Headlines

ಖಾನಾಪುರ ಮುಗೀತು… ಈಗ ಬೆಳಗಾವಿ ದಕ್ಷಿಣಕ್ಕೆ!

ಸತ್ತವನ ಹೆಸರಲ್ಲೇ ಮತ್ತೊಂದು ಭೂ ವ್ಯವಹಾರ – 7 ಎಕರೆ 32 ಗುಂಟೆ ‘ಮಾರಾಟ’
ಅಧಿಕಾರಿಗಳ ಪಾತ್ರದ ಮೇಲೆ ಗಂಭೀರ ಅನುಮಾನ

ಬೆಳಗಾವಿ:
ಗಡಿನಾಡು ಬೆಳಗಾವಿಯಲ್ಲಿ ಸತ್ತವರ ಹೆಸರಿನಲ್ಲಿ ಭೂ ಕಬಳಿಕೆ ನಡೆಯುತ್ತಿದೆ ಎಂಬ ಆತಂಕಕಾರಿ ವಿಚಾರ ಈಗ ಮತ್ತೊಂದು ಹಂತ ತಲುಪಿದೆ. ಖಾನಾಪುರ ಉಪನೋಂದಣಾಧಿಕಾರಿ ಕಚೇರಿಯಲ್ಲಿ 37 ವರ್ಷಗಳ ಹಿಂದೆ ಮೃತಪಟ್ಟ ವ್ಯಕ್ತಿಯ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿರುವ ಕುರಿತು ಈಗಾಗಲೇ ವರದಿ ಪ್ರಕಟವಾಗಿತ್ತು.
ಇದೀಗ ಅದೇ ವ್ಯಕ್ತಿಯ ಹೆಸರಿನಲ್ಲಿ ಬೆಳಗಾವಿ ದಕ್ಷಿಣ ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲೂ ಸುಮಾರು 7 ಎಕರೆ 32 ಗುಂಟೆ ಜಾಗೆಗೆ ಸಂಬಂಧಿಸಿದಂತೆ ಮತ್ತೊಂದು ನಕಲಿ ಅಗ್ರಿಮೆಂಟ್ ದಾಖಲೆ ಸಿದ್ಧಪಡಿಸಲಾಗಿದೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಇದು ಪ್ರಕರಣದ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಇದು ಒಬ್ಬರ ಆಟವಲ್ಲ
ಈ ಬೆಳವಣಿಗೆ ಯೊಂದಿಗೆ, ಇದು ಒಬ್ಬ ಅಥವಾ ಇಬ್ಬರು ನಡೆಸಿದ ಅಪರಾಧವಲ್ಲ ಎಂಬ ಅನುಮಾನ ಬಲಪಡುತ್ತಿದೆ. ಸಂಘಟಿತ ಭೂ ಕಬಳಿಕೆ ಜಾಲ ಮತ್ತು ಅಧಿಕಾರಿಗಳ ಸಂಭಾವ್ಯ ಕೈವಾಡ ಇಲ್ಲದೆ ಇಂತಹ ದಾಖಲೆ ಸೃಷ್ಟಿ ಸಾಧ್ಯವಿಲ್ಲ ಎಂಬ ಪ್ರಶ್ನೆ ಈಗ ತಪ್ಪಿಸಲಾಗದ ಮಟ್ಟಕ್ಕೆ ಬಂದಿದೆ.

987ರಲ್ಲಿ ಸಾವು… 2024ರಲ್ಲಿ ದಾಖಲೆಗಳಲ್ಲಿ ‘ಜೀವಂತ’

ಪತ್ರಿಕೆಗೆ ಲಭ್ಯವಾದ ದಾಖಲೆಗಳ ಪ್ರಕಾರ, ಮೂಲತಃ ಬೆಳಗಾವಿಯ ತಹಶೀಲ್ದಾರ ಗಲ್ಲಿಯಲ್ಲಿ ವಾಸವಿದ್ದು 1987ರಲ್ಲಿ ಮೃತಪಟ್ಟ ದಿಗಂಬರ ಶ್ರೀಪಾದ ಕುಲಕರ್ಣಿ, 2024ರಲ್ಲಿ ಮತ್ತೆ ‘ಜೀವಂತನಾಗಿ’ ದಾಖಲೆಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಖಾನಾಪುರ ಕಚೇರಿಯ ದಾಖಲೆಗಳಲ್ಲಿ ವಿಳಾಸ – ಹುಬ್ಬಳ್ಳಿ, ಅವಧೂತ ನಗರ ಬೆಳಗಾವಿ ದಕ್ಷಿಣ ಕಚೇರಿಯ ದಾಖಲೆಗಳಲ್ಲಿ ವಿಳಾಸ – ಹುಕ್ಕೇರಿ ತಾಲ್ಲೂಕು, ಕೊಟಬಾಗಿ
ಒಂದೇ ವ್ಯಕ್ತಿಗೆ ಎರಡು ವಿಭಿನ್ನ ವಿಳಾಸಗಳು.
ಎರಡು ಆಧಾರ್, ಬೇರೆ ಬೇರೆ ಸಹಿಗಳು

ಇನ್ನಷ್ಟು ಆತಂಕಕಾರಿ ಅಂಶವೆಂದರೆ,
ಖಾನಾಪುರ ಮತ್ತು ಬೆಳಗಾವಿ ದಕ್ಷಿಣ ಕಚೇರಿಗಳಲ್ಲಿ ಉಲ್ಲೇಖಿಸಿರುವ ಆಧಾರ್ ಸಂಖ್ಯೆಗಳು ಪರಸ್ಪರ ಭಿನ್ನವಾಗಿವೆ.

ಅಷ್ಟೇ ಅಲ್ಲ, ಎರಡೂ ದಾಖಲೆಗಳಲ್ಲಿ ಮೃತ ವ್ಯಕ್ತಿಯ ಹೆಸರಿನಲ್ಲಿರುವ ಸಹಿಗಳೂ ಒಂದಕ್ಕೊಂದು ಹೊಂದಿಕೆಯಾಗುವುದಿಲ್ಲ.
ಇದು ನೇರವಾಗಿ ನಕಲಿ ವ್ಯಕ್ತಿತ್ವ  ಸೃಷ್ಟಿಸಿರುವ ಶಂಕೆಯನ್ನು ಗಟ್ಟಿಮಾಡುತ್ತದೆ.
ಬೆಳಗಾವಿ ದಕ್ಷಿಣ ಕಚೇರಿಯಲ್ಲಿ 7 ಎಕರೆ 32 ಗುಂಟೆ ವ್ಯವಹಾರ
ಪತ್ರಿಕೆಗೆ ದೊರೆತ ಮಾಹಿತಿಯಂತೆ, ದಿಗಂಬರ ಶ್ರೀಪಾದ ಕುಲಕರ್ಣಿ ಹೆಸರಿನಲ್ಲಿ ಸುಮಾರು 7 ಎಕರೆ 32 ಗುಂಟೆ ಜಾಗೆಗೆ ಸಂಬಂಧಿಸಿದ ಅಗ್ರಿಮೆಂಟ್ ವ್ಯವಹಾರ ದಾಖಲೆ ಬೆಳಗಾವಿ ದಕ್ಷಿಣ ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ಸಿದ್ಧಪಡಿಸಲಾಗಿದೆ.


ಈ ದಾಖಲೆಯಲ್ಲೂ, ಮೃತ ವ್ಯಕ್ತಿ ಸ್ವತಃ ಕಚೇರಿಗೆ ಹಾಜರಾಗಿ ಫೋಟೋ ತೆಗೆಸಿಕೊಂಡು, ಹೆಬ್ಬೆಟ್ಟು ಒತ್ತಿ, ಸಹಿ ಮಾಡಿರುವಂತೆ ದಾಖಲೆ ತೋರಿಸುತ್ತದೆ.
*ಸತ್ತವನು ಮತ್ತೆ ಕಚೇರಿಗೆ ಬಂದನೇ?* ಅಥವಾ ಯಾರೋ ಅವನ ಹೆಸರಿನಲ್ಲಿ ಅಧಿಕಾರಿಗಳ ಮುಂದೆಯೇ ನಾಟಕವಾಡಿದರೇ?
ಉಪನೋಂದಣಾಧಿಕಾರಿಗಳ ಜವಾಬ್ದಾರಿ ಎಲ್ಲಿ?
ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ದಾಖಲೆ ನೋಂದಣಿಯ ವೇಳೆ
ವ್ಯಕ್ತಿಯ ಗುರುತು ಪರಿಶೀಲನೆ
ಆಧಾರ್ ಪ್ರಮಾಣೀಕರಣ
ದಾಖಲೆಗಳ ಮೂಲ ಪರಿಶೀಲನೆ
ಇವು ಕಡ್ಡಾಯ ಪ್ರಕ್ರಿಯೆಗಳಾಗಿದ್ದರೂ, ಎರಡು ವಿಭಿನ್ನ ಕಚೇರಿಗಳಲ್ಲಿ ಒಂದೇ ಮೃತ ವ್ಯಕ್ತಿಯ ಹೆಸರಿನಲ್ಲಿ ದಾಖಲೆಗಳು ಹೇಗೆ ನೋಂದಾಯಿತವು? ಎಂಬ ಪ್ರಶ್ನೆ ಈಗ ತೀವ್ರವಾಗಿದೆ.
ಗ್ರಾಮೀಣ ರೈತರ ಜಮೀನಿಗೆ ದೊಡ್ಡ ಅಪಾಯ
ಈ ಪ್ರಕರಣ ಬೆಳಗಾವಿ ಜಿಲ್ಲೆಯಲ್ಲಿ, ವಿಶೇಷವಾಗಿ ಗ್ರಾಮೀಣ ಭಾಗದ ಮುಗ್ಧ ರೈತರ ಜಮೀನುಗಳು ಹಾಗೂ ಸತ್ತವರ ಹೆಸರಿನ ಭೂಮಿಗಳನ್ನು ಗುರಿಯಾಗಿಸಿಕೊಂಡು ಕಾರ್ಯನಿರ್ವಹಿಸುವ ದೊಡ್ಡ ಗ್ಯಾಂಗ್ ಇದೆ ಎಂಬುದನ್ನು ಬಯಲು ಮಾಡುತ್ತಿದೆ.
ದಾಖಲೆ ಸೃಷ್ಟಿಯಿಂದ ಆರಂಭಿಸಿ ನೋಂದಣಿವರೆಗೆ, ಒಂದು ಸಂಪೂರ್ಣ ವ್ಯವಸ್ಥಿತ ಜಾಲ ಕಾರ್ಯನಿರ್ವಹಿಸುತ್ತಿರುವ ಅನುಮಾನ ದಿನೇದಿನೇ ಗಟ್ಟಿಯಾಗುತ್ತಿದೆ.
ರಾಜ್ಯ ಮಟ್ಟದ ತನಿಖೆ ಅಗತ್ಯ
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯ ಮಟ್ಟದ ಸ್ವತಂತ್ರ ತನಿಖೆ ನಡೆದರೆ ಮಾತ್ರ,
ಭೂ ಗಳ್ಳರು ಮಾತ್ರವಲ್ಲ, ಅವರಿಗೆ ನೆರವಾಗಿರುವ ಅಧಿಕಾರಿಗಳ ಪಾತ್ರವೂ ಬಹಿರಂಗವಾಗಲಿದೆ ಎಂಬ ನಿರೀಕ್ಷೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಸತ್ತವರ ಹೆಸರಿನ ಭೂಮಿಗೂ ಭದ್ರತೆ ಇಲ್ಲವೇ?
ಈ ಪ್ರಶ್ನೆಗೆ ಉತ್ತರ ಇನ್ನೂ ಬಾಕಿಯೇ ಇದೆ.

Leave a Reply

Your email address will not be published. Required fields are marked *

error: Content is protected !!