
ಗ್ರಾಪಂಗಳಿಂದ ₹110 ಕೋಟಿ ತೆರಿಗೆ ಸಂಗ್ರಹ: ಜಿಪಂ ಸಿಇಒ ರಾಹುಲ ಶಿಂಧೆ ವಿವರ
— ಗ್ರಾಮೀಣ ಆಧುನೀಕರಣದ ಹಾದಿಯಲ್ಲಿ ಬೆಳಗಾವಿ ಜಿಲ್ಲೆ
ಬೆಳಗಾವಿ:
“2024-25ನೇ ಹಣಕಾಸು ವರ್ಷದಲ್ಲಿ ಬೆಳಗಾವಿ ಜಿಲ್ಲೆಯ 500ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳಿಂದ ₹110 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಲಾಗಿದೆ,” ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ ಶಿಂಧೆ ಮಂಗಳವಾರ ಹೇಳಿದರು.

ನಗರದ ವಾರ್ತಾಭವನದಲ್ಲಿ ಬೆಳಗಾವಿ ಪತ್ರಕರ್ತರ (ಮುದ್ರಣ ಮಾಧ್ಯಮ) ಸಂಘವು ಆಯೋಜಿಸಿದ್ದ ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಅವರು, “ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಂದ ಹಾಗೂ ಸಾಂಬ್ರಾ ವಿಮಾನ ನಿಲ್ದಾಣದಿಂದ ಬಾಕಿ ಉಖಿದಿದ್ದ 1 ಕೋಟಿ ತೆರಿಗೆ ಸಹ ಈಗಾಗಲೇ ಸಂಗ್ರಹಿಸಲಾಗಿದೆ. ಪ್ರತಿವರ್ಷ ಈ ವಿಮಾನ ನಿಲ್ದಾಣದಿಂದ ₹45 ಲಕ್ಷ ತೆರಿಗೆ ಬರುತ್ತದೆ,” ಎಂದು ವಿವರಿಸಿದರು.

ಉಳಿತಾಯದ ನೂತನ ಮಾದರಿ:
ಗ್ರಾಪಂಗಳ ಮಟ್ಟದಲ್ಲಿ ಅಕ್ರಮ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದು, ನಿಷ್ಪ್ರಯೋಜಕ ಬೋರವೆಲ್‌ಗಳ ವಿದ್ಯುತ್ ಸಂಪರ್ಕ ಕೈಬಿಡುವುದು, ಬೀದಿಗಳಲ್ಲಿ ಎಲ್‌ಇಡಿ ಬಲ್ಬ್ ಬಳಕೆಯಂತಹ ಕ್ರಮಗಳ ಮೂಲಕ ಜಿಲ್ಲೆಯಲ್ಲಿ ಸುಮಾರು ₹13 ಕೋಟಿ ಹಣ ಉಳಿತಾಯ ಮಾಡಲಾಗಿದೆ ಎಂದು ಅವರು ತಿಳಿಸಿದರು.

ನರೇಗಾ ಯೋಜನೆಯಲ್ಲೂ ಪ್ರಗತಿ:
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (MGNREGA) ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲೂ ಪ್ರಗತಿ ಮಾಡಲಾಗಿದೆ..
ಪುರುಷ ಮತ್ತು ಮಹಿಳೆಯರಿಗೆ ಸಮಾನ ವೇತನ ಪಾವತಿ, ಶೇ. 57ರಷ್ಟು ಮಹಿಳಾ ಪಾಲ್ಗೊಳ್ಳಿಕೆ, ಹಾಗೂ ಶಾಲಾ ಕಂಪೌಂಡ್, ಚರಂಡಿ ನಿರ್ಮಾಣದ ಕೆಲಸಗಳ ಮೂಲಕ ಯೋಜನೆಯ ನ್ನು ವಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗಲಾಗುತ್ತಿದೆ ಎಂದರು.

“ಈ ಯೋಜನೆಯಡಿ 1.10 ಕೋಟಿ ಮಾನವ ದಿನಗಳು ಸೃಷ್ಟಿಯಾಗಿದ್ದು, ಈ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತಿದೆ. ಹಿಂದೆ ಇದ್ದ ನ್ಯೂನ್ಯತೆಗಳನ್ನು ಸರಿಪಡಿಸಲಾಗಿದೆ. ಓಂಬಡ್ಸ್‌ಮನ್ ನೇಮಕ ಕೂಡ ಆಗಿದೆ,” ಎಂದು ಶಿಂಧೆ ಹೇಳಿದರು.
ಸ್ವಚ್ಛ ಭಾರತ: ಶೌಚಾಲಯ ಬಳಕೆಯತ್ತ ಹಾದಿ
ಗ್ರಾಮೀಣ ಭಾಗದಲ್ಲಿ ಶೌಚಾಲಯ ನಿರ್ಮಾಣಕ್ಕೆ ₹20,000 ಅನುದಾನ ನೀಡಲಾಗುತ್ತಿದ್ದು, ಜಾಗೃತಿಯ ಅಭಿಯಾನವೂ ಕೈಗೊಂಡು ಗ್ರಾಮಗಳನ್ನು ಬಯಲು ಶೌಚ ಮುಕ್ತಗೊಳಿಸುವಲ್ಲಿ ನಿರಂತರ ಪ್ರಯತ್ನ ನಡೆಯುತ್ತಿದೆ. “ಇದ್ದ ಶೌಚಾಲಯವನ್ನು ಬಳಕೆಗೆ ಮುಕ್ತಾಯವಾಗದ ದೃಷ್ಟಿಯಿಂದ ಜಾಗೃತಿ ಅಭಿಯಾನಕ್ಕೂ ಹೆಚ್ಚು ಒತ್ತು ನೀಡಲಾಗಿದೆ,” ಎಂದು ಅವರು ತಿಳಿಸಿದರು.
ಟ್ಯಾಂಕರ್ ಮುಕ್ತ ಬೆಳಗಾವಿ:

ಬೇಸಿಗೆ ದಿನಗಳಲ್ಲಿ ಬೆಳಗಾವಿ ಜಿಲ್ಲೆಯ 257 ಗ್ರಾಮಗಳು ಕುಡಿಯುವ ನೀರಿನ ಸಮಸ್ಯೆಗೆ ಒಳಪಟ್ಟಿದ್ರೂ, ರಾಜ್ಯದ ಇತರ ಜಿಲ್ಲೆಗಳ ಹೋಲಿಕೆಯಲ್ಲಿ ಟ್ಯಾಂಕರ್ ನೀರಿನ ಅವಲಂಬನೆ ಇಲ್ಲದ ಜಿಲ್ಲೆ ಎನ್ನುವ ಹೆಗ್ಗಳಿಕೆಗೆ ಬೆಳಗಾವಿ ಪಾತ್ರವಾಗಿದೆ. ಮುಂಜಾಗ್ರತಾ ಕ್ರಮವಾಗಿ ಟ್ಯಾಂಕರ್ ವ್ಯವಸ್ಥೆ ಎಲ್ಲ ಗ್ರಾಪಂಗಳಲ್ಲಿಯೂ ತಯಾರಾಗಿದ್ದರೂ, ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಅನುಷ್ಠಾನದಲ್ಲಿ ಇದ್ದು, ಕೆಲವಿವೆ ಪೂರ್ಣಗೊಳ್ಳುವ ಹಂತದಲ್ಲಿವೆ.
ಇ-ಆಸ್ತಿ ಅಭಿಯಾನ: ಡಿಜಿಟಲ್ ಅಭಿವೃದ್ಧಿಗೆ ಹೆಜ್ಜೆ
ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ‘ಇ-ಆಸ್ತಿ’ ಅಭಿಯಾನ ಆರಂಭಗೊಂಡಿದ್ದು, ಈವರೆಗೆ ಶೇ.20 ರಷ್ಟು ಆಸ್ತಿಗಳಿಗೆ ಇ-ಆಸ್ತಿ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಶಿಂಧೆ ಹೇಳಿದರು.
ಇದೇ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಪರವಾಗಿ ಶಾಲು ಹೊದಿಸಿ ಸನ್ಮಾನಿಸಲಾಯಿತು
ಕಾರ್ಯಕ್ರಮದ ಸಂದರ್ಭದಲ್ಲಿ ವಾರ್ತಾ ಇಲಾಖೆಯ ಉಪನಿರ್ದೇಶಕ ಗುರುನಾಥ ಕಡಬೂರ, ಪತ್ರಕರ್ತರ ಸಂಘದ ಅಧ್ಯಕ್ಷ ವಿಲಾಸ ಜೋಶಿ, ಉಪಾಧ್ಯಕ್ಷ ಶ್ರೀಶೈಲ ಮಠದ, ಹಾಗೂ ಹಲವು ಪತ್ರಕರ್ತರು ಉಪಸ್ಥಿತರಿದ್ದರು. ಕಾರ್ಯಕ್ರಮ ನಿರೂಪಣೆ ರವೀಂದ್ರ ಉಪ್ಪಾರ ನೆರವೇರಿಸಿದರು.

