2 ನಿಮಿಷ 48 ಸೆಕೆಂಡಿನ ಆಡಿಯೋ ಬಿಚ್ಚಿಡುತ್ತದೆ ಮೀಟರ ಬಡ್ಡಿಯ ಕರಾಳ ಮುಖ.
ಠಾಣೆಗೆ ಹೋದರೂ ದಾಖಲಾಗುತ್ತಿಲ್ಲವಂತೆ ದೂರು. ಹೀಗಾಗಿ ಮೀಟರ್ ಬಡ್ಡಿ ದಂಧೆಕೋರರು ನಿರಾಳ.
ಅಥಣಿಯಲ್ಲಿ ಮಿತಿಮೀರಿದ ಮೀಟರ್ ಬಡ್ಡಿ ದಂಧೆ.
ಬೆಳಗಾವಿ.
ಆ 2 ನಿಮಿಷ 48 ಸೆಕೆಂಡುಗಳ ಕಾಲ ಆಡಿಯೋ ಸಂಭಾಷಣೆಯನ್ನು ಕೇಳಿದರೆ ಬೆಳಗಾವಿ ಜಿಲ್ಲೆಯಲ್ಲಿ ನಡೆಯುತ್ತಿರುವ ಮೀಟರ್ ಬಡ್ಡಿ ದಂಧೆ ಯಾವ ಪ್ರಮಾಣದಲ್ಲಿ ಇದೆ ಎನ್ನುವುದು ಗೊತ್ತಾಗುತ್ತದೆ.
ಈ ಮೀಟರ್ ಬಡ್ಡಿ ದಂಧೆಗೆ ನಲುಗಿದ ಅನೇಕ ಕುಟುಂಬಗಳು ಸರ್ವನಾಶವಾಗಿವೆ. ಕೆಲವೊಂದು ಸಂದರ್ಭಗಳಲ್ಲಿ ನ್ಯಾಯ ಕೋರಿ ಪೊಲೀಸ್ ಠಾಣೆ ಮೆಟ್ಟಿಲು ಹತ್ಯಿದರೂ ಯಾವುದೇ ದೂರು ದಾಖಲಾಗುತ್ಯಿಲ್ಲ.

ಅಥಣಿಯ ವ್ಯಾಪಾರಿ ಈಶ್ವರ ದ್ಯಾಮಗೌಡ ಮಣ್ಣೂರ ಎಂಬುವರು ಮೀಟರ್ ಬಡ್ಡಿ ಹಿನ್ನೆಲೆಯಲ್ಲಿ ತೊಂದರೆ ಕೊಡುತ್ತಿರುವ ಮಿತೇಶ್ ಎಂಬುವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬೆಳಗಾವಿ ಎಸ್ಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮನವಿ ಪತ್ರವನ್ನು ಕಳಿಸಿದ್ದಾರೆ.
ಕಳೆದ ಮೇ 25 ರಂದು ಅಥಣಿಯ ಮಿತೇಶ್ ಹತ್ತಿರ ವ್ಯಾಪಾರಕ್ಕೆಂದು 2 ಲಕ್ಷ ರೂ ಸಾಲ ಪಡೆದುಕೊಂಡಿದ್ದೆ. ಆ ಸಂದರ್ಭದಲ್ಲಿ ಸಾಲವನ್ನು ಮರಳಿಸುವಾಗ ಏನಾದರೂ ಸೇರಿಸಿಕೊಡಬೇಕು ಎಂದು ಅವರು ಹೇಳಿದ್ದರು.
ಆದರೆ ಜೂನ್ 24 ರಂದು ಹಣವನ್ನು ವಾಪಸ್ಸು ಕೊಡುವ ಸಂದರ್ಭದಲ್ಲಿ ಅದಕ್ಕೆ ಹೆಚ್ಚಿಗೆ 5 ಸಾವಿರ ಕೊಡಲು ಮುಂದಾಗಿದ್ದೆ
ಆಗ ಮಿತೇಷ್ ಅವರು, ‘ನನಗೆ ವಾರಕ್ಕೆ ಶೇ 10 ದಂತೆ ಸೇರಿಸಿ ಹಣ ಕೊಡು . ಇಲ್ಲ ಅಂದ್ರೆ ನಿನ್ನ ಕಾರ್ ಇಲ್ಲಿಯೇ ಬಿಡಬೇಕಾಗುತ್ತೆ’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅವರೊಂದಿಗೆ ಕೆಲ ಮದ್ಯವ್ಯಸನಿಗಳು ಇದ್ದುದರಿಂದ ನನಗೆ ಜೀವ ಭಯ ಕೂಡ ಬಂದಿತು . ಹೀಗಾಗಿ ಅದರ ಜೊತೆಗೆ ಇನ್ನೊಂದು ಸಾವಿರ ಸೇರಿಸಿ ಕೊಡುವೆ ಎಂದು ಹೇಳುತ್ತಿದ್ದಂತೆಯೇ ಅವರು ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಕೆನ್ನೆಗೆ ಕೈಯಿಂದ ಹೊಡೆದರು .ಈ ಸಂದರ್ಭದಲ್ಲಿ ಮಿತೇಷ ಜೊತೆಗಿರುವ ಕೆಲವರು ನನ್ನ ಬೆಲೆಬಾಳುವ ಕಾರ್ ಕೀಯನ್ನು ಕಸಿದುಕೊಂಡರು. ಅಷ್ಟೆ ಅಲ್ಲ ಒತ್ತಾಯಪೂರ್ವಕವಾಗಿ ಹಾಗೂ ಹೆದರಿಸಿ ಟಿಓ ಫಾರ್ಮ್ ಮೇಲೆ ಸಹಿ ಕೂಡ ತೆಗೆದುಕೊಂಡು, ‘ 10 ಲಕ್ಷ ಕೊಟ್ಟು ಕಾರ್ ಬಿಡಿಸಿಕೊಂಡು ಹೋಗು ಎಂದು ಬೆದರಿಸಿದರು. ಇಲ್ಲ ನಿನ್ನ ಗತಿ ಕಾಣಿಸ್ತಿನಿ’ ಎಂದು ಹೇಳಿ ಹೆದರಿಕೆ ಹಾಕಿದರು ಎಂದು ಪೊಲೀಸ್ ಅಧಿಕಾರಿಗಳಿಗೆ ಸಲ್ಲಿಸಿದ ದೂರಿನಲ್ಲಿ ವಿವರಿಸಿದ್ದಾರೆ.
ಅಲ್ಲಿಂದ ಅಥಣಿ ಪೊಲೀಸ ಠಾಣೆಗೆ ಹೋಗಿ ಫಿರ್ಯಾದಿ ನೀಡಲು ಹೋದರೂ ಅಲ್ಲಿನ ಪೊಲೀಸರು ಸ್ವೀಕರಿಸಲಿಲ್ಲ ಎಂದು ಎಸ್ಪಿಗೆ ಸಲ್ಲಿಸಿದ ಲಿಖಿತ ದೂರಿನಲ್ಲಿ ವಿವರಿಸಿದ್ದಾರೆ.

ಅಷ್ಟೆ ಅಲ್ಲ ಹಿರಿಯ ಅಧಿಕಾರಿಗಳಿಗೆ ಆಡಿಯೋ ಸಂಭಾಷಣೆಯನ್ನೂ ಕೂಡ ರವಾನಿಸಿದ್ದಾರೆ. ಅದರಲ್ಲಿ ಕೆಟ್ಟ ಶಬ್ದಗಳಿಂದ ನಿಂದಿಸಿದ್ದು ಕಂಡು ಬರುತ್ತದೆ.