ಬೆಳಗಾವಿ ಸರಕಾರದ ನಿಯಮಗಳನ್ನು ಗಾಳಿಗೆ ತೂರಿ 762 ಎಕರೆ ಸರಕಾರಿ ಪ್ರಭಾವಿಗಳು ಮತ್ತು ಭೂ-ಗಳ್ಳರು ಜಮೀನು ನುಂಗಿ ಹಾಕಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದ್ದು, ಜಿಲ್ಲಾಡಳಿತ ಕಣ್ಣು ಮುಚ್ಚಿ ಕುಳಿತಿದೆ. ಇದು ರಾಜ್ಯದಲ್ಲಿಯೇ ದೊಡ್ಡ ಭೂಹಗರಣವಾಗಿದ್ದು, ಇದರಲ್ಲಿ ಪ್ರಭಾವಿಗಳು ಭಾಗಿಯಾಗಿರುವ ಅನುಮಾನ ಇದೆ ಎಂದು ಮೂಡಲಗಿಯ ಮಾಹಿತಿ ಹಕ್ಕು ಕರಕರ್ತ ಭೀಮಪ್ಪ ಗಡಾದ ಇಂದಿಲ್ಲಿ ಹೇಳಿದರು.
ಬುಧವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಧಿಕೃತವಾಗಿ ನಿವೇಶನಗಳನ್ನು ಪಡೆಯಲಾದ ಮುಡಾದಲ್ಲಿ ಆರೋಪ ಎದುರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಮುಡಾ ಹಗರಣ, ವಕ್ಷ ಹಗರಣಗಳು ಇಡೀ ದೇಶಾದ್ಯಂತ ಸುದ್ದಿಯಾಗಿ ರಾಜ್ಯ ರಾಜಕೀಯದಲ್ಲಿ ಭಯಂಕರ ಬಿರುಗಾಳಿಯನ್ನೇ ಎಬ್ಬಿಸಿರುತ್ತವೆ. ಆರೋಪ ಹೊತ್ತಿರುವ ಮುಖ್ಯಮಂತ್ರಿಗಳು ಯಾವುದೇ ಕ್ಷಣದಲ್ಲಿ ರಾಜೀನಾಮೆ ನೀಡಬಹುದು ಎಂದು ವಿರೋಧ ಪಕ್ಷಗಳು ಜಾತಕ ಪಕ್ಷಿಗಳಂತೆ ಕಾದು ಕುಳಿತಿರುವ ಸಮಯದಲ್ಲಿಯೇ ಬೆಳಗಾವಿ ಜಿಲ್ಲೆಯ ಸಚಿವರುಗಳು ಹಾಗೂ ಪ್ರಭಾವಿ ರಾಜಕಾರಣಿಗಳ ಬೆಂಬಲದಿಂದ ಬೆಳಗಾವಿ ಜಿಲ್ಲೆಯಲ್ಲಿ 762 ಎಕರೆ 20 ಗುಂಟೆ ಸರಕಾರಿ ಜಮೀನವನ್ನು ಅಧಿಕಾರಿಗಳು ಹಾಗೂ ಭೂ-ಗಳ್ಳರು ತಿಂದು ಹಾಕಿರುವ ಸಂಗತಿಯು ಮಾಹಿತಿ ಹಕ್ಕಿನಿಂದ ಬೆಳಕಿಗೆ ಬಂದಿದೆ. ಇದು ರಾಜ್ಯದಲ್ಲಿಯೇ ನಡೆದಿರುವ ಅತ್ಯಂತ ದೊಡ್ಡ ಭೂ ಕಬಳಿಕೆ ಹಗರಣ ಎನ್ನಲಾಗಿದೆ.

ಜಿಲ್ಲೆಯ ರಾಯಬಾಗ ತಾಲೂಕಿನ ದೇವನಕಟ್ಟಿ ಗ್ರಾಮದ ರಿ.ಸ.ನಂ 59 152 260 20 rbolaria D.. 79 101 20 ಗುಂಟೆ ಇವುಗಳ ಒಟ್ಟು ಕ್ಷೇತ್ರ 254 ಎಕರೆ ಇದ್ದು ಸರಕಾರಕ್ಕೆ ಸೇರಿದ “ಗುಡ್ಡದ ಪಡ” ಎಂದು ಪರಿಗಣಿಸಿರುವ ಈ ಜಮೀನಕ್ಕೆ ಅಧಿಕಾರಿಗಳು ಕರ್ನಾಟಕ ಸರಕಾರ ಎಂದು ಪಹಣಿ ಪತ್ರಿಕೆಯಲ್ಲಿ ದಾಖಲಿಸದೇ ಇರುವುದರಿಂದ ಅಧಿಕಾರಿಗಳು ಹಾಗೂ ರಾಜಕೀಯ ಪ್ರಭಾವ ಹೊಂದಿರುವ ಖಾಸಗಿ ವ್ಯಕ್ತಿಗಳು ಸೇರಿಕೊಂಡು 254 ಎಕರೆ ಸರಕಾರಿ ಜಮೀನಕ್ಕೆ ತಮ್ಮ ಹೆಸರುಗಳನ್ನು ದಾಖಲಿಸಿಕೊಳ್ಳುವ ಮೂಲಕ ಸರಕಾರಕ್ಕೆ ಮೋಸ ಮಾಡಿರುತ್ತಾರೆಂದು ತಿಳಿಸಿದರು.
ಅದೇ ರೀತಿ ಜಿಲ್ಲೆಯ ಖಾನಾಪೂರ ತಾಲೂಕಿನ ಜಾಂಬೋಟಿಯ ಹುಳಂದ ಗ್ರಾಮಕ್ಕೆ ಸೇರಿದ ರಿ.ಸ.ನಂ 03 ಕ್ಷೇತ್ರ 508 ಎಕರೆ 20 ಗುಂಟೆ ಇದರ ಕಾಲಂ ನಂ:11 ಹಾಗೂ 2ರಲ್ಲಿ “ಊರಿನ ಎಲ್ಲ ಜನರು” ಎಂದು ದಾಖಲಿರುತ್ತದೆ. ಈ ಜಮೀನವು ಹುಳಂದ ಗ್ರಾಮದ ಪ್ರತಿಯೊಬ್ಬರಿಗೂ ಸೇರಿದ ಗ್ರಾಮದ ಆಸ್ತಿಯಾಗಿದೆ ಎಂದು ಹಿರಿಯರು ಹೇಳುತ್ತಾರೆ.
ದಾಖಲೆಗಳಿಂದಲೂ ಕಂಡು ಬರುತ್ತದೆ. ಭೂ ದಾಖಲೆಗಳು ಹೀಗಿರುವಾಗ ಖಾನಾಪೂರ ತಹಸೀಲ್ದಾರರು ಕರ್ನಾಟಕ ಭೂ ಕಂದಾಯ ನಿಯಮಗಳನ್ನು ಗಾಳಿಗೆ ತೂರಿ ದಿ: 15/10/2024 ರಂದು “ಊರಿನ ಎಲ್ಲ ಜನರು” ಎಂದು ರಿ.ಸ.ನಂ 03ರ ಪಹಣಿ ಪತ್ರಿಕೆಯಲ್ಲಿ ದಾಖಲ ಇರುವುದನ್ನು ಕಡಿಮೆ ಮಾಡಲು ಆದೇಶ ಮಾಡುವುದರ ಮೂಲಕ ಗಂಭೀರವಾದ ಕರ್ತವ್ಯ ಲೋಪ ಎಸಗಿರುವುದಲ್ಲದೇ ಸರಕಾರಕ್ಕೆ ಕೂಡಾ ಮೋಸ ಮಾಡಿರುತ್ತಾರೆ. ಇದು ಕರ್ತವ್ಯ ಲೋಪದ ಎಂದರು.
ರಾಯಬಾಗ ತಾಲೂಕಿನ ದೇವನಕಟ್ಟಿ ಗ್ರಾಮದ ಪ್ರಕರಣದ ಕುರಿತು ದಿ:
23/09/2024 ರಂದೇ ಸರಕಾರಕ್ಕೆ ದೂರು ಸಲ್ಲಿಸಿದ್ದರೂ ಇದುವರೆಗೂ ಯಾವುದೇ ಕ್ರಮ ಜರುಗಿಸದೇ ಇರುವುದು ಸರಕಾರದ ನಿರ್ಲಕ್ಷಕ್ಕೆ ಸಾಕ್ಷಿಯಾಗಿದೆ. 2015 ರಲ್ಲಿಯೂ ನಸಲಾಪೂರ ಗ್ರಾಮಕ್ಕೆ ಸೇರಿದ 114 ಎಕರೆ 34 ಗುಮಟೆ ಸರಕಾರಿ ಜಮೀನಕ್ಕೆ ಸಂಬಂದಿಸಿದಂತೆ “ಅಪಸಾತ ಡಿಕ್ರಿ ಮಾಡಿದ್ದ ಪ್ರಕರಣದಲ್ಲಿ ರಾಯಬಾಗ ಹಿರಿಯ ದಿವಾಣಿ ನ್ಯಾಯಾಲಯದ ನ್ಯಾಯಾಧೀಶರೊಬ್ಬರು ಅಮಾನತ್ತುಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಸೇವೆಯಿಂದ
ಒಟ್ಟಾರೆಯಾಗಿ ಸರಕಾರಕ್ಕೆ ಸೇರಿದ ಜಮೀನುಗಳು ಎಂದು ದಾಖಲೆಗಳು ಹೇಳುತ್ತಿದ್ದರೂ ಕೂಡಾ 762 ಎಕರೆ 20 ಗುಂಟೆ ಜಮೀನವನ್ನು ಕರ್ನಾಟಕ ಸರಕಾರ ಎಂದು ದಾಖಲಿಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದನ್ನು ಗಮನಿಸಿದರೆ ಜಿಲ್ಲೆಯಲ್ಲಿ ನಡೆದಿರುವ ಈ ಎರಡೂ ಭೂ ಹಗರಣಗಳ ಹಿಂದೆ ಸಚಿವರುಗಳು ಹಾಗೂ ಪ್ರಭಾವಿ ರಾಜಕಾರಣಿಗಳ ಕೈವಾಡ ಇರಬಹುದಾಗಿದೆ ಎಂದು ಜನ ಸಾಮಾನ್ಯರು ಮಾತನಾಡುತ್ತಿದ್ದಾರೆ.
ಕಾರಣ ಇನ್ನು ಮೇಲಾದರೂ ವಿರೋಧ ಪಕ್ಷಗಳು ಕೆಲವು ದಿನ ಮುಡಾ ಹಗರಣ, ವಕ್ಷ ಹಗರಣಗಳ ಬಗ್ಗೆ ಮಾತನಾಡುವುದನ್ನು ಬಿಟ್ಟು ಬೆಳಗಾವಿ ಜಿಲ್ಲೆಯ ಈ ಬೃಹತ್ ಭೂಹಗರಣದ ಬಗ್ಗೆ ಮಾತನಾಡಿದರೆ ಆವಾಗಲಾದರೂ ಸರಕಾರಕ್ಕೆ ಸೇರಿದ 762 ಎಕರೆ 20 ಗುಂಟೆ ಜಮೀನು ಸರಕಾರಕ್ಕೆ ಉಳಿಯಬಹುದಾಗಿದೆ ಎನ್ನುವುದು ಜಿಲ್ಲೆಯ ಜನರ ಆಶಯವಾಗಿದೆ ಎಂದು ನುಡಿದರು….