ರೆಯ ವಿಶಿಷ್ಟ ಮತ್ತು ವೆಲ್ ನೆಸ್ ಕೇಂದ್ರವಾಗಿದ್ದು, ಪ್ರಾಚೀನ ಆಯುರ್ವೇದ ಚಿಕಿತ್ಸಾ ತತ್ವಗಳು ಮತ್ತು ಆಧುನಿಕ ವೆಲ್ ನೆಸ್ ಅನುಭವಗಳ ಸಂಗಮವಾಗಿದೆ ಎಂದು ಹೇಳಿದರು.
ಈ ಆಧುನಿಕ ಸ್ಪಾ ಕೇಂದ್ರದಲ್ಲಿ ಅಭ್ಯಂಗ, ಶಿರೋಭಾರಾ, ಉದ್ವರ್ತನ, ಮುಖಲೇಪ ಮತ್ತು ಸೌಂದರ್ಯ ಚಿಕಿತ್ಸಾ ವಿಧಾನಗಳು, ಕಾಂತಿ, ಪುನಶ್ಚೇತನಕ್ಕಾಗಿ ವಿಶೇಷ ಮುಖ ಮತ್ತು ಚರ್ಮ ಚಿಕಿತ್ಸೆಗಳು ಈ ಆಧುನಿಕ ಸ್ಪಾ ಕೇಂದ್ರದಲ್ಲಿ ಲಭ್ಯ ಇವೇ ಎಂದು ಹೇಳಿದರು.

