ವಿಟಿಯು 25ನೇ ಘಟಿಕೋತ್ಸವ (ಭಾಗ–2) 8 ಸಾವಿರಕ್ಕೂ ಹೆಚ್ಚು ಸ್ನಾತಕೋತ್ತರರಿಗೆ ಪದವಿ ಪ್ರದಾನ

ಫೆ.2ರಂದು ಜ್ಞಾನಸಂಗಮದಲ್ಲಿ ಸಮಾರಂಭ
ರಾಜ್ಯಪಾಲ ಗೆಹ್ಲೋಟ್ ಅಧ್ಯಕ್ಷತೆ – ರಿಯರ್ ಅಡ್ಮಿರಲ್ ವಿಕ್ರಂ ಮೆನನ್ ಮುಖ್ಯ ಅತಿಥಿ
ಬೆಳಗಾವಿ:
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) 25ನೇ ವಾರ್ಷಿಕ ಘಟಿಕೋತ್ಸವದ ಭಾಗ–2ರಲ್ಲಿ 8,702 ಸ್ನಾತಕೋತ್ತರ ಹಾಗೂ ಸಂಶೋಧನಾ ಪದವೀಧರರಿಗೆ ಪದವಿ ಪ್ರದಾನ ಮಾಡಲಾಗುತ್ತದೆ. ಈ ವೇಳೆ 25 ವಿದ್ಯಾರ್ಥಿಗಳಿಗೆ ಚಿನ್ನದ ಪದಕ, 96 ವಿದ್ಯಾರ್ಥಿಗಳಿಗೆ ವಿವಿಧ ರ್ಯಾಂಕ್‌ಗಳು ಲಭಿಸಲಿವೆ ಎಂದು ವಿಟಿಯು ಕುಲಪತಿ ಡಾ. ಎಸ್. ವಿದ್ಯಾಶಂಕರ್ ತಿಳಿಸಿದ್ದಾರೆ.
ಗುರುವಾರ ಘಟಿಕೋತ್ಸವ ಪೂರ್ವಭಾವಿಯಾಗಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆಬ್ರವರಿ 2ರಂದು ಬೆಳಗ್ಗೆ 11ಕ್ಕೆ ವಿಟಿಯು “ಜ್ಞಾನಸಂಗಮ” ಆವರಣದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಸಭಾಂಗಣದಲ್ಲಿ ಸಮಾರಂಭ ನಡೆಯಲಿದೆ ಎಂದರು.
ಈ ಘಟಿಕೋತ್ಸವಕ್ಕೆ ರಾಜ್ಯಪಾಲ ಹಾಗೂ ವಿಟಿಯು ಕುಲಾಧಿಪತಿ ಥಾವರ್ ಚಂದ್ ಗೆಹ್ಲೋಟ್ ಅಧ್ಯಕ್ಷತೆ ವಹಿಸಲಿದ್ದಾರೆ.
ಉನ್ನತ ಶಿಕ್ಷಣ ಸಚಿವ ಹಾಗೂ ಸಮ ಕುಲಾಧಿಪತಿ ಡಾ. ಎಂ.ಸಿ. ಸುಧಾಕರ್ ಘನ ಉಪಸ್ಥಿತಿ ವಹಿಸಲಿದ್ದಾರೆ.
ಕರ್ನಾಟಕ ನೌಕಾ ನೆಲೆಯ ಫ್ಲಾಗ್ ಆಫೀಸರ್ ಕಮಾಂಡಿಂಗ್, ವಿಶಿಷ್ಟ ಸೇವಾ ಪದಕ ಪುರಸ್ಕೃತ ರಿಯರ್ ಅಡ್ಮಿರಲ್ ವಿಕ್ರಂ ಮೆನನ್ ಮುಖ್ಯ ಅತಿಥಿಯಾಗಿ ಘಟಿಕೋತ್ಸವ ಭಾಷಣ ಮಾಡುವರು.
ಉತ್ತರೀರ್ಣ ಪ್ರಮಾಣ 91.21%
ಎಂಬಿಎ, ಎಂಸಿಎ, ಎಂ.ಟೆಕ್‌, ಪಿಎಚ್‌ಡಿ ಸೇರಿ ಪ್ರವೇಶ ಪಡೆದಿದ್ದ 9,540 ವಿದ್ಯಾರ್ಥಿಗಳ ಪೈಕಿ 8,702 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿದ್ದಾರೆ. ಒಟ್ಟಾರೆ ಉತ್ತರೀರ್ಣ ಪ್ರಮಾಣ ಶೇ.91.21 ಎಂದು ಕುಲಪತಿ ವಿವರಿಸಿದರು.

ಹುಡುಗಿಯರು ಮೇಲುಗೈ:
ಹುಡುಗಿಯರು – 94.40%
ಹುಡುಗರು – 87.98%

ವಿದೇಶಿ ಅಧ್ಯಯನ– ಉದ್ಯೋಗ ಅವಕಾಶಗಳಿಗೆ ನೆರವು
ವಿಟಿಯು ಶೈಕ್ಷಣಿಕ ಕ್ಯಾಲೆಂಡರ್‌ ಅನ್ನು ಅಂತರರಾಷ್ಟ್ರೀಯ ಕ್ಯಾಲೆಂಡರ್‌ಗೆ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. ಪರೀಕ್ಷಾ ಫಲಿತಾಂಶ, ಪ್ರಮಾಣಪತ್ರಗಳಲ್ಲಿ ವಿಳಂಬವಾಗದಂತೆ ಕ್ರಮ ಕೈಗೊಳ್ಳಲಾಗಿದ್ದು, ವಿದೇಶಿ ಉನ್ನತ ಅಧ್ಯಯನ ಹಾಗೂ ಉದ್ಯೋಗಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲಾಗಿದೆ. ಇದೇ ಕಾರಣಕ್ಕಾಗಿ ಕಳೆದ ಮೂರು ವರ್ಷಗಳಿಂದ ವರ್ಷಕ್ಕೆ ಎರಡು ಘಟಿಕೋತ್ಸವಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಮೊದಲ ಭಾಗ ಜುಲೈನಲ್ಲಿ 25ನೇ ಘಟಿಕೋತ್ಸವದ ಭಾಗ–1ನ್ನು ಜುಲೈ 4, 2025ರಂದು ನಡೆಸಲಾಗಿದ್ದು, ಸ್ನಾತಕ (ಯುಜಿ) ಹಾಗೂ ಸಂಶೋಧನಾ ಪದವಿಗಳನ್ನು ಪ್ರದಾನ ಮಾಡಲಾಗಿತ್ತು. ಈಗ ನಡೆಯುತ್ತಿರುವುದು ಸಂಪೂರ್ಣವಾಗಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಘಟಿಕೋತ್ಸವವಾಗಿದೆ.
ಪದವಿ ಪಡೆಯುವವರ ವಿವರ
ಎಂಬಿಎ: 4,928
ಎಂಸಿಎ: 2,960
ಎಂ.ಟೆಕ್: 718
ಎಂ.ಆರ್ಕ್: 59
ಎಂ.ಪ್ಲಾನ್: 21
ಎಂ.ಎಸ್ಸಿ: 16
ಪಿಎಚ್‌ಡಿ: 246
ಎಂಎಸ್ಸಿ (ಎಟಿಜಿ) – ಬೈ ರಿಸರ್ಚ್: 1
ಇಂಟಿಗ್ರೇಟೆಡ್ ಡುಯಲ್ ಡಿಗ್ರಿ – ಬೈ ರಿಸರ್ಚ್: 1
ಒಟ್ಟು: 8,702 ವಿದ್ಯಾರ್ಥಿಗಳು

ಚಿನ್ನದ ಪದಕ ವಿಜೇತರು
ಶಿವಮೊಗ್ಗದ ಜವಾಹರಲಾಲ್ ನೆಹರು ಕಾಲೇಜ್ ಆಫ್ ಎಂಜಿನಿಯರಿಂಗ್‌ನ ಜೆ. ಪರ್ವತಿ ಸಾಲೇರಾ (4),
ಬೆಂಗಳೂರಿನ ಆರ್‌ಎನ್‌ಎಸ್ ಐಟಿಯ ಎಚ್.ಸಿ. ಕಾವ್ಯ (3),
ದಾವಣಗೆರೆಯ ಯುಬಿಡಿಟಿ ಕಾಲೇಜಿನ ಬಿ.ಎಸ್. ಸಂಚಿತಾ (3),
ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿ. ಯೋಗೇಶ್ ಗೌಡ,
ಆಕ್ಸ್‌ಫರ್ಡ್ ಕಾಲೇಜಿನ ಸಿ. ರೇವಂತ ಕುಮಾರ್,
ಬಳ್ಳಾರಿಯ ಆರ್‌ಬಿವೈಎಂ ಕಾಲೇಜಿನ ಬಿ. ರಾಹುಲ್ ಡೇವಿಡ್ ತಲಾ ಎರಡು ಚಿನ್ನದ ಪದಕ ಪಡೆದಿದ್ದಾರೆ
.

ಇ–ವಿದ್ಯಾರ್ಥಿ ಮಿತ್ರ ಪೋರ್ಟಲ್‌ಗೆ ಚಾಲನೆ
ವಿದ್ಯಾರ್ಥಿಗಳ ಅಂಕಪಟ್ಟಿ ವಿಳಂಬ, ಪರೀಕ್ಷಾ ಗೊಂದಲ, ಆಡಳಿತಾತ್ಮಕ ಸಮಸ್ಯೆಗಳಿಗೆ ತ್ವರಿತ ಪರಿಹಾರ ನೀಡುವ ಉದ್ದೇಶದಿಂದ ವಿಟಿಯು ‘ಇ–ವಿದ್ಯಾರ್ಥಿ ಮಿತ್ರ’ ಪೋರ್ಟಲ್‌ಗೆ ಕುಲಪತಿ ಡಾ. ಎಸ್. ವಿದ್ಯಾಶಂಕರ್ ಚಾಲನೆ ನೀಡಿದರು.

Leave a Reply

Your email address will not be published. Required fields are marked *

error: Content is protected !!