ಬೆಳಗಾವಿ. ಕರಾಳ ದಿನಕ್ಕೆ ಅನುಮತಿ ಕೊಡಿ ಎಂದು ಬಂದಿದ್ದ ನಾಡದ್ರೋಹಿ Mes ನಾಯಕರಿಗೆ ಜಿಲ್ಲಾಧಿಕಾರಿಗಳು ಬುದ್ಧಿಮಾತು ಹೇಳಿ ವಾಪಸ್ಸು ಕಳಿಸಿದ ಘಟನೆ ಇಂದು ನಡೆಯಿತು.
ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಅವರು, ಇಲ್ಲಿಯವರೆಗೂ ನಡೆದಿದ್ದು ಬೇರೆ. ಆದರೆ, ಈ ಬಾರಿ ಮಾದರಿ ಕಾರ್ಯ ನಡೆಯಲಿದೆ. ಯಾವುದೇ ಕಾರಣಕ್ಕೂ ಕರಾಳ ದಿನಕ್ಕೆ ಅನುಮತಿಯಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಕಾನೂನಿನ ಚೌಕಟ್ಟಿನಲ್ಲಿ ಪ್ರತಿಭಟಿಸುವ ಹಕ್ಕಿದೆ. ಆದರೆ, ನ.1ರಂದು ಬಿಟ್ಟು ಪರ್ಯಾಯ ದಿನ ಕಾನೂನಿನ ಚೌಕಟ್ಟಿನಲ್ಲಿ ಪ್ರತಿಭಟನೆ ಮಾಡಲು ಅವಕಾಶ ಕೊಡುತ್ತೇನೆ. ಆದರೆ, ಯಾವುದೇ ರೀತಿಯ ಕರ್ನಾಟಕದ ಐಕ್ಯತೆ ಧಕ್ಕೆ ತರುವ ಹೋರಾಟ, ಪ್ರತಿಭಟನೆಗೆ ಅವಕಾಶ ಕೊಡುವುದಿಲ್ಲ ಎಂದು ಖಡಕ್ಕಾಗಿ ಹೇಳಿದರು.

ಗಣೇಶೋತ್ಸವ, ಈದ್ ಮಿಲಾದ್ ಸಾಮರಸ್ಯದಿಂದ ಆಚರಣೆ ಮಾಡಿದ್ದೇವೆ. ಅದರಂತೆ ನೀವೂ ರಾಜ್ಯೋತ್ಸವ ದಿನ ಬಿಟ್ಟು ಬೇರೆ ದಿನ ಹೋರಾಟ ಮಾಡಿ ಎಂದು ತಾಕೀತು ಮಾಡಿದರು. ಆದರೆ, ಕನ್ನಡ ರಾಜ್ಯೋತ್ಸವದ ಪೂರ್ವದಿಂದಲೂ ನಮ್ಮ ಹೋರಾಟ ನಡೆಯುತ್ತಿದೆ. ಹೀಗಾಗಿ, ನ.1ರಂದೇ ಕರಾಳ ದಿನಕ್ಕೆ ಅನುಮತಿ ಕೊಡುವಂತೆ ಎಂಇಎಸ ಮುಖಂಡರ ಪಟ್ಟು ಹಿಡಿದರು.
ಆದರೆ, ಯಾವುದಕ್ಕೂ ಜಗ್ಗದ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ , ಭಾಷಾ ಸಾಮಾರಸ್ಯ ಕಾಪಾಡುವುದು ಮುಖ್ಯವಾಗಿದೆ. ಜಿಲ್ಲಾಧಿಕಾರಿಯಾಗಿ ಕಾನೂನು ಸುವ್ಯವಸ್ಥೆ ಕಾಪಾಡುವುದು ನನ್ನ ಜವಾಬ್ದಾರಿ. ನಾನು ತೆಗೆದುಕೊಳ್ಳುವ ನಿರ್ಧಾರಕ್ಕೆ ನೀವು ಬದ್ಧರಾಗಬೇಕೆಂದು ಎಚ್ಚರಿಕೆ ನೀಡಿದರು.