ಕಾಂಗ್ರೆಸ್ ನಡೆ ‘ಅಸಂವಿಧಾನಿಕ

ಬೆಳಗಾವಿ ಅಕ್ರಮಗಳ ಬಗ್ಗೆ ಬಿಜೆಪಿ ಮೌನ ಪ್ರಶ್ನಾರ್ಹ

ಗಂಭೀರ ಪರಿಗಣನೆ ಎಂದ ರಾಜ್ಯಸಭಾ ಸದಸ್ಯ

ಬೆಳಗಾವಿ:
ರಾಜ್ಯಪಾಲರು ಭಾಷಣ ಮುಗಿಸಿ ಸದನದಿಂದ ಹೊರಡುವ ವೇಳೆ ಅವರನ್ನು ತಡೆಯಲು ಕಾಂಗ್ರೆಸ್ ಶಾಸಕರು ಯತ್ನಿಸಿದ ಘಟನೆ ಅಸಂವಿಧಾನಿಕ ಹಾಗೂ ದುರುದ್ದೇಶಪೂರಿತ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಕಟುವಾಗಿ ಟೀಕಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭಾ ಅಧಿವೇಶನವು ರಾಜಕೀಯ ಗಲಾಟೆಗೆ ಸೀಮಿತವಾಗದೇ ರಾಜ್ಯದ ಅಭಿವೃದ್ಧಿ ವಿಚಾರಗಳತ್ತ ಕೇಂದ್ರೀಕರಿಸಬೇಕಿತ್ತು ಎಂದು ಹೇಳಿದರು.
ರಾಜ್ಯಪಾಲರು ಭಾಷಣದ ವೇಳೆ ಸಂಪೂರ್ಣ ಪಠ್ಯವನ್ನು ಓದದೇ ಇರುವ ಕುರಿತು ಉಂಟಾದ ವಿವಾದಕ್ಕೆ ಪ್ರತಿಕ್ರಿಯಿಸಿದ ಕಡಾಡಿ,, ರಾಜ್ಯಪಾಲರು ಭಾಷಣದ ಆರಂಭ ಮತ್ತು ಕೊನೆಯ ಭಾಗವನ್ನು ಮಾತ್ರ ಓದಿದ್ದಾರೆ. ಮಧ್ಯಭಾಗದಲ್ಲಿ ಇತ್ತೀಚೆಗೆ ಅಂಗೀಕೃತವಾದ ಜಿ ರಾಮ್ ಜಿ ಕಾಯ್ದೆಗೆ ಸಂಬಂಧಿಸಿದ ವಿವಾದಾತ್ಮಕ ಉಲ್ಲೇಖಗಳಿದ್ದವು. ಅವು ರಾಜ್ಯ–ಕೇಂದ್ರ ಸಂಘರ್ಷಕ್ಕೆ ಕಾರಣವಾಗಬಹುದಿತ್ತು” ಎಂದು ಸಮರ್ಥಿಸಿದರು.

ರಾಜ್ಯ ಸರ್ಕಾರ ನೀಡಿದ ಪಠ್ಯವನ್ನೇ ಶಬ್ದಶಃ ಓದಬೇಕು ಎಂಬುದು ಸಂವಿಧಾನದಲ್ಲಿ ಎಲ್ಲಿಯೂ ಕಡ್ಡಾಯವಲ್ಲ. ರಾಜ್ಯಪಾಲರ ನಡೆ ಫೆಡರಲ್ ವ್ಯವಸ್ಥೆ ರಕ್ಷಿಸುವ ನಿಟ್ಟಿನಲ್ಲಿ ಇದೆ” ಎಂದು ಅವರು ಹೇಳಿದರು.
ಕಾಂಗ್ರೆಸ್ ಶಾಸಕರು ರಾಜ್ಯಪಾಲರನ್ನು ತಡೆಯುವ ವೇಳೆ ಅಸಂಸದಿ ಪದ ಬಳಕೆ ಮಾಡಿದರೆಂಬ ಆರೋಪದ ಕುರಿತು ಮಾತನಾಡಿದ ಕಡಾಡಿ,
“ಇದು ನಾಚಿಕೆಗೇಡಿನ ಘಟನೆ. ಕರ್ನಾಟಕದ ಪ್ರಜಾಸತ್ತಾತ್ಮಕ ಇತಿಹಾಸದಲ್ಲಿ ಕರಾಳ ದಿನವಾಗಿ ದಾಖಲಾಗಲಿದೆ” ಎಂದು ವಾಗ್ದಾಳಿ ನಡೆಸಿದರು.
ಎಂಎನ್ಆರ್ಇಜಿಎ ವಿವಾದಕ್ಕೆ ತೆರೆ
ಎಂಎನ್ಆರ್ಇಜಿಎ ಯೋಜನೆಯ ಹೆಸರಿನ ಬದಲಾವಣೆ ಕುರಿತ ವಿವಾದವನ್ನೂ ಕಡಾಡಿ ತಳ್ಳಿ ಹಾಕಿದರು.

“ಹಿಂದೆಯೂ ಯೋಜನೆಗಳ ಹೆಸರಿನಲ್ಲಿ ಬದಲಾವಣೆಗಳಾಗಿವೆ. ಇದರಲ್ಲಿ ಹೊಸದೇನೂ ಇಲ್ಲ. ಆದರೆ ಕಾಂಗ್ರೆಸ್ ಈ ಯೋಜನೆಯನ್ನು ಚಿನ್ನದ ಮೊಟ್ಟೆ ಇಡುವ ಕೋಳಿಯಂತೆ ಬಳಸಿಕೊಂಡಿದೆ” ಎಂದು ಆರೋಪಿಸಿದರು.
ಜಿಲ್ಲೆ ವಿಭಜನೆಗೆ ಬೆಂಬಲ
ಬೆಳಗಾವಿ ಜಿಲ್ಲೆ ವಿಭಜನೆ ಕುರಿತು ಮಾತನಾಡಿದ ಕಡಾಡಿ,

“55 ಲಕ್ಷಕ್ಕೂ ಅಧಿಕ ಜನಸಂಖ್ಯೆ, 18 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಜಿಲ್ಲೆಯನ್ನು ವಿಭಜಿಸುವುದು ಅನಿವಾರ್ಯ. ಈ ಬಗ್ಗೆ ವಿವಿಧ ಆಯೋಗಗಳ ಶಿಫಾರಸುಗಳನ್ನು ಸರ್ಕಾರಗಳು ನಿರ್ಲಕ್ಷ್ಯ ಮಾಡಿವೆ” ಎಂದರು.

ಬಿಜೆಪಿ ಮೌನ ಏಕೆ?
ಸುದ್ದಿಗೋಷ್ಠಿಯಲ್ಲಿ ಗಡಿನಾಡ ಬೆಳಗಾವಿ ಜಿಲ್ಲೆಯಲ್ಲಿ ನಡೆದ ಗಂಭೀರ ಅಕ್ರಮಗಳ ಬಗ್ಗೆ ಬಿಜೆಪಿ ಮೌನ ವಹಿಸಿರುವುದು ತೀಕ್ಷ್ಣ ಪ್ರಶ್ನೆಗಳಿಗೆ ಕಾರಣವಾಯಿತು.

ಬೆಳಗಾವಿ ಎಪಿಎಂಸಿ ಠಾಣೆ ವ್ಯಾಪ್ತಿಯ ಪೋಕ್ಸೊ ಪ್ರಕರಣದಲ್ಲಿ ನ್ಯಾಯಾಲಯ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿದ್ದರೂ ಇನ್ನೂ ತಪ್ಪಿತಸ್ಥರ ವಿರುದ್ಧ ಕ್ರಮವಾಗಿಲ್ಲ ಎಂಬ ಪ್ರಶ್ನೆಗೆ ಸಂಸದರಿಂದ ಸ್ಪಷ್ಟ ಉತ್ತರ ದೊರಕಲಿಲ್ಲ.
ಅದೇ ರೀತಿ, ಬೆನ್ನಾಳಿ ಪ್ರದೇಶದಲ್ಲಿ ನಡೆದ ಜೂಜಾಟ ದಾಳಿ ಪ್ರಕರಣದಲ್ಲಿ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ಪೊಲೀಸರ ಪಾತ್ರ ಕುರಿತು ಕೇಳಿದ ಪ್ರಶ್ನೆಗಳಿಗೂ ಮೌನವೇ ಉತ್ತರವಾಗಿತು.
ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ, ನಕಲಿ ಆಧಾರ ಕಾರ್ಡ್ ತಯಾರಿಕಾ ದಂಧೆ ಕುರಿತು ಬಿಜೆಪಿ ಯಾಕೆ ಧ್ವನಿ ಎತ್ತುತ್ತಿಲ್ಲ ಎಂಬ ಪ್ರಶ್ನೆ ಎದುರಾದಾಗಲೂ ಸಂಸದರು ಸ್ಪಷ್ಟ ಪ್ರತಿಕ್ರಿಯೆ ನೀಡಲಿಲ್ಲ.
ಕೊನೆಗೆ, “ಈ ವಿಚಾರಗಳ ಬಗ್ಗೆ ಪಕ್ಷದ ಮಟ್ಟದಲ್ಲಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂಬ ಭರವಸೆಗೆ ಸುದ್ದಿಗೋಷ್ಠಿ ಸೀಮಿತವಾಯಿತು

Leave a Reply

Your email address will not be published. Required fields are marked *

error: Content is protected !!