ಪ್ರಿಯಂಕಾ ಗೆದ್ದರೆ ಇನ್ನಷ್ಟು ಕಾರ್ಯವ್ಯಾಪ್ತಿ ವಿಸ್ತರಿಸುತ್ತದೆ: ಸಚಿವ ಸತೀಶ್ ಜಾರಕಿಹೊಳಿ
ಧರ್ಮದ ಆಧಾರಿತ ರಾಜಕೀಯ ಬೇಡ ಎಂದು ಜನ ನಿರ್ಧರಿಸಿದ್ದರು ಎಂದ ಸತೀಶ್ ಜಾರಕಿಹೊಳಿ
ಬೆಳಗಾವಿ: ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಗೆಲ್ಲುವುದರಲ್ಲಿ ಯಾವುದೇ ಸಂದೇಹವಿಲ್ಲ. ಅವರು ಗೆದ್ದ ನಂತರ ನಮ್ಮ ಜವಾಬ್ದಾರಿಯೂ ಹೆಚ್ಚಾಗಲಿದೆ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.

ಹುಕ್ಕೇರಿ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ಕಳೆದ 30 ವರ್ಷಗಳಿಂದ ನಾವು ಜರನ ಸಂಪರ್ಕದಲ್ಲಿ ಇದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾಡುತ್ತಿದ್ದೇವೆ. ಆದರೆ ಪ್ರಿಯಂಕಾ ಜಾರಕಿಹೊಳಿ ಗೆದ್ದ ಮೇಲೆ ಇನ್ನಷ್ಟು ನಮ್ಮ ಕಾರ್ಯವ್ಯಾಪ್ತಿ ವಿಸ್ತರಿಸಲಿದೆ ಎಂದು ತಿಳಿಸಿದರು.

ಚಿಕ್ಕೋಡಿ ಲೋಕಸಭೆ ಚುನಾವಣೆಯಲ್ಲಿ ನಿವೆಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಿರಿ. ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲುತ್ತಾರೆಂಬ ವಿಶ್ವಾಸ ನಮಗಿದೆ. ಆದರೂ ಫಲಿತಾಂಶ ಬರುವವರೆಗೂ ನಾವು ಕಾಯಬೇಕು. ಗೆದ್ದರೆ ಏಂಟು ವಿಧಾನಸಭೆ ಕ್ಷೇತ್ರದ ಮುಖಂಡರು, ಜನರನ್ನು ಭೇಟಿಯಾಗಿ ಅವರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಕೆಲಸವನ್ನು ಮಾಡಬೇಕಾಗುತ್ತದೆ ಎಂದ ಅವರು, ಇದೇ ವೇಳೆ ಚುನಾವಣೆಯಲ್ಲಿ ಪ್ರಾಮಾಣಿಕವಾಗಿ ದುಡಿದ ಸರ್ವರಿಗೂ ಧನ್ಯವಾದಗಳನ್ನು ತಿಳಿಸಿದರು.

ಈ ಲೋಕಸಭೆ ಚುನಾವಣೆಯಲ್ಲಿ ಬರಿ ಪ್ರಧಾನಿ ಮೋದಿ ಅಷ್ಟೇ ಬೇಡ. ಧರ್ಮದ ಆಧಾರಿತ ರಾಜಕೀಯ ಬೇಡ ಎಂದು ಎಲ್ಲರೂ ನಿರ್ಧರಿಸಿದ್ದರು. ಅಭಿವೃದ್ಧಿ ಕೆಲಸಗಳನ್ನು ಮಾಡುವವರನ್ನು ಬೆಂಬಲಿಸಬೇಕೆಂದು ಎಲ್ಲರ ಅಭಿಪ್ರಾಯವು ಆಗಿತ್ತು. ಈ ಕೂಗು ಪ್ರಿಯಂಕಾಗೆ ಟಿಕೆಟ್ ಸಿಕ್ಕ ಬಳಿಕ ಹೆಚ್ಚಾಯಿತು. ಈ ಚುನಾವಣೆಯಲ್ಲಿ ಬೇರೆ ಪಕ್ಷದವರು ನಮ್ಮನ್ನು ಬೆಂಬಲಿಸಿದ್ದು ವಿಶೇಷವಾಗಿದೆ ಎಂದರು.
ಇದೇ ವೇಳೆ ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಸಾರ್ವಜನಿಕರ, ಕಾರ್ಯಕರ್ತರ ಅಹವಾಲನ್ನು ಆಲಿಸಿ, ಸಮಸ್ಯೆಗಳಿಗೆ ಸ್ಪಂದಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಶಶಿಕಾಂತ ನಾಯಕ, ಹುಕ್ಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯ ರವದಿ, ಮಹಾಂತೇಶ ಮಗದುಮ್ ಸೇರಿದಂತೆ ನೂರಾರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿದ್ದರು.