ಬೆಳಗಾವಿ : ಛತ್ತೀಸ್‌ಗಢ ಪೊಲೀಸ್‌ಗಳಿಂದ ಕ್ಯಾಥೋಲಿಕ್ ಸನ್ಯಾಸಿನಿಯರನ್ನು ಬಂಧಿಸಿರುವುದನ್ನು ಬೆಳಗಾವಿ ಧರ್ಮಪ್ರಾಂತ್ಯದ ಬಿಷಪ್ ಡಾ. ಡೆರಿಕ್ ಫರ್ನಾಂಡಿಸ್ ಖಂಡಿಸಿದ್ದಾರೆ.,
ಬಂಧಿತ ಸನ್ಯಾಸಿನಿಯರು ಮತ್ತು ಯುವಕನಿಗಾಗಿ ಪ್ರಾರ್ಥಿಸಲು ಹಾಗೂ ಈ ಬಂಧನದ ವಿರುದ್ಧ ಧ್ವನಿ ಎತ್ತಲು ಕ್ರೈಸ್ತರು ಮತ್ತು ನಾಗರಿಕ ಸಮಾಜದ ಪ್ರತಿಯೊಬ್ಬರೂ ಮುಂದಾಗಬೇಕೆಂದು ಮನವಿ ಮಾಡಿದ್ದಾರೆ.
ಕೆರಳದ ಇಬ್ಬರು ಕ್ಯಾಥೋಲಿಕ್ ಸನ್ಯಾಸಿನಿಯರಾದ ಸಿಸ್ಟರ್ ಪ್ರೀತಿ ಮೇರಿ, ಸಿಸ್ಟರ್ ವಂದನಾ ಫ್ರಾನ್ಸಿಸ್ ಹಾಗೂ ಯುವಕ ಸುಕಮಾನ ಮಂಡಾವಿ ಅವರನ್ನು ಛತ್ತೀಸ್‌ಗಢದ ದುರ್ಗ್ ರೈಲ್ವೇ ನಿಲ್ದಾಣದಲ್ಲಿ ಮಾನವ ಸಾಗಣೆ ಹಾಗೂ ಹುಡುಗಿಯರನ್ನು ಮತಾಂತರಿಸಲು ಯತ್ನಿಸಿದರೆಂಬ ನಕಲಿ ಆರೋಪದ ಮೇಲೆ ಬಂಧಿಸಲಾಗಿದೆ.

ಈ ಮೂವರು ಮೇರಿ ಇಮ್ಮಾಕುಲೇಟ್ ಸಮೂಹದ ಅಸ್ಸಿಸಿ ಸಿಸ್ಟರ್‌ಗಳ ಸಮುದಾಯಕ್ಕೆ ಸೇರಿದ್ದಾಗಿ ತಿಳಿಸಲಾಗಿದೆ.
“ಈ ಸಮೂಹದ ಸಿಸ್ಟರ್‌ಗಳು ಬಾಗಲಕೋಟೆ ಧರ್ಮಪ್ರಾಂತ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆಂದರು. ಈ ಘಟನೆ ದೇಶದಾದ್ಯಂತ ಆಕ್ರೋಶಕ್ಕೆ ಹಾಗೂ ಪ್ರತಿಭಟನೆಗೆ ಕಾರಣವಾಗಿದೆ ಬೆಳಗಾವಿಯ ಧರ್ಮಪ್ರಾಂತ್ಯದ ಕ್ರೈಸ್ತ ಸಮುದಾಯವೂ ಇತರರ ಜೊತೆ ಸೇರಿ ನಿರಪರಾಧ ಸನ್ಯಾಸಿನಿಯರು ಮತ್ತು ಯುವಕನ ವಿರುದ್ಧ ನಡೆದಿರುವ ಇಂತಹ ಕ್ರೂರ ಕ್ರಮವನ್ನು ಘೋರವಾಗಿ ಖಂಡಿಸುತ್ತದೆ,” ಎಂದು ಬಿಷಪ್ ಫರ್ನಾಂಡಿಸ್ ತಿಳಿಸಿದ್ದಾರೆ.
ಇತ್ತೀಚೆಗೆ ಇಂತಹ ಘಟನೆಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇವುಗಳನ್ನು ತಡೆಯಲು ಇತ್ತೀಚೆಯೇ ನಾವು ಸಂಘಟಿತವಾಗಿ ಧ್ವನಿ ಎತ್ತಬೇಕಾದ ಅವಶ್ಯಕತೆ ಇದೆ,” ಎಂದು ಬಿಷಪ್ ಡೆರಿಕ್ ಫರ್ನಾಂಡಿಸ್ ತಿಳಿಸಿದ್ದಾರೆ.