Headlines

ಶೀಘ್ರ ಜವಳಿ ನೀತಿ ರೂಪಿಸಲು ಕ್ರಮ

  • ಬಂಡವಾಳ ಹೂಡಿಕೆ, ಉದ್ಯೋಗ ಸೃಷ್ಟಿಗೆ ನೂತನ ನೀತಿ

ಬೆಳಗಾವಿ:

ನೂತನ ಜವಳಿ ನೀತಿ ಸಿದ್ಧಪಡಿಸಲು ಖಾಸಗಿ ಕಂಪನಿಯನ್ನು ನೇಮಕ ಮಾಡಲಾಗಿದ್ದು, ಜವಳಿ ನೀತಿಯ ಕರಡು ಸಿದ್ದಪಡಿಸಲು ಪೂರ್ವಭಾವಿ ಕ್ರಮ ಕೈಗೊಳ್ಳಲಾಗಿದೆ ಎಂದು ಜವಳಿ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.
ಅಭಯ ಪಾಟೀಲ ಅವರ ಗಮನ ಸೆಳೆಯುವ ಸೂಚನೆ ವಿಷಯಕ್ಕೆ ಜವಳಿ ಸಚಿವರ ಪರವಾಗಿ ಉತ್ತರಿಸಿದ ಸಚಿವ ಪ್ರಿಯಾಂಕ ಖರ್ಗೆ ಅವರು, ರಾಜ್ಯದಲ್ಲಿ ಜವಳಿ ಉದ್ಯಮ ಹಾಗೂ ನೇಕಾರರಿಗೆ ಪ್ರೋತ್ಸಾಹ ನೀಡಲು, ಬಂಡವಾಳ ಹೂಡಿಕೆ ಹಾಗೂ ಉದ್ಯೋಗ ಸೃಷ್ಟಿಗೆ ೨೦೨೪-೨೯ರ ಅವಧಿಗೆ ನೂತನ ಜವಳಿ ನೀತಿ ಜಾರಿಗೆ ತರಲು ಉನ್ನತ ಮಟ್ಟದ ತಜ್ಞರ ಸಮಿತಿ ಆಗಸ್ಟ್‌ನಲ್ಲಿ ಸಭೆ ಸೇರಿ ನೀತಿ ತಯಾರಿಸಲು ಟರ್ಮ್ಸ್‌ ಆಫ್‌ ರೆಪರೆನ್ಸ್‌ ನಿಗದಿಪಡಿಸಿದೆ ಎಂದು ತಿಳಿಸಿದರು.


೨೦೨೪-೨೯ರ ಅವಧಿಗೆ ಹತ್ತು ಸಾವಿರ ಕೋಟಿ ರೂ.ಗಳ ಬಂಡವಾಳ ಹೂಡಿಕೆ ಹಾಗೂ ಎರಡು ಲಕ್ಷ ಉದ್ಯೋಗ ಸೃಷ್ಟಿಯ ಗುರಿಯೊಂದಿಗೆ ಹೊಸ ಜವಳಿ ನೀತಿ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದರು.
ಜವಳಿ ನೀತಿಯ ಅವಧಿಯಲ್ಲಿ ಸಿದ್ಧ ಉಡುಪಿ, ಜವಳಿ ಘಟಕಗಳಿಗೆ ಉತ್ತೇಜನ ನೀಡಲು ಸಾಲಾಧಾರಿತ ಬಂಡವಾಳ ಸಹಾಯಧನ, ಬಡ್ಡಿ ಸಹಾಯಧನ, ವಿದ್ಯುಚ್ಛಕ್ತಿ ಮರುಪಾವತಿ ಸಹಾಯಧನ, ವೇತನ ಸಹಾಯಧನ, ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಸಹಾಯಧನ, ಮುದ್ರಾಂಕ ಶುಲ್ಕ ವಿನಾಯಿತಿ ಮತ್ತು ನೋಂದಣಿ ಶುಲ್ಕ ವಿನಾಯಿತಿ ನೀಡಲಾಗುತ್ತಿದೆ ಎಂದು ವಿವರಿಸಿದರು.


ನಾಲ್ಕನೇ ಕೈಮಗ್ಗ ಜನಗಣತಿಯ ಪ್ರಕಾರ ರಾಜ್ಯದಲ್ಲಿ ೫೪,೭೯೧ ಕೈಮಗ್ಗ ನೇಕಾರರನ್ನು ಗುರುತಿಸಿ ನೇಕಾರರ ಸೇವಾ ಕೇಂದ್ರದ ಮೂಲಕ ೪೭,೮೮೩ ಕೈಮಗ್ಗ ನೇಕಾರರಿಗೆ ಪೆಹಚಾನ್‌ ಕಾರ್ಡ್‌ಗಳನ್ನು ಹಾಗೂ ೧,೧೭,೦೯೯ ವಿದ್ಯತ್‌ ಮಗ್ಗ ನೇಕಾರರು, ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್‌ಗಳನ್ನು ವಿತರಿಸಲಾಗಿದೆ ಎಂದು ವಿವರಿಸಿದರು.
ನೇಕಾರರು ಆರ್ಥಿಕ ಹೊರೆ ಮತ್ತು ಇತರೆ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಜವಳಿ ಇಲಾಖೆ ಹಲವು ಸೌಲಭ್ಯಗಳನ್ನು ಒದಗಿಸುತ್ತಿದೆ.
ಕೈಮಗ್ಗ ಮತ್ತು ವಿದ್ಯುತ್‌ ಮಗ್ಗ ನೇಕಾರರಿಗೆ ನೇಕಾರರ ಸಮ್ಮಾನ್‌ ಯೋಜನೆಯಲ್ಲಿ ವಾರ್ಷಿಕ ತಲಾ ಐದು ಸಾವಿರ ರೂ. ಆರ್ಥಿಕ ನೆರವು, ನೇಕಾರರ ಮಕ್ಕಳ ವ್ಯಾಸಂಗಕ್ಕೆ ವಿದ್ಯಾರ್ಥಿ ವೇತನ, ಕೈಮಗ್ಗ ಉಪಕರಣ ಖರೀದಿಗೆ ಘಟಕ ವೆಚ್ಚದಲ್ಲಿ ಪ್ರತಿಶತ ೫೦ರಷ್ಟು ಸಹಾಯಧನ ನೆರವು, ಕಚ್ಚಾ ನೂಲು ಖರೀದಿ ಮೇಲೆ ಪ್ರತಿ ಕೆಜಿಗೆ ೧೫ ರೂ. ಸಹಾಯಧನ ನೀಡಲಾಗುತ್ತಿದೆ ಎಂದು ತಿಳಿಸಿದರು.

ನೇಕಾರರು ನೇಕಾರಿಗೆ ಉದ್ದೇಶಕ್ಕೆ ಎನ್‌ಎಚ್‌ಡಿಸಿ ವತಿಯಿಂದ ಪ್ರತಿಶತ ೧೫ರಷ್ಟು ಸಹಾಯಧನದೊಂದಿಗೆ ರೇಷ್ಮೆ, ಹತ್ತಿ, ಉಣ್ಣೆ ಮತ್ತು ಲೆನಿನ್‌ ನೂಲನ್ನು ನೀಡಲಾಗುತ್ತಿದೆ.
ನೇಕಾರಿಕೆ ಉದ್ದೇಶಕ್ಕೆ ಸಹಕಾರಿ ಬ್ಯಾಂಕುಗಳಿಂದ ಪಡೆಯುವ ಸಾಲಕ್ಕೆ ಶೂನ್ಯ ಹಾಗೂ ಶೇ. ೧ರ ಬಡ್ಡಿ ದರದಲ್ಲಿ ೨ ಲಕ್ಷ ರೂ.ವರೆಗೆ, ಶೇ ೩ರ ಬಡ್ಡಿ ದರದಲ್ಲಿ ಐದು ಲಕ್ಷ ರೂವರೆಗೆ ಪಡೆಯುವ ಸಾಲಕ್ಕೆ ಬಡ್ಡಿ ಸಹಾಯಧನ ನೀಡಲಾಗುತ್ತದೆ ಎಂದು ತಿಳಿಸಿದರು.
ಕೈಮಗ್ಗ ನೇಕಾರರಿಗೆ ಮಾರುಕಟ್ಟೆ ಒದಗಿಸಲು ರಾಷ್ಟ್ರೀಯ ಕೈಮಗ್ಗ ಮೇಳ, ರಾಜ್ಯಮಟ್ಟದ ಕೈಮಗ್ಗ ಮೇಳ, ಜಿಲ್ಲಾ ಮಟ್ಟದ ಕೈಮಗ್ಗ ಮೇಳ ಆಯೋಜಿಸಲಾಗುತ್ತಿದೆ.

ಮಿನಿ ಪವರ್‌ಲೂಮ್‌ ಪಾರ್ಕ್‌ ಸ್ಥಾಪನೆಗೆ ಹಾಗೂ ಪ್ರೊಸೆಸಿಂಗ್‌ ಘಟಕ ಸ್ಥಾಪನೆಗೆ ಸಹಾಯ ಧನ ವಿತರಿಸಲಾಗುತ್ತಿದೆ.
ಹತ್ತು ಅಶ್ವಶಕ್ತಿವರೆಗಿನ ವಿದ್ಯುತ್‌ ಮಗ್ಗ ಹಾಗೂ ಮಗ್ಗಪೂರ್ವ ಘಟಕಗಳಿಗೆ ಉಚಿತವಾಗಿ ವಿದ್ಯುತ್‌ ಪೂರೈಕೆ ಮಾಡಲಾಗುತ್ತಿದೆ. ೧೦.೧ ಅಶ್ವಶಕ್ತಿಯಿಂದ ೨೦ ಅ‍ಶ್ವಶಕ್ತಿ ಸಾಮರ್ಥ್ಯದ ವಿದ್ಯುತ್‌ ಮಗ್ಗಗಳು ಬಳಸಿದ ಒಟ್ಟು ಯೂನಿಟ್‌ಗೆ ಪ್ರತಿ ಯೂನಿಟ್‌ಗೆ ೧.೨೫ ರೂ. ಮಾತ್ರ ಸಂಗ್ರಹ ಮಾಡಲಿದ್ದು, ಉಳಿದ ಹಣವನ್ನು ಸರ್ಕಾರ ಭರಿಸಲಿದೆ.
೧೫೦ ಅಶ್ವಶಕ್ತಿವರೆಗಿನ ವಿದ್ಯುತ್‌ ಸಂಪರ್ಕ ಹೊಂದಿರುವ ರೇಪಿಯರ್‌ ಮತ್ತು ಲಾಳಿರಹಿತ ವಿದ್ಯುತ್‌ ಮಗ್ಗ ಘಟಕಗಳಿಗೆ ಪ್ರತಿಶತ ೫೦ರಷ್ಟು ವಿದ್ಯುತ್‌ ಸಹಾಯಧನ ನೀಡಲಾಗುತ್ತಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!