ಬೆಳಗಾವಿ: ಮಳೆ ಆರ್ಭಟಕ್ಕೆ ಬೆಳಗಾವಿ ಜಿಲ್ಲೆ ಮತ್ತೆ ಒದ್ದೆಯಾಗಿದೆ. ಆಗಸ್ಟ್ 19 ಮತ್ತು 20ರಂದು ಭಾರತ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿರುವ ಹಿನ್ನೆಲೆಯಲ್ಲಿ, ಜಿಲ್ಲೆ ಪೂರ್ತಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ನಿರಂತರ ಮಳೆಯಿಂದ ಘಟಪ್ರಭಾ, ಕೃಷ್ಣಾ, ದೂಧಗಂಗಾ, ಹಿರಣ್ಯಕೇಶಿ, ಮಾರ್ಕಂಡೇಯ ಹಾಗೂ ಮಲಪ್ರಭಾ ನದಿಗಳು ಅಪಾಯ ಮಟ್ಟ ಮೀರಿದ್ದು, ನದಿ ತೀರದ ಜನರು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ತೆರಳಬೇಕೆಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಕೋರಿದ್ದಾರೆ.

ಸಚಿವರು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ, ಹಿಡಕಲ್ ಜಲಾಶಯ ಸಂಪೂರ್ಣ ತುಂಬಿಕೊಂಡಿದ್ದು ಪ್ರತಿದಿನ ಸಾವಿರಾರು ಕ್ಯೂಸೆಕ್ ನೀರು ಒಳಹರಿಯುತ್ತಿದೆ. ಈಗಾಗಲೇ 25,000 ಕ್ಕೂ ಹೆಚ್ಚು ಕ್ಯೂಸೆಕ್ ನೀರು ಹೊರಬಿಡಲಾಗಿದೆ. ಹಿರಣ್ಯಕೇಶಿ, ಮಾರ್ಕಂಡೇಯ ಹಾಗೂ ಬಳ್ಳಾರಿ ನಾಲಾ ಸೇರಿ ಘಟಪ್ರಭಾಗೆ ಮಾತ್ರವೇ ಸುಮಾರು 40,000 ಕ್ಯೂಸೆಕ್ ನೀರು ಸೇರುತ್ತಿರುವುದರಿಂದ ಪ್ರವಾಹದ ಭೀತಿ ಗಂಭೀರವಾಗಿದೆ ಎಂದು ಎಚ್ಚರಿಸಿದ್ದಾರೆ.
“ಕೃಷ್ಣಾ ಮತ್ತು ಹಿರಣ್ಯಕೇಶಿ ನದಿಗಳು ಅಪಾಯ ಮಟ್ಟ ಮೀರಿರುವುದರಿಂದ ರೈತರು ಹಾಗೂ ನಾಗರಿಕರು ಸ್ಥಳಾಂತರಗೊಳ್ಳುವುದನ್ನು ನಿರ್ಲಕ್ಷಿಸದೆ ತಕ್ಷಣ ಕ್ರಮ ಕೈಗೊಳ್ಳಬೇಕು. ಈಗಾಗಲೇ ಹಲವಾರು ಸೇತುವೆಗಳು ಜಲಾವೃತವಾಗಿರುವುದರಿಂದ ಸಂಚಾರದಲ್ಲೂ ಹೆಚ್ಚಿನ ಎಚ್ಚರಿಕೆ ಅಗತ್ಯ,” ಎಂದು ಸಚಿವರು ತಿಳಿಸಿದ್ದಾರೆ.

