ಬೆಂಗಳೂರು:
ಬೇಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲರು ವಿಧಾನಸಭಾ ಅಧಿವೇಶನದಲ್ಲಿ ಎತ್ತಿದ ಪ್ರಶ್ನೆ, ಬೆಳಗಾವಿ ಜಿಲ್ಲೆಯ ಕಾರ್ಮಿಕರ ಬದುಕಿನ ಒಳನೋಟವನ್ನು ಸದನದ ಮುಂದಿಟ್ಟಿದೆ. ಕಾರ್ಮಿಕ ಸಚಿವರ ಲಿಖಿತ ಉತ್ತರದಂತೆ, ಜಿಲ್ಲೆಯಲ್ಲಿ ಲಕ್ಷಾಂತರ ಕಾರ್ಮಿಕರು ನೋಂದಾಯಿತರಾಗಿದ್ದು, ವಿವಾಹ ನೆರವು, ಆರೋಗ್ಯ ಸೇವೆ, ಶಿಕ್ಷಣ ಸಹಾಯ ಸೇರಿ ಕೋಟ್ಯಂತರ ರೂಪಾಯಿ ಮೌಲ್ಯದ ಕಲ್ಯಾಣ ಯೋಜನೆಗಳು ಜಾರಿಯಲ್ಲಿವೆ.
ಕಾರ್ಮಿಕ ಕಲ್ಯಾಣ ಮಂಡಳಿಗಳ ಮೂಲಕ ಅಸಂಘಟಿತ ವಲಯದ ಕಾರ್ಮಿಕರಿಗೆ ನೀಡಲಾಗುತ್ತಿರುವ ನೆರವುಗಳ ಅಂಕಿ-ಅಂಶಗಳು, ಸರ್ಕಾರದ ಹೊಣೆಗಾರಿಕೆಯನ್ನು ಬಿಚ್ಚಿಟ್ಟಂತಿವೆ.
₹21 ಸಾವಿರ ವಿವಾಹ ನೆರವು – ಸಾವಿರಾರು ಕುಟುಂಬಗಳಿಗೆ ಆಸರೆಯಾಗಿ
ನೋಂದಾಯಿತ ಕಾರ್ಮಿಕರ ಪುತ್ರ-ಪುತ್ರಿಯರ ವಿವಾಹಕ್ಕೆ ₹21,000ರ ಆರ್ಥಿಕ ನೆರವು ನೀಡಲಾಗುತ್ತಿದ್ದು, 2024–25ನೇ ಸಾಲಿನಲ್ಲಿ ಮಾತ್ರವೇ 1,00,262 ಕಾರ್ಮಿಕರು ಬೆಳಗಾವಿ ಜಿಲ್ಲೆಯಲ್ಲಿ ನೋಂದಾಯಿತರಾಗಿದ್ದಾರೆ. ಇವರಲ್ಲಿ 51,180 ಮಂದಿ ಸಕ್ರಿಯ ಕಾರ್ಮಿಕರು ಎಂಬುದೇ ಸರ್ಕಾರದ ದಾಖಲೆ.

4% ಕೊಡುಗೆ – ಸರ್ಕಾರವೇ ಹೊರುವ ಭಾರ
ಕಾರ್ಮಿಕ ನೋಂದಣಿಗೆ ಸಂಬಂಧಿಸಿದಂತೆ ಒಟ್ಟು ವೇತನದ 4% ಮಾತ್ರ ಕೊಡುಗೆ ವಸೂಲಿ ಮಾಡಲಾಗುತ್ತದೆ. ಇದರಲ್ಲಿ ಉದ್ಯೋಗದಾತರು 3.25%, ಕಾರ್ಮಿಕರು ಕೇವಲ 0.75% ಮಾತ್ರ ಪಾವತಿಸಬೇಕಾಗುತ್ತದೆ. ಉಳಿದ ಸೌಲಭ್ಯಗಳ ವೆಚ್ಚವನ್ನು ಸರ್ಕಾರವೇ ಹೊರುತ್ತಿದೆ ಎಂಬುದು ಉತ್ತರದಲ್ಲಿ ಸ್ಪಷ್ಟವಾಗಿದೆ.

ಜಿಲ್ಲೆಯಲ್ಲಿ 9 ಕೇಂದ್ರಗಳು – ನೇರ ಸೇವೆ
ಬೇಳಗಾವಿ ಜಿಲ್ಲೆಯಲ್ಲಿ ಒಂದು ಕಾರ್ಮಿಕ ಸಹಾಯ ಕೇಂದ್ರ ಹಾಗೂ ಎಂಟು ಕಾರ್ಮಿಕ ಕಲ್ಯಾಣ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. BIMS ಆಸ್ಪತ್ರೆ ಮೂಲಕ ಆರೋಗ್ಯ ಸೇವೆ, ವಿವಿಧ ಪರಿಹಾರ ಯೋಜನೆಗಳು ಕಾರ್ಮಿಕರಿಗೆ ತಲುಪುತ್ತಿವೆ ಎಂದು ಸಚಿವರು ಸದನಕ್ಕೆ ತಿಳಿಸಿದ್ದಾರೆ.

ಸದನದಲ್ಲಿ ಎತ್ತಿದ ಪ್ರಶ್ನೆ – ನೆಲದ ಮಟ್ಟದ ಸತ್ಯ
ಅಭಯ ಪಾಟೀಲರ ಪ್ರಶ್ನೆ, ಕೇವಲ ಅಂಕಿ-ಅಂಶಗಳಲ್ಲ, ಕಾರ್ಮಿಕರ ಬದುಕಿನ ನೆಲದ ಸತ್ಯವನ್ನು ಸರ್ಕಾರ ಎದುರು ಇಟ್ಟಿದೆ.
ಯೋಜನೆಗಳಿವೆ; ಆದರೆ ಅವು ಎಷ್ಟು ವೇಗವಾಗಿ, ಎಷ್ಟು ಪಾರದರ್ಶಕವಾಗಿ ಕಾರ್ಮಿಕರ ಕೈ ಸೇರುತ್ತಿವೆ ಎಂಬ ಪ್ರಶ್ನೆಯೂ ಇದರ ಜೊತೆಗೆ ಎದ್ದು ಕಾಣುತ್ತದೆ.

