ಪಂಚಮಸಾಲಿ ಸಮಾಜಕ್ಕೆ ನಡೆಯದ ಸಿ.ಎಂ: 18ರಂದು ಬೆಂಗಳೂರಿನಲ್ಲಿ ಪ್ರತಿಭಟನೆ: ಬಸವ ಜಯಮೃತ್ಯುಂಜಯ ಶ್ರೀ
ಬೆಳಗಾವಿ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಒತ್ತಾಯಿಸಿ ಅ.18ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳು ತಿಳಿಸಿದರು.
ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ 7ನೇ ಹಂತದ ಹೋರಾಟವಾಗಿ ಬೆಳಗಾವಿಯಲ್ಲಿ ಹಮ್ಮಿಕೊಂಡಿದ್ದ ವಕೀಲರ ಸಮಾವೇಶದ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅ.15ರಂದು ಸಭೆ ನಡೆಸುವುದಾಗಿ ಭರವಸೆ ಕೊಟ್ಟಿದ್ದರು. ಆದರೆ, ಕೊಟ್ಟ ಮಾತಿನಂತೆ ನಡೆದುಕೊಳ್ಳದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಡೆಯನ್ನು ಖಂಡಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಚೇರಿಯಿಂದ ಇಲ್ಲಿಯವರೆಗೂ ಸಭೆ ನಡೆಸುವ ಕುರಿತು ಯಾವುದೇ ಮಾಹಿತಿ ಬಂದಿಲ್ಲ. ಮುಖ್ಯಮಂತ್ರಿಗಳು ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ಅಂದು ಬೆಂಗಳೂರಿನಲ್ಲಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸುತ್ತೇವೆ. ಮುಖ್ಯಮಂತ್ರಿಗಳು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಅದರ ಮೇಲೆ ಮುಂದಿನ ಹೋರಾಟದ ರೂಪುರೇಷಗಳ ಬಗ್ಗೆ ತೀರ್ಮಾನಿಸಲಾಗುತ್ತದೆ ಎಂದು ಶ್ರೀಗಳು ಹೇಳಿದರು.
ಸವದತ್ತಿಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಮ್ಮ ಮನವಿ ಕುರಿತು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ್ ಅವರು ಗಮನಕ್ಕೆ ತಂದಿದ್ದಾರೆ. ಆದರೀಗ ದೆಹಲಿ ಪ್ರವಾಸದ ಹಿನ್ನೆಲೆಯಲ್ಲಿ ಇಲ್ಲಿಯವರೆಗೂ ಬೇರೆ ದಿನಾಂಕ, ಸ್ಥಳ ಮತ್ತು ಸಮಯವನ್ನು ನಿಗದಿಪಡಿಸದೇ ಇರುವುದು, ಪಂಚಮಸಾಲಿ ವಕೀಲರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ನಡೆದಿದೆ ಎಂಬ ಅನುಮಾನ ಮೂಡತೊಡಗಿದೆ ಎಂದರು.
ಪಂಚಮಸಾಲಿ ಸಮಾಜದ ವಕೀಲರು, ಹೋರಾಟಗಾರರು ಅ.18 ರಂದು ಬೆಂಗಳೂರಿಗೆ ಹೋಗಿ ವಿಧಾನಸೌಧದ ಮುಂಭಾಗದಲ್ಲಿ ಕುಳಿತು ಪ್ರತಿಭಟನಾರ್ಥವಾಗಿ ಮುಖ್ಯಮಂತ್ರಿಗಳ ಗಮನ ಸೆಳೆಯುತ್ತೇವೆ. ಆ ದಿನವೂ ಕೂಡ ಸ್ಪಂದನೆ ದೊರೆಯದಿದ್ದರೇ, ಮುಂದಿನ ಅಲ್ಲಿಯೇ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಬಸವಜಯ ಮೃತ್ಯುಂಜಯ ಶ್ರೀಗಳು ಎಚ್ಚರಿಸಿದರು.
ವಕೀಲರಾದ ಆರ್ ಕೆ ಪಾಟೀಲ, ಗುಂಡು ಪಾಟೀಲ, ನಿಂಗಪ್ಪ ಫಿರೋಜಿ, R C ಪಾಟೀಲ, R P ಪಾಟೀಲ, ರಾಜು ಮಗದುಮ್, ಮೆಣಸಿ, ಪ್ರಕಾಶ ಭಾವಿಕಟ್ಟಿ, ರಾವುಸಾಹೇಬ್ ಪಾಟೀಲ, ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು..
.