ಚಳಿಯನ್ನೂ ಲೆಕ್ಕಿದೇ ಕ್ಲೀನ್ ಸಿಟಿ ಕಾರ್ಯಾಚರಣೆ
ಬೈಕ್ ಮೇಲೆ ಮೇಯರ್-ಉಪಮೇಯರ್
ಒಂದು ತಿಂಗಳಿಂದ ನಡೆದ ಕ್ಲೀನ್ ಸಿಟಿ ಜಾಗೃತಿ ಅಭಿಯಾನ.
ಬೆಳಗಾವಿ.
ಇನ್ನು ಮುಂದೆ ಬೆಳಗಾವಿಯ ರಸ್ತೆ, ಖಾಲಿ ಜಾಗ, ಪಾದಚಾರಿ ಮಾರ್ಗಗಳು ಕಸದ ಡಂಪಿಂಗ್ ಯಾರ್ಡ ಅಲ್ಲ.
ಬೇಕಾಬಿಟ್ಟಿಯಾಗಿ ಕಸ ಎಸೆದರೆ ದಂಡ ನೇರವಾಗಿ ಮನೆ ಬಾಗಿಲಿಗೆ ಬರುತ್ತದೆ.!
ಬೆಂಗಳೂರು ಬಿಬಿಎಂಪಿಯ ಕಟ್ಟುನಿಟ್ಟಿನ ಮಾದರಿಯನ್ನೇ ಅನುಸರಿಸಿ ಬೆಳಗಾವಿ ಮಹಾನಗರ ಪಾಲಿಕೆ ಕ್ಲೀನ್ ಸಿಟಿ ಅಭಿಯಾನಕ್ಕೆ ಗಂಭೀರ ಚಾಲನೆ ನೀಡಿದೆ.
ಯಾವುದೇ ಜಾಹೀರಾತು, ಘೋಷಣೆ, ಪ್ರಚಾರದ ಹಂಗಿಲ್ಲದೆ ಶಾಸಕ ಅಭಯ ಪಾಟೀಲರ ಮಾರ್ಗದರ್ಶನದಲ್ಲಿ ಕಳೆದ ಒಂದು ತಿಂಗಳಿಂದ ಮಹಾಪೌರ ಮಂಗೇಶ ಪವಾರ್ ಹಾಗೂ ಉಪಮಹಾಪೌರ ವಾಣಿ ವಿಲಾಸ ಜೋಶಿ ಅವರು ತಮ್ಮ ದ್ವಿಚಕ್ರ ವಾಹನದಲ್ಲೇ ನಗರ ಬೀದಿಗಳಲ್ಲಿ ಸಂಚರಿಸುತ್ತಿದ್ದಾರೆ.
ಮುಂಜಾನೆ ಮೈ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ದಿನಂಪ್ರತಿ 3ರಿಂದ 4 ಗಂಟೆಗಳ ಕಾಲ ರಸ್ತೆಗಿಳಿದು ಸ್ವಚ್ಛತೆ ಕುರಿತು ಜನರಿಗೆ ನೇರ ಪಾಠ ಹೇಳುತ್ತಿದ್ದಾರೆ.

ಮೇಯರ್, ಉಪಮೇಯರ್ ಜೊತೆ ಆಯುಕ್ತರು, ಆರೋಗ್ಯ ಇಲಾಖೆ ಅಧಿಕಾರಿಗಳು, ಪರಿಸರ ಅಭಿಯಂತರರು ಹಾಗೂ ಆರೋಗ್ಯ ನಿರೀಕ್ಷಕರು ಇದಕ್ಕೆ ಸಾಥ್ ನೀಡಿದ್ದು, ಸ್ವಚ್ಛತೆ ಕಾಗದದಲ್ಲಲ್ಲ, ರಸ್ತೆಯಲ್ಲೇ ಎಂಬ ಸಂದೇಶ ನಗರದೆಲ್ಲೆಡೆ ಹರಡಿದೆ.

ಕಸದ ಚೀಲವೇ ಸಾಕ್ಷಿ !
ಸೋಮವಾರ ಶಹಾಪೂರ ಹಾಗೂ ಖಾಸಬಾಗ ಪ್ರದೇಶಗಳಲ್ಲಿ ಮುಂಜಾನೆ 5.30 ರಿಂದಲೇಮೇಯರ್ ಮತ್ತು ಉಪಮೇಯರ್ ಜೊತೆ ಪಾಲಿಕೆ ಅಧಿಕಾರಿಗಳ ತಂಡ ಕಾಯರ್ಾಚರಣೆಗೆ ಇಳಿಯಿತು.
ಸಾರ್ವಜನಿಕರು ಎಸೆದ ಕಸದ ಚೀಲಗಳನ್ನು ಸ್ಥಳದಲ್ಲೇ ತೆರೆದು ಪರಿಶೀಲಿಸಿದ ಮೇಯರ್, ಉಪಮೇಯರ್, ಅದರಲ್ಲಿ ಸಿಕ್ಕ ಜೋಮೇಟೊ, ವಿದ್ಯುತ್, ನೀರಿನ ಬಿಲ್ಗಳ ಮೂಲಕ ಕಸ ಎಸೆದವರ ಮನೆ ಪತ್ತೆ ಹಚ್ಚಿದರು.

ವಿಳಾಸ ದೃಢಪಟ್ಟ ಕೂಡಲೇ ಪಾಲಿಕೆ ಸಿಬ್ಬಂದಿ ಮನೆ ಬಾಗಿಲಿಗೆ ತೆರಳಿ ದಂಡದ ರಶೀದಿ ನೀಡಿ ವಸೂಲಿ ಮಾಡಿದರು.
ಸ್ಥಳದಲ್ಲೇ ಕಸ ಎಸೆಯುತ್ತಿದ್ದವರನ್ನೂ ಹಿಡಿದು ನಿಯಮಾನುಸಾರ ದಂಡ ವಿಧಿಸುವ ಕೆಲಸವೂ ಆಯಿತು. ಬೆಳಗಾವಿ ಮಹಾನಗರ ಪಾಲಿಕೆಯ ಈ ವಿನೂತರ ದೃಶ್ಯ ಕಂಡು ಸ್ಥಳೀಯರು ಅಚ್ಚರಿಗೊಂಡರು.
ಎಚ್ಚರಿಕೆ ಮುಗಿತು- ಕ್ರಮ ಆರಂಭ

ಕಸ ರಸ್ತೆಗಲ್ಲ, ಮನೆ ತೊಟ್ಟಿಗೆ ಎಂದು ಸಾರ್ವಜನಿಕರಲ್ಲಿ ಪಾಲಿಕೆ ಮನವಿ ಮಾಡಿದೆ. ಮುಂದಿನ ದಿನಗಳಲ್ಲಿ ನಿಯಮ ಉಲ್ಲಂಘಿಸುವವರ ಮೇಲೆ ಯಾವುದೇ ರಿಯಾಯಿತಿ ಇಲ್ಲದೆ ಕಠಿಣ ಕ್ರಮ ಕೈಗೊಳ್ಳುವಂತೆ ಎಲ್ಲಾ ಆರೋಗ್ಯ ನಿರೀಕ್ಷಕರಿಗೆ ಕಟ್ಟುನಿಟ್ಟಿನ ಸೂಚನೆಯನ್ನು ಮೇಯರ, ಉಪಮೇಯರ್ ನೀಡಿದರು.
ನಿಶ್ಶಬ್ದವಾಗಿ ಆರಂಭವಾದ ಈ ಅಭಿಯಾನ ಇದೀಗ ಬೆಳಗಾವಿ ನಗರದೆಲ್ಲೆಡೆ ಚಚರ್ೆಯ ವಿಷಯವಾಗಿದೆ. ದಂಡ ವಸೂಲಿಯೇ ಗುರಿಯಲ್ಲ, ನಾಗರಿಕರಲ್ಲಿ ಜವಾಬ್ದಾರಿಯ ಅರಿವು ಮೂಡಿಸುವುದೇ ಉದ್ದೇಶ ಎಂದು ಪಾಲಿಕೆ ಸ್ಪಷ್ಟಪಡಿಸಿದೆ.
ಕ್ಲೀನ್ ಸಿಟಿ ಬೆಳಗಾವಿ ಸಾಧ್ಯವಾಗಬೇಕಾದರೆ ಪಾಲಿಕೆಯಷ್ಟೇ ಅಲ್ಲ, ಪ್ರತಿಯೊಬ್ಬ ನಾಗರಿಕನ ಸಹಭಾಗಿತ್ವವೂ ಅಗತ್ಯ ಎಂಬುದು ಮೇಯರ್, ಉಪಮೇಯರ್ ಅವರ ಸಂದೇಶ.

