ಇದು ಸರ್ಕಾರದ ಮಾನ ಹರಾಜಿಗೆ ಹಾಕಿದ ಪ್ರಕರಣ!

Oplus_16908288

ದೂರು ಇದೆ… ಎಫ್‌ಐಆರ್ ಇಲ್ಲ – ಡಿಸಿಆರ್‌ಇಗೆ ಯಾರು ಕೈ ಹಿಡಿದವರು?.

ಮಹಿಳಾ ಕಲ್ಯಾಣ ಇಲಾಖೆಯಲ್ಲೇ ಮಹಿಳೆಗೆ ಅಸುರಕ್ಷತೆ!.

ತಪ್ಪಿತಸ್ಥರ ವಿರುದ್ಧ ಕ್ರಮ ಎಂದ ಸಚಿವೆ ಹೆಬ್ಬಾಳಕರ.

ಜಾತಿ ನಿಂದನೆ ಆರೋಪಕ್ಕೂ ಪ್ರಕರಣವಿಲ್ಲ – ಕಾನೂನು ಎಲ್ಲಿ ಮಲಗಿದೆ?

ಮಾಮೂಲಿ, ಮದ್ಯ, ಪ್ರವಾಸ ಪ್ರಸ್ತಾಪ – ಅಧಿಕಾರದ ದುರುಪಯೋಗದ ಆರೋಪ.

ಎರಡನೇ ದೂರುಗೂ ಕ್ರಮವಿಲ್ಲ – ವ್ಯವಸ್ಥೆಯೇ ಆರೋಪಿಗಳ ರಕ್ಷಕವೇ?

ನ್ಯಾಯ ವಿಳಂಬವಲ್ಲ, ನ್ಯಾಯ ನಿರಾಕರಣೆ ಎನ್ನುವ ಟೀಕೆ.

ಮಹಿಳಾ ಸಬಲೀಕರಣ ಘೋಷಣೆಗಳಿಗೆ ನೆಲಮಟ್ಟದ ಹೊಡೆತ

ಡಿಸಿಆರ್‌ಇ ನಿರ್ಲಕ್ಷ್ಯಕ್ಕೆ ಸರ್ಕಾರ ಸ್ಪಷ್ಟನೆ ಕೊಡಬೇಕು
ಆಪಾದಿತ ಅಧಿಕಾರಿಗೆ ರಕ್ಷಣೆ? ಪೀಡಿತೆಗೆ ನಿರ್ಲಕ್ಷ್ಯ
?

ಕ್ರಮ ಖಂಡಿತ..

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲ ಬೆಳಕಿಗೆ ಬಂದ ಪರಿಶಿಷ್ಟ ಜಾತಿ ಮಹಿಳೆ ಮೇಲೆ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಬಗ್ಗೆ ವಿಚಾರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು. ಅಷ್ಟೇ ಅಲ್ಲ ಸಂತ್ರಸ್ತೆ ಜೊತೆಗೂ ಮಾತುಕತೆ ಮಾಡಲಾಗುವುದು.

ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ. ಸಚಿವರು


ಬೆಳಗಾವಿ: ಮಹಿಳೆಯರ ರಕ್ಷಣೆ, ಸಬಲೀಕರಣ ಮತ್ತು ಹಕ್ಕುಗಳ ಸಂರಕ್ಷಣೆಯ ಹೊಣೆ ಹೊತ್ತಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲೇ ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನಡೆದಿರುವ ಗಂಭೀರ ಆರೋಪ ಕೇಳಿಬಂದಿದೆ. ಆದರೆ ಜನವರಿ 16ರಂದು ಬೆಳಗಾವಿ ಡಿಸಿಆರ್‌ಇ ಠಾಣೆಗೆ ದೂರು ನೀಡಿದರೂ ಒಂದುವರೆ ತಿಂಗಳು ಕಳೆದರೂ ಎಫ್‌ಐಆರ್ ದಾಖಲಾಗಿಲ್ಲ ಎನ್ನುವುದು ಆತಂಕಕಾರಿ ಸಂಗತಿ.
ಕಾನೂನು ಪ್ರಕಾರ ತಕ್ಷಣ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಬೇಕಿದ್ದಲ್ಲಿ, ಡಿಸಿಆರ್‌ಇ ಅಧಿಕಾರಿಗಳ ವಿಳಂಬ ಮತ್ತು ಇಲಾಖೆಯ ಮೌನ ಸರ್ಕಾರದ ಬದ್ಧತೆ ಕುರಿತು ಪ್ರಶ್ನೆ ಎಬ್ಬಿಸಿದೆ.
ಆರೋಪದ ಗಂಭೀರತೆ ಏನು?

ದೂರುದಾರ್ತಿ ಮಹಿಳೆ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ದೂರಿನ ಪ್ರಕಾರ, ಬೆಳಗಾವಿ ನಗರದ ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಓ) ರಾಮಮೂರ್ತಿ ಕೆ.ವಿ. ಅವರು ಪ್ರತಿ ತಿಂಗಳು ₹10 ಸಾವಿರ “ಮಾಮೂಲಿ” ನೀಡುವಂತೆ ಒತ್ತಡ ಹೇರುತ್ತಿದ್ದರು.
ಇದಲ್ಲದೆ, ಅಸಭ್ಯ ಸೂಚನೆಗಳು, “ಡ್ರಿಂಕ್ ಮಾಡಿ ಮಜಾನೇ ಬೇರೆ” ಎಂಬ ಹೇಳಿಕೆ, ಖಾಸಗಿ ಕಾರಿನಲ್ಲಿ ಗೋವಾ ಪ್ರವಾಸದ ಪ್ರಸ್ತಾಪ, ರಾತ್ರಿ ವೇಳೆ ವಾಟ್ಸಾಪ್ ಕರೆ ಮೂಲಕ ಕಿರುಕುಳ, ಜಾತಿ ನಿಂದನೆ, ಕೆಲಸದಿಂದ ತೆಗೆದುಹಾಕುವ ಬೆದರಿಕೆ – ಇವೆಲ್ಲವೂ ದೂರಿನಲ್ಲಿ ಉಲ್ಲೇಖಗೊಂಡಿವೆ.

ಡಿಸಿಆರ್‌ಇ ಮೌನ – ಕಾನೂನು ಎಲ್ಲಿ?
ದೂರು ಸ್ವೀಕೃತಿ ನೀಡಿದರೂ ಪ್ರಕರಣ ದಾಖಲಿಸದಿರುವುದು ಕಾನೂನು ಪಾಲನೆಗೆ ಧಕ್ಕೆಯಾಗಿದೆ. ಇದು ಕೇವಲ ಆಡಳಿತಾತ್ಮಕ ವಿಳಂಬವಲ್ಲ; ಪರಿಶಿಷ್ಟ ಜಾತಿ ಮಹಿಳೆಯೊಬ್ಬರು ಜಾತಿ ನಿಂದನೆ ಮತ್ತು ಲೈಂಗಿಕ ಕಿರುಕುಳ ಆರೋಪಿಸಿರುವ ಪ್ರಕರಣದಲ್ಲಿ ವಿಳಂಬವು ಗಂಭೀರ ಕಾನೂನು ಪ್ರಶ್ನೆ ಎಬ್ಬಿಸುತ್ತದೆ.
ಸಚಿವರ ಜವಾಬ್ದಾರಿ ಎಲ್ಲಿದೆ?
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದಿದ್ದರೆ, ಅದು ಸರ್ಕಾರದ ನೈತಿಕ ಬದ್ಧತೆಗೆ ಧಕ್ಕೆ ತರುತ್ತದೆ ಎಂಬ ಅಭಿಪ್ರಾಯ ನಾಗರಿಕ ವಲಯದಲ್ಲಿ ಕೇಳಿಬರುತ್ತಿದೆ.
ಮಹಿಳಾ ಸಬಲೀಕರಣ, ಸುರಕ್ಷತೆ ಎಂಬ ಘೋಷಣೆಗಳ ಮಧ್ಯೆ ಇದೇ ಇಲಾಖೆಯಲ್ಲೇ ಇಂತಹ ಆರೋಪ ಕೇಳಿಬಂದು, ಕ್ರಮ ಕೈಗೊಳ್ಳದೆ ಇದ್ದರೆ ಅದು ಸರ್ಕಾರದ ಮಾನ ಹರಾಜಿಗೆ ಹಾಕಿದಂತಾಗುತ್ತದೆ.
ಇದು ಎರಡನೇ ದೂರು…
ಪೀಡಿತೆಯ ಹೇಳಿಕೆಯ ಪ್ರಕಾರ, ಈ ಹಿಂದೆ ಸಹ ಡಿಸಿಆರ್‌ಇಗೆ ದೂರು ನೀಡಿದರೂ “ಮೊದಲು ವಿಚಾರಣೆ, ನಂತರ ಎಫ್‌ಐಆರ್” ಎಂಬ ನೆಪದಲ್ಲಿ ಕಾಲಹರಣ ಮಾಡಲಾಗಿದೆ. ಇದೀಗ ಹೊಸ ಅಧಿಕಾರಿಗೆ ಮರುದೂರು ನೀಡಿ ಒಂದುವರೆ ತಿಂಗಳು ಕಳೆದರೂ ಕ್ರಮವಾಗಿಲ್ಲ ಎನ್ನಲಾಗಿದೆ.
ತಕ್ಷಣದ ಕ್ರಮ ಅಗತ್ಯ
ಸರ್ಕಾರ ತಕ್ಷಣ:
ಎಫ್‌ಐಆರ್ ದಾಖಲಿಸುವಂತೆ ಸೂಚನೆ ನೀಡಬೇಕು,
ಸ್ವತಂತ್ರ ತನಿಖಾ ತಂಡ ರಚಿಸಬೇಕು,
ಆಪಾದಿತ ಅಧಿಕಾರಿಯನ್ನು ತನಿಖೆ ಪೂರ್ಣಗೊಳ್ಳುವವರೆಗೆ ಕರ್ತವ್ಯದಿಂದ ದೂರ ಇರಿಸಬೇಕು,
ಇಲಾಖಾ ಮಟ್ಟದಲ್ಲಿ ಪಾರದರ್ಶಕ ವಿಚಾರಣೆ ನಡೆಸಬೇಕು.
ಮಹಿಳೆಯರ ಹಕ್ಕುಗಳನ್ನು ಕಾಪಾಡಬೇಕಾದ ವ್ಯವಸ್ಥೆಯೇ ಮೌನ ವಹಿಸಿದರೆ, ಅದು ಕೇವಲ ಒಂದು ಪ್ರಕರಣದ ವಿಫಲತೆ ಅಲ್ಲ – ಅದು ಆಡಳಿತದ ವಿಶ್ವಾಸಾರ್ಹತೆಗೆ ಹೊಡೆತ.
ಇದೀಗ ಪ್ರಶ್ನೆ ಸ್ಪಷ್ಟವಾಗಿದೆ – ನ್ಯಾಯದ ಬದಿಯಲ್ಲಿ ಸರ್ಕಾರ ನಿಂತುಕೊಳ್ಳುತ್ತದೆಯೇ, ಅಥವಾ ಮೌನವೇ ಉತ್ತರವಾಗುತ್ತದೆಯೇ?

Leave a Reply

Your email address will not be published. Required fields are marked *

error: Content is protected !!