ಕಾಂಗ್ರೆಸ್ ಸರ್ಕಾರದಲ್ಲೂ ಗುತ್ತಿಗೆದಾರರಿಗೆ ಮುಂದುವರೆದ ಕಿರಿಕಿರಿ.
ಸಂತೋಷ ಪಾಟೀಲ ಆತ್ಮಹತ್ಯೆ ಯತ್ನ ಪ್ರಕರಣದಲ್ಲಿ ಈಶ್ವರಪ್ಪ ಅಧಿಕಾರ ಕಳೆದುಕೊಂಡರು. ಈಗ ಅವರದ್ದೇ ದಾರಿಗೆ ಮತ್ತಿಬ್ಬರು ಗುತ್ತಿಗೆದಾರರು ಹೋಗ್ತಿರೊದು ಯಾಕೆ?
ಲೋಕೋಪಯೋಗಿ ಇಲಾಖೆ ಅಧಿಕಾರಿ ಸಮ್ಮುಖದಲ್ಲೇ ನಾಗಪ್ಪ ಭಂಗಿ ವಿಷ ಸೇವನೆ ಮಾಡಿದ್ದು ಯಾಕೆ? ಅದಕ್ಕೆ ಯಾರು ಹೊಣೆ?
PWD ಸಚಿವರ ತವರು ಜಿಲ್ಲೆಯ ಅವರದ್ದೇ ಇಲಾಖೆಯಲ್ಲಿ ನಡೆದ ಘಟನೆ.
ಬೆಳಗಾವಿ ಪಾಲಿಕೆ ಕಸ ವಿಲೇವಾರಿ ಗುತ್ತಿಗೆದಾರ ವೈ.ಬಿ. ಗೊಲ್ಲರ ನೀಡಿದ ಆತ್ಮಹತ್ಯೆ ಬೆದರಿಕೆ ಮತ್ತು ಕಿರುಕುಳ ಪತ್ರದ ವಿಚಾರಣೆ ಎಲ್ಲಿಗೆ ಬಂದಿತು?
ಪ್ರಕರಣ ಮುಚ್ಚಿಹಾಕಲು ಪಾಲಿಕೆ ಆರೋಗ್ಯ ಶಾಖೆಯ ಕಸರತ್ತು?. ರಾಜೀಗೆ ಒಪ್ಪದ ಗುತ್ತಿಗೆದಾರನಿಗೆ ನೋಟೀಸ್ ಕೊಟ್ಟು ಕಿರುಕುಳ.
138 ಪಿಕೆಗಳ ವಿಷಯದಲ್ಲಿ ಸಚಿವರು, ಶಾಸಕರ ಹೆಸರು ದುರ್ಬಳಕೆ ಮಾಡಿಕೊಂಡವರ ಮೇಲೆ ಕ್ರಮ ಏನು?ಪಾಲಿಕೆಯ ಎಲ್ಲ ಗುತ್ತಿಗೆದಾರರ ಪಿಕೆಗಳ ಪಟ್ಟಿ ತನಿಖೆಗೆ ಆಯುಕ್ತರು ರೆಡಿ ಆದರಾ? .
ಮೇಯರ್ ಪತ್ರದ ದುರುಪಯೋಗ ಮಾಡಿಕೊಂಡ ಅಧಿಕಾರಿ ವಿರುದ್ಧ ಕ್ರಮ ಏಕಿಲ್ಲ.
ಬೆಳಗಾವಿ.
ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣ ಇನ್ನೂ ಹಸಿಯಾಗಿರುವಾಗಲೇ ಬೆಳಗಾವಿ ಜಿಲ್ಲೆಯಲ್ಲಿ ಬಹುತೇಕ ಗುತ್ತಿಗೆದಾರರು ಕೆಲವರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಯತ್ನದ ದಾರಿ ಹಿಡಿದಿದ್ದು ಆಘಾತಕ್ಕೆ ಕಾರಣವಾಗಿದೆ.
ಅಧಿಕಾರಿಗಳು ಕೆಲಸ ಮಾಡಿದರೂ ಹಣ ಪಾವತಿ ಮಾಡದೇ ಇರುವುದು ಮತ್ತು ಕಾನೂನು ಬಾಹಿರ ನೇಮಕಗೊಂಡವರ ಸಂಬಳ ಪಾವತಿ ಮಾಡಿ ಎನ್ನುವ ಕಿರುಕುಳವನ್ನು ಗುತ್ತಿಗೆದಾರರಿಗೆ ನೀಡಲಾಗುತ್ತಿದೆ ಎನ್ನುವ ದೂರಿದೆ.

ಬೆಳಗಾವಿಯಲ್ಲಿಯೇ ನಡೆದ ಗುತ್ತಿಗೆದಾರರ ಈ ಎರಡು ಘಟನೆಗಳು ಕಾಂಗ್ರೆಸ್ ಸರ್ಕಾರಕ್ಕೆ ಕಪ್ಪು ಚುಕ್ಕೆ ಎನ್ನುವ ಮಾತು ಕೇಳಿ ಬರುತ್ತಿವೆ. ಮತ್ತೊಂದೆಡೆ ಬಿಜೆಪಿ ಹಿಡಿತದಲ್ಲಿರುವ ಮಹಾನಗರ ಪಾಲಿಕೆಗೆ ಕೆಟ್ಟ ಹೆಸರು ತರುವ ನಿಟ್ಟಿನಲ್ಲಿ ಕೆಲವರು ಅನಗತ್ಯವಾಗಿ ಗುತ್ತಿಗೆ ದಾರರಿಗೆ ತೊಂದರೆ ಕೊಡುತ್ತಿದ್ದಾರೆ ಎನ್ನುವ ಮಾತೂ ಕೇಳಿ ಬರುತ್ತಿದೆ.

ಜಿಲ್ಲಾ ಉಸ್ತುವಾರಿ ಸಚಿವರ ತವರು ಜಿಲ್ಲೆಯ ಬೆಳಗಾವಿ ಲೋಕೋಪಯೋಗಿ ಇಲಾಖೆಯ ಅಧಿಕಾರಿ ಸೊಬರದ ಅವರ ಕಚೇರಿ ಸಮ್ಮುಖದಲ್ಲಿಯೇ ಗುತ್ತಿಗೆದಾರ ನಾಗಪ್ಪ ಭಂಗಿ ಎಂಬುವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಸಿದ ಘಟನೆ ಇಂದು ನಡೆದಿದೆ.
ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ರಸ್ತೆ ನಿರ್ವಹಣೆ ಬಿಲ್ ಮಂಜೂರು ಮಾಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದು ಇದಕ್ಕೆ ಕಾರಣ ಎನ್ನಲಾಗುತ್ತಿದೆ.

ಮತ್ತೊಂದು ಕಡೆಗೆ ಮಹಾನಗರ ಪಾಲಿಕೆಯ ಕಸವಿಲೇವಾರಿ ಗುತ್ತಿಗೆದಾರ ವೈ.ಬಿ. ಗೊಲ್ಲರ ಎಂಬುವರಿಗೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರು ಮತ್ತು ಅಧಿಕಾರಿ ಹನುಮಂತ ಕಲಾದಗಿ ಅವರು ಮಾನಸಿಕ ಕಿರುಕುಳ ಕೊಡುತ್ತಿದ್ದಾರೆ. ಇದರಿಂದ ನನ್ನ ಜೀವಕ್ಕೆ ಏನಾದರೂ ಆದರೆ ಅವರಿಬ್ಬರೇ ಹೊಣೆ ಎನ್ನುವ ಪತ್ರವನ್ನು ಪಾಲಿಕೆ ಆಯುಕ್ತರಿಗೆ, ಜಿಲ್ಲಾಧಿಕಾರಿಗಳು ಮತ್ತು ಪ್ರಾದೇಶಿಕ ಆಯುಕ್ತರಿಗೂ ಕೊಟ್ಟಿದ್ದರು. ಅಷ್ಟೇ ಅಲ್ಲ ನಗರಾಭಿವೃದ್ಧಿ ಇಲಾಖೆಗೂ ಕಳಿಸಿದ್ದರು.

ಅದರಲ್ಲಿ ಪಾಲಿಕೆ ಆಯುಕ್ತರ ಆದೇಶವಿಲ್ಲದೇ ತೆಗೆದುಕೊಂಡ 138 ಪಿಕೆಗಳ ಸಂಬಳವನ್ನು ಕೊಡಬೇಕು ಎಂದು ಇವರು ಒತ್ತಡ ಹೇರಿ ಕಿರುಕುಳ ನೀಡುತ್ತಿದ್ದಾರೆಂದು ದೂರಿದ್ದರು.

ಪಾಲಿಕೆ ಗುತ್ತಿಗೆದಾರ ಗೊಲ್ಲರ ನೀಡಿದ ಪತ್ರ.
ಆದರೆ ಈ ಗುತ್ತಿಗೆದಾರರ ಆತ್ಮಹತ್ಯೆ ಬೆದರಿಕೆ ಪತ್ರವನ್ನು ಜಿಲ್ಲಾಧಿಕಾರಿಗಳೂ ಸೇರಿದಂತೆ ಇತರರು ಎಷ್ಟರ ಮಟ್ಟಿಗೆ ಗಂಭೀರವಾಗಿ ಪರಿಗಣಿಸಿದ್ದಾರೆ ಎನ್ನುವುದು ಸ್ಪಷ್ಟವಾಗಿಲ್ಲ.

ಅದರಲ್ಲಿ ಉಲ್ಲೇಖ ಮಾಡಿದ ಅಧಿಕಾರಿಗೆ ಕಾರಣ ಕೇಳಿ ನೋಟೀಸ್ ಕೊಟ್ಟಿದ್ದಾರೋ ಅಥವಾ ಪ್ರಕರಣಕ್ಕೆ ಇತಿಶ್ರೀ ಹಾಡಿದರೋ ಎನ್ನುವುದು ಸ್ಪಷ್ಟವಾಗಿಲ್ಲ.
ಗಮನಿಸಬೇಕಾದ ಸಂಗತಿ ಎಂದರೆ, ಈ 138 ಪೌರ ಕಾರ್ಮಿಕರ ಕಾನೂನು ಬಾಹಿರ ನೇಮಕದ ಬಗ್ಗೆ ಪರಿಷತ್ ಸಭೆಯಲ್ಲಿ ಚರ್ಚೆ ನಡೆಸಿ ಹೊಸದಾಗಿ ನೇಮಕ ಮಾಡುವ ನಿರ್ಧಾರಕ್ಕೆ ಬರಲಾಗಿದೆ. ಶಾಸಕ ಅಭಯ ಪಾಟೀಲ ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿ ಹೊಸದಾಗಿ ನಿಯಮಾನುಸಾರ ಹೊಸಬರನ್ನೇ ತೆಗೆದುಕೊ ಳ್ಳಲು ಸೂಚನೆ ನೀಡಿದ್ದಾರೆಂದು ಗೊತ್ತಾಗಿದೆ.
ಅದೇನೇ ಇರಲಿ. ಗುತ್ತಿಗೆದಾರರಿಗೆ ನ್ಯಾಯ ಕೊಡಿಸೋರು ಯಾರು?