ವಿಶ್ವ ದಾಖಲೆ ಬರೆದ ಪ್ರಜಾಪ್ರಭುತ್ವ ದಿನಾಚರಣೆ

ಬೆಂಗಳೂರು, ಸೆ. 15 (ಕರ್ನಾಟಕ ವಾರ್ತೆ): ದೇಶದ ಪ್ರಮುಖ ಹಬ್ಬವೆಂದೇ ಭಾವಿಸಲಾಗಿದ್ದು, ವಿಶ್ವ ಪ್ರಜಾಪ್ರಭುತ್ವ ದಿನಾಚರಣೆಯನ್ನು ಭಾನುವಾರ ರಾಜ್ಯಾದ್ಯಂತ ಅರ್ಥಪೂರ್ಣ ಹಾಗೂ ಬಹಳ ಯಶಸ್ವಿಯಾಗಿ ಆಚರಣೆಯಾಯಿತು.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ವಿಶೇಷ ವಿನ್ಯಾಸದ ಹಾಗೂ ವಿಭಿನ್ನ ಸಂದೇಶಗಳನ್ನು ಸಾರುವ ಉಡುಗೆ-ತೊಡುಗೆ, ವೇಷಭೂಷಣ ಹಾಗೂ ಕಲಾ ಪ್ರಾಕಾರಗಳ ಬಳಕೆ ಮಾಡಿ ಪ್ರಜಾಪ್ರಭುತ್ವದ ಮಹತ್ವ ಸಾರಿದರು.
ಜಿಲ್ಲಾಡಳಿತದ ನೇತೃತ್ವದಲ್ಲಿ ಎಲ್ಲಾ ಇಲಾಖೆಗಳ ನೌಕರರು ಹಾಗೂ ಸಾವಿರಾರು ಸೇವಾ ಸಂಸ್ಥೆಗಳು, ಸ್ವಯಂ ಸೇವಕರು ಹಾಗೂ ಎಲ್ಲಾ ಶಾಲಾ, ಕಾಲೇಜುಗಳ ಮಕ್ಕಳು ಕೈ ಹಿಡಿದು ಮಾನವ ಸರಪಳಿ ರಚಿಸಿ ಗಮನ ಸೆಳೆದರು. ಹಾಗೆಯೇ ಐಟಿ, ಬಿಟಿ ಖಾಸಗಿ ಸಂಸ್ಥೆಗಳು ಮತ್ತು ವಾಣಿಜ್ಯ ಮತ್ತು ವ್ಯಾಪಾರಿ ಸಂಸ್ಥೆಗಳ ಸಾವಿರಾರು, ಕಲಾವಿದರು, ವೈದ್ಯರೂ, ವಕೀಲರೂ ಸೇರಿದಂತೆ ವಿವಿಧ ಕ್ಷೇತ್ರಗಳ ವೃತ್ತಿಪರರ ಹಾಗೂ ಸಮಾಜದ ಎಲ್ಲಾ ವರ್ಗದ ಜನರು ಮಾನವ ಸರಪಳಿಯಲ್ಲಿ ಭಾಗವಹಿಸಿ ಪ್ರಜಾಪ್ರಭುತ್ವ ಮಹತ್ವದ ಜಾಗೃತಿ ಮೂಡಿಸಿದರು.

ಸಮಾಜ ಕಲ್ಯಾಣ ಇಲಾಖೆ ನೇತೃತ್ವದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಸೇರಿದಂತೆ 8 ಇಲಾಖೆಗಳು ಈ ಕಾರ್ಯಕ್ರಮದ ಉಸ್ತುವಾರಿ ಹೊತ್ತುಕೊಂಡು ನಡೆಸಿದ್ದು, ಉಳಿದ ಎಲ್ಲಾ 25ಕ್ಕೂ ಹೆಚ್ಚು ಇಲಾಖೆಗಳು ವಿವಿಧ ರೀತಿಯಲ್ಲಿ ತಮ್ಮದೇ ಸಹಭಾಗಿತ್ವ ಮೆರೆದು ದಿನಾಚರಣೆಯನ್ನು ಯಶಸ್ವಿಗೊಳಿಸಿವೆ.
ಹಾಗೆಯೇ ಸುಮಾರು 25 ಲಕ್ಷಕ್ಕೂ ಹೆಚ್ಚು ಮಂದಿ ಈ ಕಾರ್ಯಕ್ರಮಕ್ಕಾಗಿ ಹೆಸರು ನೋಂದಾಯಿಸಿಕೊಂಡಿದ್ದು, ಪರೋಕ್ಷವಾಗಿ ಕೋಟ್ಯಂತರ ಜನರು ಬೆಂಬಲ ಸೂಚಿಸಿದ್ದಾರೆ.

ಇದೇವೇಳೆ ಸಂಪುಟದ ಎಲ್ಲಾ ಸಚಿವರೂ ತಮ್ಮ ಉಸ್ತುವಾರಿ ಜಿಲ್ಲೆಗಳಲ್ಲಿ ಮಾನವ ಸರಪಳಿ ಕಾರ್ಯಕ್ರಮವನ್ನು ಹೆಚ್ಚು ಯಶಸ್ವಿಯಾಗಿ ನಡೆಸಿದ್ದಾರೆಲ್ಲದೆ, ಅಲ್ಲೇ ಸಂವಿಧಾನದ ಪೀಠಿಕೆಯನ್ನು ಓದಿ ಜಾಗೃತಿ ಮೂಡಿಸಿದ್ದಾರೆ. ಹಾಗೆಯೇ ಆ ಭಾಗದಲ್ಲಿ ಸಾವಿರಾರು ಗಿಡಗಳನ್ನು ನೆಡಿಸಿ ಪರಿಸರ ರಕ್ಷಣೆಯ ಸಂದೇಶವನ್ನೂ ಸಾರಿದ್ದಾರೆ.
ಹೀಗೆ ವಿಭಿನ್ನ ರೀತಿಯಲ್ಲಿ ಪ್ರಜಾಪ್ರಭುತ್ವ ದಿನ ಆಚರಿಸಿದ ಜಿಲ್ಲೆಗಳಿಗೆ ವಿಶೇಷ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಐದು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಪ್ರತಿ ವಿಭಾಗಗಳಲ್ಲೂ 3 ಜಿಲ್ಲೆಗಳಂತೆ 15 ಜಿಲ್ಲೆಗಳಿಗೆ ಮುಖ್ಯಮಂತ್ರಿ ಅವರಿಂದ ಪ್ರಶಸ್ತಿ ಕೊಡಿಸಲಾಗುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ವಿಶ್ವ ದಾಖಲೆಗೆ ಸೇರ್ಪಡೆ :

ಹೀಗೆ ಪ್ರಥಮ ಬಾರಿಗೆ ರಾಜ್ಯದ ಉತ್ತರ ತುದಿ ಬೀದರ್ ನಿಂದ ಚಾಮರಾಜನಗರ ಜಿಲ್ಲೆ ವರೆಗೂ ಸುಮಾರು 2500 ಕಿ.ಮೀ. ಉದ್ದದಲ್ಲಿ 25 ಲಕ್ಷಕ್ಕೂ ಹೆಚ್ಚಿನ ಮಂದಿ ಮಾನವ ಸರಪಳಿ ರಚಿಸಿರುವುದು ದೇಶವೇ ಹೆಮ್ಮೆ ಪಡುವಂತಾಗಿದೆ. ಕಾರಣ, ಇಂಥ ಯಶಸ್ವೀ ಪ್ರಯೋಗ ವಿಶ್ವದಲ್ಲೇ ಪ್ರಥಮ ಬಾರಿಗೆ ನಡೆದಿದ್ದು, ಇದಕ್ಕೆ ವಿಶ್ವ ದಾಖಲೆ ಆರಂಭಿಕ ಪುರಸ್ಕಾರ ಲಭಿಸಿದೆ. ಲಂಡನ್ ನಲ್ಲಿರುವ ವಿಶ್ವ ದಾಖಲೆ ಸಂಸ್ಥೆಯ ಕರ್ನಾಟಕ ಪ್ರತಿನಿಧಿ ಶೈಲಜಾ ಅವರು ಬೆಂಗಳೂರಿನಲ್ಲಿ ನಡೆದ ಬೃಹತ್ ಹಾಗೂ ವರ್ಣರಂಜಿತ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಅವರ ಹೆಸರಿನಲ್ಲಿ ನೀಡಿ ಗೌರವಿಸಿದರು.

Leave a Reply

Your email address will not be published. Required fields are marked *

error: Content is protected !!