ಬೆಳಗಾವಿ:
ಒಂದು ಕಾಲದಲ್ಲಿ ಎಂಇಎಸ್ನ ಕೆಲ ಮುಖಂಡರನ್ನು ನಂಬಿ ಕನ್ನಡಿಗರ ವಿರುದ್ಧವೇ ಗರ್ಜಿಸಿದ್ದ ಶುಭಂ ಶೆಳಕೆ, ಇಂದು ರಾಜಕೀಯವಾಗಿಯೂ, ಸಂಘಟನಾತ್ಮಕವಾಗಿಯೂ ಮೂಲೆಗೆ ಸರಿಸಲ್ಪಟ್ಟ ವ್ಯಕ್ತಿಯಾಗಿ ಕಾಣಿಸುತ್ತಿದ್ದಾರೆ.
ಗಡಿನಾಡಿನ ರಾಜಕೀಯದಲ್ಲಿ ಒಮ್ಮೆ ‘ಉಗ್ರ ಮುಖ’ವಾಗಿ ತಾನೇ ತಾನನ್ನು ಮುಂದಿಟ್ಟುಕೊಂಡಿದ್ದ ಶೆಳಕೆಗೆ, ಇದೀಗ ಒಂದೊಂದಾಗಿ ಬಾಗಿಲುಗಳು ಮುಚ್ಚುತ್ತಿವೆ ಎಂಬ ಮಾತು ಕೇಳಿಬರುತ್ತಿದೆ.
ಕನ್ನಡಪರ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಎಂಇಎಸ್ ಧ್ವಜದ ನೆರಳಿನಲ್ಲಿ ಅಬ್ಬರಿಸಿದ್ದ ಶೆಳಕೆ, ಕೇವಲ ಘೋಷಣೆಗಳಲ್ಲೇ ನಿಲ್ಲಲಿಲ್ಲ. ಗಲಭೆಗೇಡಿಯಂತಿದ್ದ ಉದ್ವಿಗ್ನ ಪರಿಸ್ಥಿತಿಗಳ ನಡುವೆಯೇ ಹಲವು ದಿನಗಳ ಕಾಲ ಜೈಲು ಸೇರಿ ಬಂದ ಅನುಭವವೂ ಅವರ ರಾಜಕೀಯ ಪಯಣದ ಕಪ್ಪು ಅಧ್ಯಾಯವಾಗಿಯೇ ಉಳಿದಿದೆ. ಅಷ್ಟೇ ಅಲ್ಲ, ಕೆಲವು ದಿನಗಳ ಕಾಲ ಪೊಲೀಸರ ಕಣ್ತಪ್ಪಿಸಿ ಹೊರಗೆ ತಿರುಗಾಟ ನಡೆಸಿದ ಪ್ರಕರಣಗಳೂ ಅವರ ಹೆಸರಿಗೆ ಸುತ್ತಿಕೊಂಡಿದ್ದವು ಎಂಬ ಚರ್ಚೆ ಈಗ ಮತ್ತೆ ಮುನ್ನೆಲೆಗೆ ಬಂದಿದೆ.

ಆ ವೇಳೆಗೆ ಶೆಳಕೆಯ ಲೆಕ್ಕಾಚಾರ ಸ್ಪಷ್ಟವಾಗಿತ್ತು ಎನ್ನಲಾಗುತ್ತಿದೆ. ಎಂಇಎಸ್ ವೇದಿಕೆಯನ್ನು ಮೆಟ್ಟಿಲಾಗಿ ಬಳಸಿಕೊಂಡು ಕರ್ನಾಟಕದ ವಿಧಾನಸೌಧದ ಮೆಟ್ಟಿಲೇರಬೇಕು, ಗಡಿಭಾಗ ರಾಜಕಾರಣದಲ್ಲಿ ತಾನೊಬ್ಬ ಬಲಿಷ್ಠ ಮುಖವಾಗಬೇಕು ಎಂಬ ಕನಸು ಅವರು ಕಟ್ಟಿಕೊಂಡಿದ್ದರು. ಆದರೆ ರಾಜಕೀಯದಲ್ಲಿ ಬಳಸಿಕೊಳ್ಳುವ ಕೈಗಳು ಶಾಶ್ವತವಾಗಿ ಬೆಂಬಲಿಸುವುದಿಲ್ಲ. ಅಗತ್ಯವಿರುವವರೆಗೂ ಹತ್ತಿರ ಇಟ್ಟುಕೊಂಡವರು, ಕಾಲ ಬದಲಾಗುತ್ತಿದ್ದಂತೆ ಕೈಬಿಟ್ಟರೆ ಪರಿಸ್ಥಿತಿ ಹೇಗಾಗುತ್ತದೆ ಎಂಬುದಕ್ಕೆ ಶೆಳಕೆಯ ಉದಾಹರಣೆಯೇ ಸಾಕು.

ಇದೀಗ ಅದೇ ವಾಸ್ತವ ಇನ್ನಷ್ಟು ಬಯಲಾಗುತ್ತಿದೆ. ಶಿವಾಜಿ ಜಯಂತಿ ಉತ್ಸವ ಸಮಿತಿಯಲ್ಲಿ ನಡೆದ ಇತ್ತೀಚಿನ ಬೆಳವಣಿಗೆಗಳು ಶೆಳಕೆಯ ರಾಜಕೀಯ ಏಕಾಂಗಿತನಕ್ಕೆ ಹೊಸ ಮುದ್ರೆ ಹೊಡೆದಂತಾಗಿವೆ. ಸಮಿತಿಯ ಹೊಸ ವಿನ್ಯಾಸದಲ್ಲಿ ಶೆಳಕೆಗೆ ಪ್ರಾಮುಖ್ಯತೆ ಸಿಗದೇ ಹೋಗಿರುವುದು ಸಾಮಾನ್ಯ ಘಟನೆಯಲ್ಲ ಎನ್ನುವ ಮಾತು ಕೇಳಿಬರುತ್ತಿದೆ. ಒಂದೊಮ್ಮೆ ಮುಂದಿರಿಸಲ್ಪಟ್ಟ ಮುಖ, ಇಂದು ಸಮಿತಿಯ ಅಂಚಿಗೂ ಬರದ ಸ್ಥಿತಿ ಬಂದಿರುವುದು ರಾಜಕೀಯ ಸಂದೇಶವಿಲ್ಲದೆ ಸಂಭವಿಸುವುದಿಲ್ಲ ಎಂಬ ವಿಶ್ಲೇಷಣೆ ಸ್ಥಳೀಯ ವಲಯದಲ್ಲಿ ಕೇಳಿ ಬರುತ್ತಿದೆ.
ಇದರ ಅರ್ಥ. ಎಂಇಎಸ್ ಎಂದು ಜಿಗಿದಾಡಿದವರನ್ನು, ಕನ್ನಡಿಗರ ವಿರುದ್ಧ ಅಬ್ಬರಿಸಿದವರನ್ನು, ಒಂದು ಹಂತದ ನಂತರ ವ್ಯವಸ್ಥಿತವಾಗಿ ಮೂಲೆಗುಂಪು ಮಾಡುವ ಆಟ ಅಲ್ಲಿ ನಡೆಯುತ್ತಿದೆ ಎನ್ನುವುದು ಸುಳ್ಳಲ್ಲ. ಬಳಸಿಕೊಳ್ಳುವವರೆಗೂ ಹೊಗಳುವುದು, ಕೆಲಸ ಮುಗಿದ ಬಳಿಕ ಪಕ್ಕಕ್ಕೆ ಸರಿಸುವುದು — ಇದೇ ಆ ಒಳರಾಜಕೀಯದ ಅಸಲಿ ಮುಖ .
ಶೆಳಕೆಯ ಪ್ರಸಂಗ ಒಬ್ಬ ವ್ಯಕ್ತಿಯ ವೈಯಕ್ತಿಕ ಹಿನ್ನಡೆಯ ಕಥೆಯಷ್ಟೇ ಅಲ್ಲ; ಅದು ಗಡಿನಾಡಿನ ಸಂಘಟನೆ ರಾಜಕಾರಣದ ನಿರ್ದಯ ಸ್ವಭಾವವನ್ನೇ ಬಿಚ್ಚಿಡುತ್ತದೆ.
ನಿನ್ನೆವರೆಗೂ ಹೆಗಲೇರಿ ಕೂಗಿಸಿದವರನ್ನೇ, ಇಂದು ನೆನಪಿಗೂ ತರುವುದಿಲ್ಲದ ಮಟ್ಟಿಗೆ ಬದಿಗಟ್ಟಿ ನಿಲ್ಲಿಸುವ ಸಂಸ್ಕೃತಿ ಎಷ್ಟು ಕ್ರೂರ ಎಂಬುದಕ್ಕೆ ಇದು ನೇರ ಉದಾಹರಣೆ.

