ಬೆಳಗಾವಿ ಪಾಲಿಕೆಯಲ್ಲಿ ಬಗೆಹರಿಯದ ಪಿಕೆಗಳ ಗೋಳು.
ದಿನೇ ದಿನೇ ಕಗ್ಗಂಟಾಗುತ್ತಿರುವ 138 ಪಿಕೆಗಳ ನೇಮಕಾತಿ ವಿಷಯ
ಪಿಕೆಗಳ ನಿಯಮಬಾಹಿರ ನೇಮಕದಲ್ಲಿ ಮಂತ್ರಿ, ಶಾಸಕರ ಹೆಸರು ದುರ್ಬಳಕೆ ಮಾತು. ಎರಡು ತಿಂಗಳಾದರೂ ಸಿಗದ ಸಂಬಳ.
ಸರ್ಕಾರಕ್ಕೆ ಪತ್ರ ಬರೆದ ಆಯುಕ್ತರು.
ಪಿಕೆ ವಿಷಯದಲ್ಲಿ ನಗರಸೇವಕರನ್ನೇ ದಾರಿ ತಪ್ಪಿಸುತ್ತಿರುವವರು ಯಾರು?.
ಸಂಬಳ ಕೊಡಲಾಗದ ಇಕ್ಕಟ್ಟಿನ ಸ್ಥಿತಿಗೆ ಪಾಲಿಕೆ.
ಬೆಳಗಾವಿ.
ವಿಘ್ನನಿವಾರಕನನ್ನು ಹನ್ನೊಂದು ದಿನಗಳ ಕಾಲ ಭಕ್ತಿ ಪೂರ್ವಕವಾಗಿ ಪೂಜಿಸಿದರೂ ಕೂಡ ಬೆಳಗಾವಿ ಪಾಲಿಕೆಯಲ್ಲಿ 138 ಪೌರಕಾರ್ಮಿಕರಿಗೆ ಸಂಬಳ ಮಾತ್ರ ಸಿಕ್ಕಿಲ್ಲ.
ಇಲ್ಲಿ ಮೇಯರ್ ಸಮ್ಮತಿ ಪತ್ರ ಕೊಟ್ಟ ನಂತರ ಕೌನ್ಸಿಲ್ ಗೆ ಹೋಗಬೇಕಾದ ವಿಷಯ ಸ್ಥಾಯಿ ಸಮಿತಿಗೆ ಅಧಿಕಾರಿಗಳು ಯಾವ ಉದ್ದೇಶದಿಂದ ತಂದರು ಎನ್ನುವುದು ಸೇರಿದಂತೆ ಹತ್ತು ಹಲವು ಪ್ರಶ್ನೆಗಳು ಉಲ್ಭಣಿಸುತ್ತಿವೆ.

ಇದರ ಜೊತೆಗೆ ಪಾಲಿಕೆಯ ಕೌನ್ಸಿಲ್ ಸಭೆಯ ಅನುಮೋದನೆಗೂ ಮುನ್ನವೇ ಈ 138 ಜನ ಪಿಕೆಗಳನ್ನು ಯಾವ ಆಧಾರದ ಮೇಲೆ ಮತ್ತು ಹೇಗೆ ಕೆಲಸಕ್ಕೆ ತೆಗೆದುಕೊಂಡರು ಎನ್ನುವ ಬಹುದೊಡ್ಡ ಪ್ರಶ್ನೆ ಬಹುತೇಕರನ್ನು ಕಾಡುತ್ತಿದೆ. ಹೀಗಾಗಿ ಹಲವು ಸಂಶಯದ ಮಾತುಗಳು ಕೇಳಿ ಬರುತ್ತಿವೆ
ಆರಂಭದ ದಿನಗಳಲ್ಲಿ ಎಲ್ಲವೂ ಸೂಸುತ್ರವಾಗಿ ದಾಟಿ ಹೋಗುತ್ತದೆ ಎಂದು ಭಾವಿಸಿದ್ದ ಪಾಲಿಕೆಯ ಆರೋಗ್ಯ ಶಾಖೆಯ ಅಧಿಕಾರಿಗಳಿಗೆ ಈಗ ಇದು ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಸಧ್ಯ ಹೇಗಾಗಿದೆ ಅಂದರೆ, ಈ ಆರೋಗ್ಯ ಶಾಖೆಯ ಅಧಿಕಾರಿಗಳು ತಮ್ಮ ಒಂದು ತಪ್ಪನ್ನು ಮುಚ್ಚಿಹಾಕಲು ಹೋಗಿ ಮತ್ತೇ ಹತ್ತಾರು ತಪ್ಪುಗಳನ್ನು ನಿತ್ಯ ಮಾಡುತ್ತಿದ್ದಾರೆಂದು ಹೇಳಲಾಗುತ್ತಿದೆ.

ಇಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ 138 ಪಿಕೆಗಳಲ್ಲಿ ಸಚಿವ ಸತೀಶ ಜಾರಕಿಹೊಳಿ, ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಶಾಸಕ ರಾಜು ಶೇಠ ಮತ್ತು ಬಿಜೆಪಿ ಶಾಸಕ ಅಭಯ ಪಾಟೀಲರು ನೀಡಿದ ಸುಮಾರು 47 ಜನ ಪಿಕೆಗಳ ಹೆಸರಿವೆ ಎನ್ನುತ್ತ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಳ್ಳುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆಂದು ಗೊತ್ತಾಗಿದೆ.
ಯಾರದ್ದೋ ತಪ್ಪು, ಮತ್ಯಾರಿಗೋ ಶಿಕ್ಷೆ

ಆದರೆ ಸಚಿವರು, ಶಾಸಕರು ಮಾತ್ರ ತಾವು ಯಾವುದೇ ಕಾನೂನು ಬಾಹಿರವಾಗಿ ನೇಮಕದ ಬಗ್ಗೆ ಹೆಸರು ಹೇಳಿಲ್ಲ ಎನ್ನುವ ಸ್ಪಷ್ಟನೆ ನೀಡಿದ್ದಾರೆ.
ಗಮನಿಸಬೇಕಾದ ಸಂಗತಿ ಎಂದರೆ , ಈ ವಿವಾದ ಸೃಷ್ಟಿಯಾದ ದಿನದಿಂದ ಹಿಡಿದುಕೊಂಡು ಇಲ್ಲಿಯವರೆಗೂ ಪಾರದರ್ಶಕವಾಗಿ ಪೌರಕಾರ್ಮಿಕರನ್ನು ನೇಮಕ ಮಾಡಬೇಕು ಎನ್ನುವ ಮಾತನ್ನು ಅವರು ಹೇಳುತ್ತ ಬಂದಿದ್ದಾರೆ ಎನ್ನುವುದು ಉಲ್ಲೇಖನೀಯ
ಮೇಲಾಗಿ ಕಾನೂನು ಬಾಹಿರವಾಗಿ ತೆಗೆದುಕೊಂಡ138 ಪಿಕೆಗಳಿಗೆ ಸಂಬಳ ಕೊಡುವುದು ಅಸಾಧ್ಯ ಎನ್ನುವ ಮಾತನ್ನು ಪಾಲಿಕೆ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

ಇಲ್ಲಿ ಪಾಲಿಕೆ ಆಯುಕ್ತರು ಈ ಪಿಕೆ ನೇಮಕಾತಿ ಬಗ್ಗೆ ಸರಿಯಾದ ರೀತಿಯಲ್ಲಿ ತನಿಖೆ ನಡೆಸಿದ್ದೇ ಆದರೆ ಪಾಲಿಕೆ ಆರೋಗ್ಯ ವಿಭಾಗದ ಸಿಬ್ಬಂದಿಗಳಿಗೆ ಸಂಕಷ್ಟ ತಪ್ಪಿದ್ದಲ್ಲ.