ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಮತ್ತೊಂದು ‘ಹೊಸ’ ಹಗರಣದ ಸುಳಿವು?

.998 ಬ್ಯಾನರ್ ಲೆಕ್ಕದಲ್ಲಿ ಅನುದಾನ ದುರ್ಬಳಕೆಯ ವಾಸನೆ

ಐಸಿಡಿಎಸ್ ಯೋಜನೆಯಲ್ಲಿ ‘ಬ್ಯಾನರ್ ಲೆಕ್ಕಾಚಾರ’ ಅನುಮಾನಾಸ್ಪದ

ಅಭಿವೃದ್ಧಿ ಹೆಸರಿನಲ್ಲೇ ಮತ್ತೊಂದು ಅನುದಾನ ಆಟವೇ?.

ಬೆಂಗಳೂರು:
ರಾಜ್ಯಾದ್ಯಂತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಐಸಿಡಿಎಸ್ ಯೋಜನೆಯಡಿ ಅಂಗನವಾಡಿಗಳ ಎದುರು ಅಳವಡಿಸಲಾಗುತ್ತಿರುವ ಮಾಹಿತಿ ಬ್ಯಾನರ್‌ಗಳು ಇದೀಗ ಅಭಿವೃದ್ಧಿಯ ಸಂಕೇತವಲ್ಲ, ಅನುಮಾನಗಳ ಕೇಂದ್ರಬಿಂದುವಾಗಿವೆ.
ಇಲಾಖೆಯ ಅಧಿಕೃತ ಆದೇಶದಂತೆ, ಪ್ರತಿಯೊಂದು ಅಂಗನವಾಡಿಯ ಮುಂದೆ 6×4 ಅಳತೆಯ ಐಸಿಡಿಎಸ್ ಮಾಹಿತಿ ಬ್ಯಾನರ್ ಅಳವಡಿಸುವಂತೆ ಸೂಚಿಸಲಾಗಿದ್ದು, ಪ್ರತಿ ಬ್ಯಾನರ್‌ಗೆ ರೂ.998 ವೆಚ್ಚ ನಿಗದಿಪಡಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

2025–26ನೇ ಸಾಲಿನ ಅನುದಾನ ಬಳಕೆಗೆ ಸಂಬಂಧಿಸಿ 20-01-2026ರಂದು ಹೊರಡಿಸಿರುವ ಆದೇಶದಲ್ಲಿ, ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಒಂದೇ ಮಾದರಿಯ ಬ್ಯಾನರ್‌ಗಳನ್ನು ಅಳವಡಿಸುವಂತೆ ಸೂಚಿಸಲಾಗಿದೆ. ಈ ಬ್ಯಾನರ್‌ಗಳ ವಿನ್ಯಾಸ, ಮುದ್ರಣ ಹಾಗೂ ಅಳವಡಿಕೆ ಕಾರ್ಯವನ್ನು ಕೆಎಸ್‌ಎಂಸಿಎ (KSMCA) ಮೂಲಕವೇ ನಡೆಸಬೇಕು ಎಂಬ ಸ್ಪಷ್ಟ ಸೂಚನೆಯೂ ಆದೇಶದಲ್ಲಿದೆ.
ಒಂದೇ ಬ್ಯಾನರ್‌ಗೆ ರೂ.998! ಲೆಕ್ಕಾಚಾರ ಯಾರದು?
ಸಾಮಾನ್ಯವಾಗಿ ಸ್ಥಳೀಯ ಮುದ್ರಣಾಲಯಗಳಲ್ಲಿ ಇದೇ ಅಳತೆಯ ಬ್ಯಾನರ್‌ಗಳು ರೂ.400ರಿಂದ ರೂ.430ರೊಳಗೆ ಸುಲಭವಾಗಿ ಲಭ್ಯವಾಗುತ್ತವೆ. ಅಷ್ಟೇ ಅಲ್ಲ, ಸಾವಿರಾರು ಸಂಖ್ಯೆಯಲ್ಲಿ ಮುದ್ರಿಸಿದರೆ ದರ ಇನ್ನಷ್ಟು ಇಳಿಯುವುದು ಮುದ್ರಣ ಕ್ಷೇತ್ರದ ಸಾಮಾನ್ಯ ನಿಯಮ..

ಸರ್ಕಾರದ ಆದೇಶ ಪ್ರತಿ

ಆದರೆ ಇಂತಹ ವಾಸ್ತವಾಂಶಗಳ ನಡುವೆಯೂ, ಸರ್ಕಾರದ ಲೆಕ್ಕದಲ್ಲಿ ಪ್ರತಿ ಬ್ಯಾನರ್‌ಗೆ ರೂ.998 ವೆಚ್ಚವನ್ನು ಹೇಗೆ ನಿಗದಿಪಡಿಸಲಾಗಿದೆ ಎಂಬುದಕ್ಕೆ ಯಾವುದೇ ಸ್ಪಷ್ಟನೆ ನೀಡಿಲ್ಲ.
ರಾಜ್ಯದಲ್ಲಿ ಸಾವಿರಾರು ಅಂಗನವಾಡಿಗಳು ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ, ಈ ಒಂದೇ ಯೋಜನೆಯ ಒಟ್ಟು ವೆಚ್ಚ ಲಕ್ಷಾಂತರ ರೂಪಾಯಿಗಳನ್ನು ಮೀರುವ ಸಾಧ್ಯತೆ ಇದೆ. ಇದು ನಿಜಕ್ಕೂ ಮಾಹಿತಿ ಪ್ರದರ್ಶನಕ್ಕೆ ಅಗತ್ಯವಿರುವ ಖರ್ಚೇ? ಅಥವಾ ಅನುದಾನ ಬಳಕೆಯ ಹೆಸರಿನಲ್ಲಿ ಮತ್ತೊಂದು ‘ಬ್ಯಾನರ್ ವ್ಯವಹಾರವೇ?’ ಎಂಬ ಪ್ರಶ್ನೆ ಸಹಜವಾಗಿ ಕೇಳಿಬರುತ್ತಿದೆ.
ಆದ್ಯತೆ ತಪ್ಪಿದೆಯೇ?
ಅಂಗನವಾಡಿಗಳಲ್ಲಿ ಪೌಷ್ಟಿಕ ಆಹಾರ, ಆಟಿಕೆಗಳು, ಆರೋಗ್ಯ ಕಿಟ್‌ಗಳು, ಕುಡಿಯುವ ನೀರು ಹಾಗೂ ಮೂಲಸೌಕರ್ಯದ ಕೊರತೆ ಕುರಿತು ವರ್ಷಗಳಿಂದ ದೂರುಗಳು ಕೇಳಿಬರುತ್ತಿವೆ. ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಅಂಗನವಾಡಿ ಕಟ್ಟಡಗಳೇ ಜೀರ್ಣಾವಸ್ಥೆಯಲ್ಲಿವೆ.
ಇಂತಹ ಮೂಲಭೂತ ಸಮಸ್ಯೆಗಳು ಇನ್ನೂ ಬಗೆಹರಿಯದೇ ಇರುವ ಸಂದರ್ಭದಲ್ಲಿ, ಬ್ಯಾನರ್‌ಗಳಿಗೆ ಆದ್ಯತೆ ನೀಡಿರುವುದು ‘ಕಲ್ಯಾಣಕ್ಕಿಂತ ಪ್ರದರ್ಶನ ಮುಖ್ಯವೇ?’ ಎಂಬ ಅಸಮಾಧಾನಕ್ಕೆ ಕಾರಣವಾಗಿದೆ.
ಐಸಿಡಿಎಸ್ ಸಾಧನೆಯನ್ನು ಗೋಡೆ ಮೇಲೆ ಹಾಕಿದ ಬ್ಯಾನರ್‌ಗಳಿಂದ ಅಳೆಯಬೇಕೆ? ಅಥವಾ ಆ ಹಣವನ್ನು ಮಕ್ಕಳ ನೈಜ ಅಗತ್ಯಗಳಿಗೆ ಬಳಸಬಹುದಿತ್ತೇ ಎಂಬ ಪ್ರಶ್ನೆ ಜನಸಾಮಾನ್ಯರಲ್ಲಿ ಮೂಡಿದೆ.
ಒಂದೇ ಮಾದರಿ–ಒಂದೇ ಸಂಸ್ಥೆ: ಪಾರದರ್ಶಕತೆ ಎಲ್ಲಿ?
ಬ್ಯಾನರ್ ವಿನ್ಯಾಸದಿಂದ ಹಿಡಿದು ಮುದ್ರಣ ಹಾಗೂ ಅಳವಡಿಕೆವರೆಗೂ ಒಂದೇ ಸಂಸ್ಥೆಯ ಮೂಲಕವೇ ನಡೆಸಬೇಕೆಂಬ ಸೂಚನೆ, ಪಾರದರ್ಶಕತೆಯ ಕೊರತೆಯನ್ನು ತೋರಿಸುತ್ತದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಟೆಂಡರ್ ಪ್ರಕ್ರಿಯೆ, ಸ್ಪರ್ಧಾತ್ಮಕ ದರ ನಿಗದಿ ಅಥವಾ ಪರ್ಯಾಯ ಆಯ್ಕೆಗಳ ಕುರಿತು ಆದೇಶದಲ್ಲಿ ಯಾವುದೇ ಉಲ್ಲೇಖವಿಲ್ಲದಿರುವುದು ಅನುಮಾನವನ್ನು ಇನ್ನಷ್ಟು ಗಟ್ಟಿಗೊಳಿಸಿದೆ.
ಹಿಂದಿನ ಹಗರಣಗಳ ನೆರಳು
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಈ ಹಿಂದೆ ಆಹಾರ ಸರಬರಾಜು, ವಿವಿಧ ಕಿಟ್‌ಗಳ ಖರೀದಿ, ಮೊಬೈಲ್ ಹಾಗೂ ಟಿವಿ ಖರೀದಿಗೆ ಸಂಬಂಧಿಸಿದ ಹಗರಣಗಳು ಬಹಿರಂಗವಾಗಿದ್ದನ್ನು ಮರೆತಿಲ್ಲ.
ಆ ಹಿನ್ನಲೆಯಲ್ಲಿ, ಇಂದಿನ ಬ್ಯಾನರ್ ಯೋಜನೆಯೂ ಅದೇ ಸರಣಿಯ ಮತ್ತೊಂದು ಕೊಂಡಿಯೇ ಎಂಬ ಅನುಮಾನ ಬಲ ಪಡೆಯುತ್ತಿದೆ.

ಉತ್ತರಕ್ಕೆ ಕಾಯುತ್ತಿರುವ ಪ್ರಶ್ನೆಗಳು
ಬ್ಯಾನರ್‌ಗಳ ವೆಚ್ಚವನ್ನು ಯಾರು, ಯಾವ ಆಧಾರದಲ್ಲಿ ನಿಗದಿಪಡಿಸಿದರು?
ಸ್ಥಳೀಯ ಮಟ್ಟದಲ್ಲಿ ಕಡಿಮೆ ವೆಚ್ಚದಲ್ಲಿ ಮಾಡಿಸಬಹುದಾದ ಅವಕಾಶವನ್ನು ಏಕೆ ಬಳಸಿಕೊಳ್ಳಲಿಲ್ಲ?
ಟೆಂಡರ್ ಪ್ರಕ್ರಿಯೆ ಏಕೆ ಕೈಗೊಳ್ಳಲಿಲ್ಲ?
ಮಕ್ಕಳ ನೈಜ ಕಲ್ಯಾಣಕ್ಕಿಂತ ‘ಪ್ರದರ್ಶನ’ಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆಯೇ?

Leave a Reply

Your email address will not be published. Required fields are marked *

error: Content is protected !!