ಬೆಳಗಾವಿ: ಹಿಂದೂ ಸಮಾಜದ ಭಕ್ತಿ ಕೇಂದ್ರವಾದ ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಇತ್ತೀಚೆಗೆ ಪ್ರಚಾರವಾಗುತ್ತಿರುವ ಇಲ್ಲಸಲ್ಲದ ಆರೋಪಗಳನ್ನು ಖಂಡಿಸಿ ಆಗಸ್ಟ್ 19 ರಂದು ಬೆಳಗಾವಿಯಲ್ಲಿ ಬೃಹತ್ ಮೌನ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ.
ಶನಿವಾರ ಸಂಜೆ ಬೆಳಗಾವಿಯ ಧರ್ಮನಾಥ ಭವನದಲ್ಲಿ ವಿವಿಧ ಸಮಾಜಮುಖಂಡರು, ಜನಪ್ರತಿನಿಧಿಗಳು ಹಾಗೂ ರಾಜಕೀಯ ಪಕ್ಷಗಳ ನಾಯಕರ ಸಮ್ಮುಖದಲ್ಲಿ ಸಭೆ ಸೇರಿ ಈ ನಿರ್ಧಾರ ಕೈಗೊಳ್ಳಲಾಯಿತು.

ಸಭೆಯಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮಾಜಿ ಸಂಸದ ಅಮರಸಿಂಹ ಪಾಟೀಲ, ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಮಾಜಿ ಶಾಸಕ ಅನಿಲ ಬೆನಕೆ, ಬೆಳಗಾವಿ ಮಹಾಪೌರ ಮಂಗೇಶ ಪವಾರ, ಶಾಸಕರು ವಿಠ್ಠಲ ಹಲಗೇಕರ ಮತ್ತು ಅಭಯ ಪಾಟೀಲ ಸೇರಿದಂತೆ ಅನೇಕ ಪ್ರಮುಖರು ಧರ್ಮಸ್ಥಳ ಕ್ಷೇತ್ರದ ವಿರುದ್ಧ ನಡೆಯುತ್ತಿರುವ ಅವಹೇಳನಕಾರಿ ಪ್ರಚಾರವನ್ನು ತೀವ್ರವಾಗಿ ಖಂಡಿಸಿದರು.
ಭಕ್ತರ ನಂಬಿಕೆಗಳಿಗೆ ಧಕ್ಕೆ ತರುವ ಈ ಘಟನೆ ಹಿಂದೂ ಸಮಾಜವನ್ನೇ ಗುರಿಯಾಗಿಸಿಕೊಂಡಿರುವ ವ್ಯವಸ್ಥಿತ ಷಡ್ಯಂತ್ರ ಎಂದು ವಕ್ತಾರರು ಅಭಿಪ್ರಾಯಪಟ್ಟರು. ತನಿಖೆಯ ಹೆಸರಿನಲ್ಲಿ ಕ್ಷೇತ್ರದ ಹೆಸರಿಗೆ ಕಳಂಕ ತರುವ ಕಾರ್ಯವನ್ನು ತಕ್ಷಣ ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದರು.

, ಕಾಂಗ್ರೆಸ್ ಪಕ್ಷದ ಜನರಲ್ ಸೆಕ್ರೆಟರಿ ಸುನಿಲ್ ಹನಮಣ್ಣವರ, ಬೈಲಹೊಂಗಲದ ಸಮಾಜಸೇವಕ ಗುರು ಮೆಟಗುಡ್ಡ, ಹಿರಿಯ ವಕೀಲ ರವಿರಾಜ ಪಾಟೀಲ ಮೊದಲಾದವರು ಸಭೆಯಲ್ಲಿ ಹಾಜರಿದ್ದು, ಧರ್ಮಸ್ಥಳ ಕ್ಷೇತ್ರದ ವಿರುದ್ದದ ಸುಳ್ಳು ಪ್ರಚಾರವನ್ನು ಖಂಡಿಸಿ ತಮ್ಮ ಧ್ವನಿಯನ್ನು ಸೇರಿಸಿದರು.
ಸಮಸ್ತ ಹಿಂದೂ ಸಮಾಜ ಒಗ್ಗಟ್ಟಿನಿಂದ ಈ ಹೀನ ಕೃತ್ಯಕ್ಕೆ ಪ್ರತಿಕ್ರಿಯಿಸಬೇಕಿದೆ ಎಂದು ಸಭೆಯ ವಕ್ತಾರರು ಒತ್ತಿಹೇಳಿದರು.
ಮುಂಬರುವ ಮಂಗಳವಾರ, ಆಗಸ್ಟ್ 19ರಂದು ಬೆಳಗಾವಿಯಲ್ಲಿ ಸಾವಿರಾರು ಭಕ್ತರು, ಸಮಾಜ ಮುಖಂಡರು ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಬೃಹತ್ ಮೌನ ಪ್ರತಿಭಟನೆ ನಡೆಯಲಿದೆ.

ಪ್ರಾಸ್ತಾವಿಕವಾಗಿ ವಿನೋದ ದೊಡ್ಡಣ್ಣವರ ಮಾತನಾಡಿದರು. ಕುಂತಿನಾಥ ಕಲಮನಿ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.

