ಬೆಳಗಾವಿ: ನಾಳೆ ಏನೂ ಆಗುವುದಿಲ್ಲ. ಸಿಎಂ ಅವರ ಭವಿಷ್ಯ ನಿರ್ಧಾರದ ಪ್ರಶ್ನೆಯಿಲ್ಲ. ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ರೇಸ್ ನಲ್ಲಿ ಯಾರೂ ಇಲ್ಲವೇ ಇಲ್ಲ. ಸಿದ್ದರಾಮಯ್ಯ ಅವರೇ ಸಿಎಂ ಇರುತ್ತಾರೆ ಎಂದರು.

ರಾಜ್ಯದಲ್ಲಿ ಸ್ಥಿರ ಸರ್ಕಾರ ಇರುವುದನ್ನು ಬಿಜೆಪಿಯವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಅವರಿಗೆ ಸರ್ಕಾರವನ್ನು ಅಸ್ಥಿರಗೊಳಿಸುವುದು, ಸರ್ಕಾರವನ್ನು ಬೀಳಿಸುವುದೇ ಕೇಂದ್ರ ಸರಕಾರದ ಕೆಲಸ ಆಗಿದೆ. ಕರ್ನಾಟಕದ ಅಭಿವೃದ್ಧಿ ಬಿಜೆಪಿಯವರಿಗೆ ಬೇಕಾಗಿಲ್ಲ ಎಂದು ಹೇಳಿದರು.
ಬಿಜೆಪಿ ಸೋಷಿಯಲ್ ಮೀಡಿಯಾದಲ್ಲಿ ಏನೇನೂ ಅರ್ಥವಿಲ್ಲದ ಪೋಸ್ಟ್ ಗಳನ್ನು ಹಾಕ್ತಿರುತ್ತಾರೆ. ಸುಳ್ಳು ಹೇಳುವುದರಲ್ಲಿ ದೇಶದಲ್ಲಿ ಬಿಜೆಪಿಯನರು ನಂಬರ್ ಒನ್ ಎಂದು ಟೀಕಿಸಿದರು.
ನ್ಯಾಯಾಲಯದಲ್ಲಿ ವ್ಯತಿರಿಕ್ತವಾದ ತೀರ್ಮಾನ ಬರುವುದಿಲ್ಲ. ಕೋರ್ಟ್ ನಲ್ಲಿ ರಾಜಪಾಲರು ತನಿಖೆ ಗೆ ಕೊಟ್ಟಿರುವುದು ಸರಿಯೋ ಇಲ್ಲವೋ ಅಷ್ಟೇ ಇರೋದು. ಸಿಎಂ ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ, ಯಾವುದೇ ಅಧಿಕಾರದ ದುರುಪಯೋಗವೂ ಆಗಿಲ್ಲ. ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದಾರೆ ಎಂದು ದಿನೇಶ್ ಗುಂಡೂರಾವ್ ಆರೋಪಿಸಿದರು.

ಕುಮಾರಸ್ವಾಮಿ, ಜೊಲ್ಲೆ, ನಿರಾಣಿ ಮೇಲೆ ಇರುವ ಭ್ರಷ್ಟಚಾರದ ಕುರಿತ ಅರ್ಜಿಗಳು ರಾಜ್ಯಪಾಲರ ಕಚೇರಿಯಲ್ಲಿ ಹಾಗೇ ಬಿದ್ದಿವೆ. ಆದರೆ ರಾಜ್ಯಪಾಲರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈಗ ಸಿಎಂ ವಿರುದ್ಧ ಖಾಸಗಿ ದೂರು ಬಂದ ತಕ್ಷಣವೇ ನೋಟಿಸ್ ಕೊಟ್ಟಿದ್ದಾರೆ. ಇದರಲ್ಲಿ ರಾಜ್ಯಪಾಲರ ಮನಸ್ಥಿತಿ ಎಂಥದ್ದು ಎಂಬುದು ಗೊತ್ತಾಗುತ್ತದೆ ಎಂದು ಹೇಳಿದರು.