ತುಮಕೂರು:
ಸಂಚಾರ ದಟ್ಟಣೆ ನಿವಾರಣೆಗೆ ವೇಗ — ಸಚಿವ ವಿ. ಸೋಮಣ್ಣ ವೀಕ್ಷಣೆ
ತುಮಕೂರು: ನಗರದ ಪ್ರಮುಖ ರೈಲು ಮೇಲ್ಸೇತುವೆ (ROB) ಕಾಮಗಾರಿಗಳ ಪ್ರಗತಿಯನ್ನು ರೇಲ್ವೆ ಸಚಿವ ವಿ. ಸೋಮಣ್ಣ ಅವರು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಬುಡಿಹಳ್ಳಿ, ಕ್ಯಾತ್ಸಂದ್ರ ಹಾಗೂ ಬಟವಡಿ ಪ್ರದೇಶಗಳಲ್ಲಿ ನಿರ್ಮಾಣ ಹಂತದಲ್ಲಿರುವ ROB ಕಾಮಗಾರಿಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು. ಸಂಚಾರ ದಟ್ಟಣೆ ಹೆಚ್ಚಿರುವ ಈ ಭಾಗಗಳಲ್ಲಿ ರೈಲು ಗೇಟ್ ಮುಚ್ಚುವ ವೇಳೆ ಉಂಟಾಗುವ ಟ್ರಾಫಿಕ್ ಸಮಸ್ಯೆ ಬಗ್ಗೆ ಸ್ಥಳೀಯರು ಸಲ್ಲಿಸಿದ ಮನವಿಗಳನ್ನು ಸಚಿವರು ಗಮನಿಸಿದರು.

ಈ ಸಂದರ್ಭದಲ್ಲಿ ತುಮಕೂರು ಮಹಾನಗರ ಪಾಲಿಕೆ ಆಯುಕ್ತೆ ಶುಭ ಬಿ ಅವರು ಕಾಮಗಾರಿಗಳ ಪ್ರಗತಿ, ಭೂಸ್ವಾಧೀನ ಪ್ರಕ್ರಿಯೆ ಹಾಗೂ ತಾಂತ್ರಿಕ ಅಂಶಗಳ ಕುರಿತು ವಿವರವಾದ ಮಾಹಿತಿ ನೀಡಿದರು. ಈಗಾಗಲೇ ಬಹುತೇಕ ಭಾಗಗಳಲ್ಲಿ ಕೆಲಸ ಆರಂಭವಾಗಿದ್ದು, ಕೆಲವು ಸ್ಥಳಗಳಲ್ಲಿ ಅಗತ್ಯ ಸೌಲಭ್ಯಗಳ ಸ್ಥಳಾಂತರ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ROBಗಳು ಪೂರ್ಣಗೊಂಡ ಬಳಿಕ ವಾಹನ ಸಂಚಾರ ಸುಗಮಗೊಳ್ಳುವುದರೊಂದಿಗೆ ಅಪಘಾತಗಳ ಸಂಭವ ಕಡಿಮೆಯಾಗಲಿದೆ. ವಿಶೇಷವಾಗಿ ಶಾಲಾ ವಿದ್ಯಾರ್ಥಿಗಳು, ಕಾರ್ಮಿಕರು ಹಾಗೂ ವ್ಯಾಪಾರಸ್ಥರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟರು.
ಸಚಿವರು ಗುಣಮಟ್ಟದಲ್ಲಿ ಯಾವುದೇ ತೊಂದರೆ ಉಂಟಾಗದಂತೆ ಕಟ್ಟುನಿಟ್ಟಿನ ಮೇಲ್ವಿಚಾರಣೆ ನಡೆಸಲು ಸೂಚಿಸಿ, ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದರು.

