ಬೈಲಹೊಂಗಲ:
“ಬಿಜೆಪಿಯವರು ಕೆಲಸ ಮಾಡದೇ ಪ್ರಚಾರ ಪಡೆಯುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಜನಪರ ಅಭಿವೃದ್ಧಿ ಕಾರ್ಯ ಮಾಡಿದ್ದರೂ ಅದರ ಮಾಹಿತಿ ಜನರಿಗೆ ತಲುಪುತ್ತಿಲ್ಲ. ಯುವ ಕಾರ್ಯಕರ್ತರು ಈ ದಿಕ್ಕಿನಲ್ಲಿ ತೊಡಗಿಕೊಂಡರೆ, ದೇಶ-ರಾಜ್ಯ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠಗೊಳಿಸಬಹುದು” ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಕರೆ ನೀಡಿದರು.
ಬೆಳಗಾವಿ ಜಿಲ್ಲಾ ಗ್ರಾಮೀಣ ಯುವ ಕಾಂಗ್ರೆಸ್ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ “ಯುವ ಪರ್ವ ಪ್ರತಿಜ್ಞೆ” ಸಮಾರಂಭವನ್ನು ಬೈಲಹೊಂಗಲದ ಬಿ.ಬಿ. ಗಣಾಚಾರಿ ಕಲ್ಯಾಣ ಮಂಟಪದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು,
“2028ರ ಚುನಾವಣೆ ಎದುರಿಸಲು ಈಗಲೇ ಸಜ್ಜಾಗಬೇಕು. ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸುವಲ್ಲಿ ಎಷ್ಟು ಹತ್ತಿರರಾಗುತ್ತೀರೋ, ಅಷ್ಟೇ ಜನಪರ ನಾಯಕತ್ವ ಬೆಳೆಸಿಕೊಳ್ಳಲು ಸಾಧ್ಯ. ಕೇವಲ ಸಿಎಂ, ಸಚಿವರು ಬಂದಾಗ ಬ್ಯಾನರ್ ಅಂಟಿಸಿದರೆ ಸಾಲದು, ಪ್ರಾಮಾಣಿಕವಾಗಿ ಕೆಲಸ ಮಾಡಿದವರನ್ನು ಪಕ್ಷ ಖಂಡಿತ ಗುರುತಿಸುತ್ತದೆ,” ಎಂದರು.

“ *ಅಭಿವೃದ್ಧಿ ಪ್ರಚಾರಕ್ಕೂ ಆದ್ಯತೆ ಬೇಕು”*
“ಶಾಸಕ ಮಹಾಂತೇಶ ಕೌಜಲಗಿ ತಮ್ಮ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಆದರೆ ಜನತೆಗೆ ತಿಳಿಸುವ ಕಾರ್ಯವೇ ಆಗಿಲ್ಲ. ಮುಂದೆಯಾದರೂ ಯುವ ಕಾಂಗ್ರೆಸ್ ಕಾರ್ಯಕರ್ತರು ಕ್ಷೇತ್ರದಲ್ಲಿ ನಡೆದ ಅಭಿವೃದ್ಧಿ ಕೆಲಸಗಳನ್ನು ಮನೆಮಾತಾಗಿಸಬೇಕು,” ಎಂದು ಅವರು ತಿಳಿಸಿದರು.
“ *ಪಕ್ಷ ಸಂಘಟನೆಯಲ್ಲಿ ಯುವ ನಾಯಕರ ಪಾತ್ರ ನಿರ್ಣಾಯಕ”*

ಕಾಂಗ್ರೆಸ್ ಪಕ್ಷದಲ್ಲಿ 25 ಘಟಕಗಳಿದ್ದು, ಯುವ ಕಾಂಗ್ರೆಸ್ ಅವುಗಳಲ್ಲಿ ಪ್ರಮುಖ. ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಆಯ್ಕೆಯಾದ ಪದಾಧಿಕಾರಿಗಳು ಸಂಘಟನೆಯ ಹಿತಾಸಕ್ತಿಗೆ ಶ್ರಮಿಸಬೇಕು ಎಂದು ಸಚಿವರು ಸಲಹೆ ನೀಡಿದರು.
“ *ಕಾಂಗ್ರೆಸ್ ಪುನರ್ ಅಧಿಕಾರಕ್ಕೆ ಯುವ ಶಕ್ತಿ ಅಗತ್ಯ”*
ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಗೌಡ ಮಾತನಾಡಿ, “2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವಲ್ಲಿ ಯುವ ಕಾಂಗ್ರೆಸ್ ಶ್ರಮ ಅಡಕವಾಗಿದೆ. ಮುಂದಿನ 2028ರ ಚುನಾವಣೆಯಲ್ಲೂ ಯುವ ಕಾರ್ಯಕರ್ತರ ಶ್ರಮ ಮಹತ್ವದ್ದಾಗಿರಲಿದೆ. ಬೆಳಗಾವಿ ಜಿಲ್ಲೆ ಸ್ವಾತಂತ್ರ್ಯ ಹೋರಾಟದ ಶೌರ್ಯ ನೆಲವಾಗಿದ್ದು, ಮಹಾತ್ಮ ಗಾಂಧೀಜಿ ಕಾಲಿಟ್ಟ ನೆಲದಲ್ಲಿ ನಾವು ಆದರ್ಶ ರಾಜಕೀಯ ನಡೆಸಬೇಕು” ಎಂದರು.
“ *ಯುವ ಕಾಂಗ್ರೆಸ್‌ಗೆ ಬೆಂಬಲ ಸದಾ”*
ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, “ನಿಮ್ಮ ಶ್ರಮವೇ ಕಾಂಗ್ರೆಸ್ ಬಲವರ್ಧನೆಯ ಬುನಾದಿ. ಸರ್ಕಾರದ ಯೋಜನೆಗಳನ್ನು ಜನತೆಗೆ ತಲುಪಿಸುವ ಕಾರ್ಯವನ್ನು ಯುವಕರೇ ಮಾಡಬೇಕು,” ಎಂದು ಕರೆ ನೀಡಿದರು.
ಸಚಿವ ಸತೀಶ್ ಜಾರಕಿಹೊಳಿ, ನಿರೀಕ್ಷೆಯಿಲ್ಲದೆ ಹಗಲಿರುಳು ಶ್ರಮಿಸುತ್ತಿರುವ ಯುವ ನಾಯಕ ಕಾರ್ತೀಕ್ ಪಾಟೀಲ ಅವರನ್ನು “ಸರಳ, ನಿಷ್ಠಾವಂತ ಯುವ ನಾಯಕ” ಎಂದು ಹೊಗಳಿ, ಭವಿಷ್ಯದಲ್ಲಿ ಉನ್ನತ ಹುದ್ದೆ ನೀಡಲು ಪಕ್ಷದ ಬೆಂಬಲ ಸಿಗಲಿದೆ ಎಂದು ಭರವಸೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿದರು. ಈ ವೇಳೆ, ನೂತನ ಪದಾಧಿಕಾರಿಗಳಿಗೆ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಗೌಡ ಪ್ರಮಾಣವಚನ ಬೋಧಿಸಿದರು.
ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿ, ಶಾಸಕರಾದ ಬಾಬಾ ಸಾಹೇಬ್ ಪಾಟೀಲ್, ವಿಶ್ವಾಸ್ ವೈದ್ಯ, ಜಿಲ್ಲಾ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ಕಾರ್ತೀಕ್ ಪಾಟೀಲ, ಭಾರತೀಯ ಯುವ ಕಾಂಗ್ರೆಸ್ ಉಸ್ತುವಾರಿ ನಿಗಮ್ ಬಂಡಾರಿ, ಜಿಲ್ಲಾ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ವಿನಯ್ ನಾವಲಗಟ್ಟಿ, ಮುಖಂಡ ಮಹಾಂತೇಶ ಕಡ್ಡಾಡಿ, ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಅಬ್ದುಲ್ ದೇಸಾಯಿ, ಮೃಣಾಳ ಹೆಬ್ಬಾಳ್ಕರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

