Headlines

ಪಾಲಿಕೆಯಲ್ಲಿ ಪಾರದರ್ಶಕತೆ- ಪ್ರಗತಿಗೆ ಹೊಸ ದಾರಿ


ಪಾಲಿಕೆಯಲ್ಲಿ ಪಾರದರ್ಶಕತೆ- ಪ್ರಗತಿಗೆ ಹೊಸ ದಾರಿ

ಬೆಳಗಾವಿ. ಗಡಿನಾಡ ಮಹಾನಗರ ಪಾಲಿಕೆಯಲ್ಲಿ ಹಲವು ವರ್ಷಗಳಿಂದಲೂ ಆಡಳಿತಾತ್ಮಕ ಜಡತೆ, ವಿಳಂಬಿತ ಯೋಜನೆಗಳು, ಸಾರ್ವಜನಿಕ ಅಸಮಾಧಾನ ಇತ್ಯಾದಿಗಳ ಮಧ್ಯೆ ಹೊಸದೊಂದು ನಂಬಿಕೆಯ ಬೆಳಕು ಕಾಣಿಸಿದೆ.
ನಂಬಿಕೆಗೆ ಕಾರಣ-
ಆಯುಕ್ತೆ ಶುಭಾ ಬಿ ಮತ್ತು ನೂತನ ಆಡಳಿತ ಮಂಡಳಿ.!
ಅವರ ನಿರ್ದಿಷ್ಟ ಧೋರಣೆಗಳು ಮತ್ತು ಕಾರ್ಯಪ್ರವೃತ್ತತೆ ಈ ಎಲ್ಲಕ್ಕೂ ಕಾರಣ

ಬೆಳಗಾವಿ ಮಹಾನಗರ ಪಾಲಿಕೆಯ ಕೆಲ ಶಾಖೆಗಳಲ್ಲಿ ಆನೆ ನಡೆದಿದ್ದೇ ದಾರಿ ಎನ್ನುವ ವಾತಾವರಣವಿತ್ತು. ಅಂದರೆ ಅಲ್ಲಿ ಅವರು ಸರ್ಕಾರಕ್ಕಿಂತ ಸುಪ್ರೀಂ ಎನ್ನುವ ರೀತಿಯಲ್ಲಿದ್ದರು.
ಹಿರಿಯ ಅಧಿಕಾರಿಗಳು ಪ್ರಶ್ನೆ ಮಾಡಿದರೆ, ಸಚಿವರ, ಶಾಸಕರ ಹೆಸರು ಹೇಳಿ ಬೀಸೋ ದೊಣ್ಣೆಯಿಂದ ಪಾರಾಗುವ ಕೆಲಸ ಮಾಡುತ್ತಿದ್ದರು.
ಆದರೆ ಈಗ‌ ಅದೆಲ್ಲಕ್ಕೂ ಬ್ರೆಕ್ ಬಿದ್ದಿದೆ.

ಅಂತಹ ವಿಷಯಗಳು ಬಂದಾಗ ಆಯುಕ್ತರು‌ ಸೇರಿದಂತೆ ನೂತನ ಮೇಯರ್ ಮಂಗೇಶ್ ಪವಾರ್, ಉಪಮೇಯರ್ ವಾಣಿ ಜೋಶಿ ಅವರು ಸಂಬಂಧಿಸಿದವರನ್ನು ಖುದ್ದು ಸಂಪರ್ಕಿಸುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಮೈಗಳ್ಳರಿಗೆ ಒಂಥರಾ ಇರಿಸು ಮುರಿಸು ಶುರುವಾಗಿದೆ. ಅಷ್ಟೇ ಅಲ್ಲ ಮೈಬಗ್ಗಿಸಿ ಕೆಲಸ ಮಾಡಬೇಕಾದ ಅನಿವಾರ್ಯತೆ ಬಂದಿದೆ.

ಪಾರದರ್ಶಕ ಆಡಳಿತಕ್ಕೆ ಪ್ರಾಥಮ್ಯ
ಗಮನಿಸಬೇಕಾದ ವಿಷಯವೆಂದರೆ ನೂತನ ಮೇಯರ್, ಉಪಮೇಯರ್ ಆಯ್ಕೆಯಾದ ನಂತರ ಅವರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನುಗ್ಗುತ್ತಿದ್ದಾರೆ. ಯಾವುದೇ ರೀತಿಯ ಅನಗತ್ಯ ವಿವಾದಕ್ಕೆ ಆಸ್ಪದಕೊಡದೇ ಅಭಿವೃದ್ಧಿ ಪರ ಕೆಲಸವನ್ನು ಮುನ್ನಡೆಸಿಕೊಂಡು ಹೊರಟಿದ್ದಾರೆ.
ಆಯುಕ್ತೆ ಶುಭ ಅವರೂ ಸಹ ಅಧಿಕಾರಕ್ಕೆ ಬಂದ ನಂತರ “ಸಾರ್ವಜನಿಕರ ಹಣ ಖರ್ಚಾಗುತ್ತಿರುವ ಪ್ರತಿಯೊಂದು ಯೋಜನೆಯ ಮಾಹಿತಿ ಜನರಿಗೆ ಲಭ್ಯವಿರಬೇಕು” ಎನ್ನುವ ನಿಟ್ಟಿನಲ್ಲಿ ಕಾರ್ಯಗಳನ್ನು ಮಾಡುತ್ತಿದ್ದಾರೆ.
ಎಲ್ಲ ಪ್ರಮುಖ ಯೋಜನೆಗಳ ಟೆಂಡರ್ ವಿವರಗಳು, . ಪ್ರಗತಿ ಮಾಹಿತಿಗಳು, ಖರ್ಚಿನ ಲೆಕ್ಕಪತ್ರಗಳು ಈಗ ಬೆಳಗಾವಿಗರಿಗೆ ಲಭ್ಯವಿರಬೇಕು ಎನ್ನುವ ನಿಟ್ಟಿನಲ್ಲಿ ವೆಬ್‌ಸೈಟ್‌ನಲ್ಲಿ ಅಪ್‌ಡೇಟ್ ಮಾಡುವ ಕೆಲಸ ವ್ಯವಸ್ಥಿತವಾಗಿ ನಡೆದಿದೆ.
ವಾರ್ಡ್ ಮಟ್ಟದ ಅಧಿಕಾರಿ ಸಭೆಗಳನ್ನು ಆನ್‌ಲೈನ್‌ನಲ್ಲಿ ಪ್ರಸಾರ ಮಾಡುವ ಪ್ರಯೋಗ ಆರಂಭಗೊಂಡಿದೆ.

ಘನತ್ಯಾಜ್ಯ ನಿರ್ವಹಣೆಯಲ್ಲಿ ಸುಧಾರಣೆ

ಕಸದ ಬದಲು ಸಂಪತ್ತು” ಎಂಬ ಅಭಿಯಾನದಿಂದಾಗಿ ಬರೋಬ್ಬರಿ 120 ಟನ್‌ನಷ್ಟು ಖಾದ್ಯಜಾತ ತ್ಯಾಜ್ಯವನ್ನು ತ್ಯಾಜ್ಯದಿಂದ ಕಂಪೋಸ್ಟ್ ಮಾಡಲು ಸಾರ್ವಜನಿಕರಿಗೆ ಸ್ಪಷ್ಟ ಮಾರ್ಗಸೂಚಿ ಜಾರಿಗೊಳಿಸಲಾಗುತ್ತಿದೆ.

ಈ ನಿಟ್ಡಿನಲ್ಲಿ ಒಣ ಕಸ ಮತ್ತು ಹೊಸ ಕಸ ಬೇರ್ಪಡಿಸುವ ಬಗ್ಗೆ ಜನರಿಗೆ ತಿಳುವಳಿಕೆ ನೀಡುವ ನಿಟ್ಟಿನಲ್ಲಿ ಅಭಿಯಾನ ನಡೆದಿದೆ. ಇದರಲ್ಲಿ ಮೇಯರ್ ಮಂಗೇಶ ಪವಾರ, ಉಪಮೇಯರ್ ವಾಣಿ ಜೋಶಿ ಸೇರಿದಂತೆ ಖುದ್ದು ಎಲ್ಲ ನಗರ ಸೇವಕರು ಭಾಗಿಯಾಗುತ್ತಿದ್ದಾರೆ.

ಅವ್ಯವಹಾರದ ವಿರುದ್ಧ ಶಿಸ್ತು ಕ್ರಮ
ಪಾಲಿಕೆಯ ಒಳ ಹಂತದಲ್ಲಿ ದೀರ್ಘಕಾಲದಿಂದ ನಡೆದುಕೊಂಡು ಬಂದಿದ್ದ ಲಂಚಬಾಕರ ವಿರುದ್ಧ ಕ್ರಮ ಕೈಗೊಂಡು, ಕೆಲ ಸಿಬ್ಬಂದಿಗೆ ಎರಡೆರಡು ಬಾರಿ ನೋಟೀಸ್ ನೀಡಿ ಎಚ್ಚರಿಕೆ ಕೊಡುವ ಕೆಲಸವನ್ನು ಆಯುಕ್ತರು ಮಾಡಿದ್ದಾರೆ. ಅಷ್ಟೇ ಅಲ್ಲ ಅಂತಹವರನ್ನು ಯಾವುದೇ ಮುಲಾಜಿಲ್ಲದೇ ತಕ್ಷಣವೇ ಎತ್ತಂಗಡಿ ಮಾಡಿದ ಹೆಗ್ಗಳಿಕೆ ಆಯುಕ್ತರಿಗೆ ಇದೆ.
ಇದರ ಜೊತೆಗೆಸಾರ್ವಜನಿಕ ದೂರುಗಳ ಆಧಾರದ ಮೇಲೆ ‘ಆಂತರಿಕ ತನಿಖೆಗೂ ಅವರು ಮುಂದಾಗಿದ್ದಾರೆ . ತೀರಾ ಇತ್ತೀಚೆಗೆ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ಸದಸ್ಯರೆಲ್ಲರು ಕಂದಾಯ ಶಾಖೆಯ ಭ್ರಷ್ಟಾಚಾರ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಆಡಳಿತ ಪಕ್ಷದ ಸದಸ್ಯರು ಮತ್ತು ಖುದ್ದು ಶಾಸಕ ಅಭಯ ಪಾಟೀಲರು ಪರಿಷತ್ ಸಭಾಗ್ರಹದಲ್ಲೇ ಅದೇ ಕಂದಾಯ ಶಾಖೆಯಲ್ಲಿನ‌ ಕಾರಳ ಮುಖವನ್ನು ಬಿಚ್ಚಿಟ್ಟಿದ್ದರು.
ಈ ಹಿನ್ನೆಲೆಯಲ್ಲಿ ಆಯುಕ್ತರು ಸಹ ಈ‌ ಬಗ್ಗೆ ಸರ್ಕಾರಕ್ಕೆ ಅಗತ್ಯ ದಾಖಲೆ ಸಮೇತ ವರದಿ ಸಲ್ಲಿಸುವ ಸಾಧ್ಯತೆ ಇದೆ.

ರಸ್ತೆಗಳು ಮತ್ತು ಕಾಮಗಾರಿಗಳಲ್ಲಿ ವೇಗ

ಹಲವು ವರ್ಷಗಳಿಂದ ವಿಳಂಬವಾದ ರಸ್ತೆ ಅಭಿವೃದ್ಧಿ ಯೋಜನೆಗಳಿಗೆ ಗುರ್ತಿಸಿ ‘ಡೆಡ್‌ಲೈನ್‌’ ವ್ಯವಸ್ಥೆ ಜಾರಿಗೆ ಬಂದಿದೆ.
ನಗರದ ಬಹುತೇಕ ಕಾಮಗಾರಿಗಳಿಗೆ ಟೈಂಲೈನ್ ಮೂಲಕ ಟ್ರ್ಯಾಕ್ ಮಾಡಲಾಗುತ್ತಿದ್ದು, ಸಾರ್ವಜನಿಕರಿಗೂ ನೋಟಿಸ್ ಮೂಲಕ ಮಾಹಿತಿ ನೀಡಲಾಗುತ್ತಿದೆ.

ಆಯುಕ್ತರಾಗಿ ಶುಭಾ ಬಿ ಅಧಿಕಾರಕ್ಕೆ ಬಂದ ನಂತರ, ಮಹಾನಗರ ಪಾಲಿಕೆಯು ಪಾರದರ್ಶಕ ಆಡಳಿತದ ಮಾದರಿ ರೂಪದತ್ತ ಹೆಜ್ಜೆ ಇಟ್ಟಿದ ಭ್ರಷ್ಟಾಚಾರ, ವಿಳಂಬ, ಅಜಾಗರೂಕತೆಗಳ ವಿರುದ್ಧ ತಮ್ಮ ನಿರ್ಧಾರಗಳು ಧೈರ್ಯವಂತಿಕೆಯ ಸೂಚನೆ. ಜನಸಾಮಾನ್ಯರು ಈ ಬದಲಾವಣೆಗೆ ಸ್ಪಂದಿಸುತ್ತಿದ್ದು, ಮುಂದಿನ ದಿನಗಳಲ್ಲಿ ಈ ಪ್ರಯತ್ನಗಳು ಇನ್ನಷ್ಟು ಬಿರುದು ತಂದುಕೊಡುವ ನಿರೀಕ್ಷೆಯಿದೆ.

ಕಿಂಗ್ ಮೇಕರ್..!

ಬೆಳಗಾವಿ ಮಹಾನಗರ ಪಾಲಿಕೆಗೆ ಶಾಸಕ ಅಭಯಪಾಟೀಲ ಕಿಂಗ್ ಮೇಕರ್ ಎನ್ನುವುದರಲ್ಲಿ ಎರಡು ಮಾತಿಲ್ಲ.

ಮಾತಿನಲ್ಲಿ ಸ್ವಲ್ಪ ಒರಟುತನ ಕಂಡರೂ ಅಭಿವೃದ್ಧಿ ವಿಷಯದಲ್ಲಿ ಇಟ್ಟ ಹೆಜ್ಜೆ ಹಿಂದೆ ಇಟ್ಟವರಲ್ಲ. ಈ ಹಿಂದೆ ರಾಜ್ಯದಲ್ಲಿ ತಮ್ಮದೇ ಪಕ್ಷದ ಸರ್ಕಾರ ಇದ್ದಾಗಲೂ ಕೂಡ ನೇಕಾರರ ವಿಷಯದಲ್ಲಿ ಆಗ ಜಿಲ್ಲಾ ಮಂತ್ರಿಗಳ ,ಜೊತೆ ವಾದಕ್ಕಿಳಿದಿದ್ದರು.

ಒಂದು ರೀತಿಯಲ್ಲಿ ಜಿದ್ದಿಮನುಷ್ಯ ಎಂದೇ ಹೆಸರು ಮಾಡಿದ ಅಭಯ ಪಾಟೀಲರು, ಪಾಲಿಕೆಯ ನೂತನ ಮೇಯರ್ ಮತ್ತು ಉಪಮೇಯರ್ ಗೆ ಅಭಿವೃದ್ಧಿ ಪಾಠ ಹೇಳಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಪಾಲಿಕೆ ಕೆಲಸಗಳು ನಡೆದಿವೆ.

Leave a Reply

Your email address will not be published. Required fields are marked *

error: Content is protected !!